‘ದೇವಸ್ಥಾನಗಳು ಸರಕಾರದ ಸಂಪತ್ತು !’ (ಅಂತೆ)

ಕರ್ನಾಟಕದ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಕಾಂಗ್ರೆಸ್ಸಿನ ವಿರೋಧ !

ರಾಜ್ಯದಲ್ಲಿನ ಚರ್ಚ್ ಮತ್ತು ಮಸೀದಿಗಳೂ ಸರಕಾರದ ಸಂಪತ್ತಲ್ಲವೇ ? ಕೇವಲ ಹಿಂದೂಗಳ ದೇವಸ್ಥಾನಗಳನ್ನು ಸರಕಾರದ ಸಂಪತ್ತು ಎಂದು ಹೇಳುವ ಮೊಘಲರ ವಂಶಜರಾದ ಕಾಂಗ್ರೆಸ್ಸಿನವರನ್ನು ಗಮನದಲ್ಲಿಡಿ ಮತ್ತು ಅವರಿಗೆ ಚುನಾವಣೆಯ ಸಮಯದಲ್ಲಿ ಪಾಠ ಕಲಿಸಿ !

’ದೇವಸ್ಥಾನಗಳ ಸಂಪತ್ತನ್ನು ರಾಜಕೋಶದಲ್ಲಿ ಜಮೆ ಮಾಡಿದರೆ ರಾಜಕೋಶವು ನಾಶವಾಗುತ್ತದೆ’, ಎಂದು ಹಿಂದೂಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ದೇಶದ ಮೇಲೆ ಹಾಗೂ ಅನೇಕ ರಾಜ್ಯಗಳಲ್ಲಿ ಅತ್ಯಂತ ಹೆಚ್ಚಿನ ಸಮಯದವರೆಗೆ ಕಾಂಗ್ರೆಸ್ಸಿನ ಆಡಳಿತ ಇದ್ದಿದ್ದರಿಂದ ಭಾರತದ ಮೇಲೆ ಕೋಟ್ಯಂತರ ರೂಪಾಯಿಗಳ ಸಾಲವಿದೆ, ಎಂಬುದನ್ನು ಗಮನದಲ್ಲಿಡಿ !

ಭ್ರಷ್ಟಾಚಾರಿ ರಾಜಕಾರಣಿಗಳು ಪ್ರತಿದಿನ ಸ್ವಂತದ ಸಂಪತ್ತನ್ನು ಹೆಚ್ಚಿಸುತ್ತಾರೆ ಮತ್ತು ದೇವಸ್ಥಾನಗಳ ಸಂಪತ್ತನ್ನು ಸರಕಾರದಲ್ಲಿ ಜಮೆ ಮಾಡಿ ಅವುಗಳನ್ನೂ ಕೊಳ್ಳೆ ಹೊಡೆಯುತ್ತಾರೆ !

ಬೆಂಗಳೂರು – ಕರ್ನಾಟಕದ ಭಾಜಪ ಸರಕಾರವು ರಾಜ್ಯದಲ್ಲಿನ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವ ಬಗ್ಗೆ ಘೋಷಿಸಿದ ನಂತರ ಕಾಂಗ್ರೆಸ್ ಇದನ್ನು ವಿರೋಧಿಸಿದೆ. ಕಾಂಗ್ರೆಸ್ಸಿನ ಕರ್ನಾಟಕ ಪ್ರದೇಶಾಧ್ಯಕ್ಷರಾದ ಡಿ. ಕೆ. ಶಿವಕುಮಾರರವರು ‘ಸರಕಾರವು ಒಂದು ಐತಿಹಾಸಿಕ ತಪ್ಪನ್ನು ಮಾಡುತ್ತಿದೆ. (ದೇವಸ್ಥಾನಗಳ ಸರಕಾರೀಕರಣ ಮಾಡಿರುವುದೇ ಈಗಿನ ಎಲ್ಲ ಪಕ್ಷಗಳು ಮಾಡಿರುವ ಐತಿಹಾಸಿಕ ತಪ್ಪಾಗಿದೆ. ಈ ತಪ್ಪನ್ನು ರಾಜ್ಯದ ಭಾಜಪ ಸರಕಾರವು ಸುಧಾರಿಸುತ್ತಿದ್ದರೆ ಅದು ಯೋಗ್ಯವೇ ಆಗಿದೆ – ಸಂಪಾದಕರು) ಕಾಂಗ್ರೆಸ್ ಇಂತಹ ತಪ್ಪಾಗಲು ಬಿಡುವುದಿಲ್ಲ. ಧಾರ್ಮಿಕ ದತ್ತಿ ವಿಭಾಗ ಮತ್ತು ಸರಕಾರವು ಈ ಸ್ಥಳೀಯ ಜನರಿಗೆ ದೇವಸ್ಥಾನಗಳ ಆಡಳಿತವನ್ನು ಹೇಗೆ ನೀಡಬಲ್ಲದು ? ಇದು ಸರಕಾರದ ಸಂಪತ್ತಾಗಿದೆ. ಈ ದೇವಸ್ಥಾನಗಳು ಕೋಟ್ಯಂತರ ರೂಪಾಯಿಗಳನ್ನು ಜಮೆ ಮಾಡಿವೆ. (ಈ ಕೋಟ್ಯಂತರ ರೂಪಾಯಿಗಳನ್ನು ಹಿಂದೂ ಭಾವಿಕರು ದೇವತೆಗೆ ಅರ್ಪಿಸಿದ್ದಾರೆಯೇ ಹೊರತು ಸರಕಾರಕ್ಕೆ ಅಲ್ಲ ಎಂಬುದನ್ನು ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ನೇತಾರರು ಶಾಶ್ವತವಾಗಿ ಗಮನದಲ್ಲಿಡಬೇಕು ! ಈ ಹಣವನ್ನು ಹಿಂದೂ ಧರ್ಮಕ್ಕಾಗಿ ಖರ್ಚು ಮಾಡಬೇಕು ! ಸರಕಾರವು ಜನತೆಯಿಂದ ಪಡೆದ ತೆರಿಗೆಯಿಂದ ವಿಕಾಸದ ಕೆಲಸಗಳನ್ನು ಮಾಡಬೇಕು. ಇದಕ್ಕಾಗಿ ದೇವಸ್ಥಾನಗಳ ಹಣದ ಕಡೆಗೆ ಅವರು ಗಮನವಿಡಬಾರದು – ಸಂಪಾದಕರು) ಇತರ ರಾಜ್ಯಗಳ ಕಡೆಗೆ ನೋಡಿ ಅವರು (ಭಾಜಪ ಸರಕಾರ) ಯಾವ ರಾಜಕೀಯ ಭೂಮಿಕೆಯನ್ನು ತಾಳಲು ಪ್ರಯತ್ನಿಸುತ್ತಿದ್ದಾರೆ ? ಜನವರಿ ೪ ರಂದು ನಾವು ಎಲ್ಲ ವರಿಷ್ಠ ಕಾಂಗ್ರೆಸ್ ನೇತಾರರ ಸಭೆ ನಡೆಸಲಿದ್ದೇವೆ. ಅಲ್ಲಿ ನಾವು ಇದರ ಮೇಲೆ ಚರ್ಚಿಸಿ ನಮ್ಮ ಭೂಮಿಕೆಯನ್ನು ಮಂಡಿಸುತ್ತೇವೆ’, ಎಂದು ಹೇಳಿದರು. (ಕಾಂಗ್ರೆಸ್ಸಿನವರು ಈ ಸಭೆಯಲ್ಲಿ ಚರ್ಚ್ ಮತ್ತು ಮಸೀದಿಗಳ ಸಂಪತ್ತಿನ ವಿಷಯದಲ್ಲಿಯೂ ಚರ್ಚೆ ಮಾಡಿ ಹಿಂದೂಗಳಿಗೆ ತಿಳಿಸಬೇಕು ! – ಸಂಪಾದಕರು)

೧. ಕರ್ನಾಟಕ ರಾಜ್ಯದಲ್ಲಿನ ಒಟ್ಟು ೩೪ ಸಾವಿರದ ೫೬೩ ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುತ್ತವೆ. ಈ ದೇವಸ್ಥಾನಗಳಿಗೆ ಅವುಗಳ ಆದಾಯದ ಆಧಾರದಲ್ಲಿ ’ಎ’, ’ಬಿ’, ’ಸಿ’ ಎಂಬ ಶ್ರೇಣಿಯಲ್ಲಿ ವಿಂಗಡಿಸಲಾಗಿದೆ. (ಮಸೀದಿ ಮತ್ತು ಚರ್ಚುಗಳನ್ನು ಈ ರೀತಿಯಲ್ಲಿ ವರ್ಗೀಕರಿಸುವ ಸದ್ಬುದ್ಧಿಯು ಧಾರ್ಮಿಕ ದತ್ತಿ ಇಲಾಖೆಗೆ ಏಕೆ ಬರಲಿಲ್ಲ ? – ಸಂಪಾದಕರು)

೨. ೨೫ ಲಕ್ಷಕ್ಕಿಂತಲೂ ಹೆಚ್ಚಿನ ವಾರ್ಷಿಕ ಉತ್ಪನ್ನವಿರುವ ಒಟ್ಟು ೨೦೭ ದೇವಸ್ಥಾನಗಳು ’ಎ’ ಶ್ರೇಣಿಯಲ್ಲಿ ಬರುತ್ತವೆ, ೫ ಲಕ್ಷದಿಂದ ೨೫ ಲಕ್ಷ ರೂಪಾಯಿಗಳವರೆಗಿನ ೧೩೯ ದೇವಸ್ಥಾನಗಳು ’ಬಿ’ ಶ್ರೇಣಿಯಲ್ಲಿ ಬರುತ್ತವೆ ಮತ್ತು ೫ ಲಕ್ಷಕ್ಕಿಂತಲೂ ಕಡಿಮೆ ವಾರ್ಷಿಕ ಆದಾಯವಿರುವ ೩೪ ಸಾವಿರದ ೧೧೭ ದೇವಸ್ಥಾನಗಳು ’ಸಿ’ ಶ್ರೇಣಿಯಲ್ಲಿ ಬರುತ್ತವೆ.