ಅಫಘಾನಿಸ್ತಾನಕ್ಕೆ ಸಹಾಯ ಮಾಡಲು ಒಮ್ಮತ !

ಅಫಘಾನ ಬಗ್ಗೆ ಭಾರತ ಸಹಿತ ೮ ದೇಶಗಳ ಸಭೆ

ನವ ದೆಹಲಿ – ಅಫಘಾನಿಸ್ತಾನದ ಸ್ಥಿತಿಯನ್ನು ಸುಧಾರಿಸಲು ಭಾರತದ ಮುಂದಾಳತ್ವದಲ್ಲಿ ಭಾರತ ಸಹಿತ ೮ ದೇಶಗಳ ಸಭೆಯು ನವೆಂಬರ್ ೧೦ ರಂದು ಆಯೋಜಿಸಲಾಗಿತ್ತು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಶಿಯಾ, ಇರಾನ್, ತಜಿಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಈ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ದರು. ಈ ಸಭೆಯಲ್ಲಿ ಎಲ್ಲ ದೇಶಗಳು ಅಫಘಾನಿಸ್ತಾನಕ್ಕೆ ನೆರವು ನೀಡುವ ಆಶ್ವಾಸನೆ ನೀಡಿದ್ದಾರೆ.

೧. ಸಭೆಯಲ್ಲಿ ಡೊವಾಲ್ ಇವರು ಮಾತನಾಡುತ್ತಾ, ಕೇವಲ ಅಫಘಾನಿಸ್ತಾನದ ಜನರಿಗಾಗಿ ಅಲ್ಲ, ನೆರೆಯ ದೇಶಕ್ಕಾಗಿಯೂ ಈ ಸಭೆ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಅಫಘಾನಿಸ್ತಾನಕ್ಕೆ ಸಹಾಯ ಮಾಡಲು ಮತ್ತು ನಮ್ಮ ಸಾಮೂಹಿಕ ಸುರಕ್ಷೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂಬ ನಂಬಿಕೆ ಇದೆ, ಎಂದರು.

೨. ತಾಜಿಕಿಸ್ತಾನದ ಭದ್ರತಾ ಪರಿಷತ್ತಿನ ಸಚಿವ ನಸರಲೊ ರಹಮತಜೋನ್ ಮಹಮೂದಜೊದಾ ಅವರು ಮಾತನಾಡುತ್ತಾ, ಅಫಘಾನಿಸ್ತಾನಕ್ಕೆ ಅಂಟಿಕೊಂಡು ನಮ್ಮ ದೊಡ್ಡ ಗಡಿ ಇದೆ. ಅಲ್ಲಿಂದ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ, ಭಯೋತ್ಪಾದನೆ ಮುಂತಾದ ಚಟಿವಟಿಕೆಗಳು ನಡೆಯುವ ಸಾಧ್ಯತೆ ಇದೆ, ನಾವು ನೆರೆಯ ದೇಶವಾಗಿರುವುದರಿಂದ ಅಫಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

೩. ಇರಾನ್‌ನ ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಚಿವ ಅಡ್ಮಿರಲ್ ಅಲಿ ಶಾಮಖಾನಿ ಇವರು ಮಾತನಾಡುತ್ತಾ, ಅಫಘಾನಿಸ್ತಾನದಲ್ಲಿ ನಿರಾಶ್ರಿತರ ಸಮಸ್ಯೆ ದೊಡ್ಡದಾಗಿದೆ. ಈ ಸಮಸ್ಯೆ ಪರಿಹರಿಸಲು ನಾವೆಲ್ಲರೂ ಒಟ್ಟಾಗಿ ಬರುವುದು ಆವಶ್ಯಕವಾಗಿದೆ ಎಂದು ಹೇಳಿದರು.

೪. ಕಜಾಕಿಸ್ತಾನ್, ಕಿರ್ಗಿಸ್ತಾನ್, ತುರ್ಕಮೇನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಇವುಗಳ ಪ್ರತಿನಿಧಿಗಳೂ ಈ ವಿಷಯವಾಗಿ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಎಲ್ಲರೂ ಅಫಘಾನಿಸ್ತಾನದ ಜನರಿಗೆ ಸಹಾಯ ಮಾಡುವ ಅಂಶಕ್ಕೆ ಅನುಮೋದನೆ ನೀಡಿದರು.