ಬೆಂಗಳೂರಿನಲ್ಲಿ ನಕಲಿ ಕೊರೋನಾ ಪ್ರಮಾಣ ಪತ್ರ ನೀಡಿದ ವೈದ್ಯರಿಬ್ಬರ ಬಂಧನ

ಇಂತಹ ದೇಶದ್ರೋಹಿಗಳನ್ನು ಸರಕಾರ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು !

ಬೆಂಗಳೂರು – ಜನರಿಗೆ ನಕಲಿ ಕೊರೋನಾ ಪ್ರಮಾಣಪತ್ರಗಳನ್ನು ನೀಡುತ್ತಿದ್ದ ಹಾಗೂ ರೆಮಡೆಸಿವಿರ್ ಚುಚ್ಚುಮದ್ದಿನ ಕಾಳಸಂತೆಯನ್ನು ಮಾಡುವ ಚಾಮರಾಜಪೇಟೆಯಲ್ಲಿನ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ೨ ವೈದ್ಯರನ್ನು ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಡಾ. ಬಿ. ಶೇಖರ ಮತ್ತು ಡಾ. ಪ್ರಜ್ವಲಾ ಎಂದು ಅವರ ಹೆಸರುಗಳಿವೆ. ಡಾ. ಬಿ. ಶೇಖರ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿಯಾಗಿದ್ದಾರೆ. ಅವರೊಂದಿಗೆ ಅವರ ಇಬ್ಬರು ಸಹಚರರಾದ ಕಿಶೋರ ಜಿ ಮತ್ತು ಮೋಹನ ವೈ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ವೈದ್ಯರಿಬ್ಬರೂ ಕಿಶೋರ್ ಮತ್ತು ಮೋಹನ್ ಅವರೊಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಕಿಶೋರ ಮತ್ತು ಮೋಹನ ಇವರು ತಮ್ಮಲ್ಲಿ ಬರುತ್ತಿದ್ದ ರೋಗಿಗಳಿಗೆ ಚಾಮರಾಜಪೇಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವಂತೆ ಸಲಹೆ ನೀಡುತ್ತಿದ್ದರು. ಅಲ್ಲಿ ಡಾ. ಬಿ. ಶೇಖರ ಮತ್ತು ಡಾ. ಪ್ರಜ್ವಲಾ ರೋಗಿಗಳಿಂದ ೫೦೦ ರೂಪಾಯಿ ತೆಗೆದುಕೊಂಡು ಅವರಿಗೆ ಕೊರೋನಾಗೆ ಸಂಬಂಧಿಸಿದ ಆರ್‍ಟಿ-ಪಿಸಿಆರ್ ಪರೀಕ್ಷೆಯ ನಕರಾತ್ಮಕ (ನೆಗೆಟೀವ್) ವರದಿಯನ್ನು ನೀಡುತ್ತಿದ್ದರು. ಈ ಗ್ಯಾಂಗ್ ರೆಮಡೆಸಿವಿರ್ ಇಂಜೆಕ್ಷನ್ ಅನ್ನು ೨೫ ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.