ನೂಪುರ್ ಶರ್ಮಾ ಬಗ್ಗೆ ನೀಡಿದ ಹೇಳಿಕೆ ಪ್ರಕರಣ
ಹೊಸ ದೆಹಲಿ : ‘ಉದಯಪುರ ಘಟನೆಗೆ (ಕನ್ಹೈಯ್ಯಾಲಾಲ್ ಹತ್ಯೆ) ನೂಪುರ್ ಶರ್ಮಾರವರೇ ಕಾರಣ’ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಪಾರಡಿವಾಲಾ ಅವರ ಮೇಲೆ ಮಹಾಭಿಯೋಗ ನಡೆಸುವಂತೆ ಒತ್ತಾಯಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಹಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಈ ಬಗ್ಗೆ ‘ಹಿಂದೂ ಐಟಿ ಸೆಲ್’ನ ವಿಕಾಸ್ ಪಾಂಡೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಸಹಿಗಳ ಮನವಿಯನ್ನು ಸಂಸದರಿಗೆ ನೀಡಲಾಗುವುದು ಎಂದರು. ಈ ನಿಟ್ಟಿನಲ್ಲಿ change.org ಜಾಲತಾಣದಿಂದ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ ೧೦ ಸಾವಿರ ಜನರು ಸಹಿ ಮಾಡಿದ್ದಾರೆ.
ಮಹಾಭಿಯೋಗ ಎಂದರೇನು ?
ಸಂವಿಧಾನದ ೧೨೪ (೪) ನೇ ವಿಧಿಯು ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ದೋಷಾರೋಪಣೆಗೆ ಅವಕಾಶ ನೀಡುತ್ತದೆ. ಇದರಲ್ಲಿ ಅಸಮರ್ಥತೆ ಮತ್ತು ದುರ್ನಡತೆಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ಅದು ಹೇಳಿದೆ. ಸೆಕ್ಷನ್ ೧೨೪ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಹ ವ್ಯವಸ್ಥೆ ಮಾಡಿದೆ.