ಬಕ್ಸರ (ಬಿಹಾರ) ದಲ್ಲಿ ಗಂಗಾ ನದಿಯ ದಡಕ್ಕೆ ಹರಿದು ಬಂದ ೪೦ ಕ್ಕೂ ಹೆಚ್ಚು ಶವಗಳು !

ಅಂತ್ಯಸಂಸ್ಕಾರಕ್ಕೆ ಕಟ್ಟಿಗೆಗಳು ಸಿಗದೇ ಇದ್ದರಿಂದ ಶವಗಳನ್ನು ನದಿಯಲ್ಲಿ ಬಿಡಲಾಗುತ್ತಿದೆ !

ರಾಜ್ಯ ಆಡಳಿತವು ನಿದ್ರೆ ಮಾಡುತ್ತಿದೆಯೇ ? ಈ ದೇಹಗಳು ಕೊರೋನಾ ಸೋಂಕಿನಿಂದ ಮೃತಪಟ್ಟವರ ದೇಹವಾಗಿದ್ದರೆ, ಅದು ಇನ್ನೂ ಹೆಚ್ಚು ಗಂಭೀರವಾಗಿದೆ. ಒಂದುವೇಳೆ ಅಂತ್ಯಸಂಸ್ಕಾರಕ್ಕಾಗಿ ಕಟ್ಟಿಗೆಗಳು ಲಭ್ಯವಿಲ್ಲದಿದ್ದರೆ, ಅದನ್ನು ಒದಗಿಸುವುದು ಆಡಳಿತದ ಜವಾಬ್ದಾರಿಯಾಗಿದೆ. ಅದನ್ನು ನಿರ್ವಹಿಸದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಬಕ್ಸರ್ (ಬಿಹಾರ) – ಕಳೆದ ೨-೩ ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿಯಲ್ಲಿ ಅನೇಕ ಮೃತದೇಹಗಳು ಪತ್ತೆಯಾಗುತ್ತಿವೆ. ಈ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುವ ಬದಲು ಅವುಗಳನ್ನು ನದಿಯಲ್ಲಿ ಬಿಡಲಾಗುತ್ತಿದೆ. ಇದನ್ನು ಪರಂಪರೆಗನುಸಾರ ಈ ರಾಜ್ಯಗಳಲ್ಲಿ ಮಾಡಲಾಗುತ್ತಿದ್ದರೂ, ಈಗ ಈ ಸಂಖ್ಯೆಯಲ್ಲಿ ಬಹಳ ಹೆಚ್ಚಳವಾಗುತ್ತಿರುವುದು ಕಂಡು ಬರುತ್ತದೆ. ಬಕ್ಸರ್‌ನ ಚೌಸಾದ ಮಹಾದೇವ ಘಾಟ್‌ನಲ್ಲಿ ೪೦ ಕ್ಕೂ ಹೆಚ್ಚು ಶವಗಳು ತೇಲಿ ಬರುತ್ತಿರುವುದು ಕಂಡುಬಂದಿದೆ. ಮೃತ್ಯು ಹೊಂದಿದ ಈ ಜನರಿಗೆ ಕೊರೊನಾ ಆಗಿರಬಹುದು ಎಂದು ಹೇಳಲಾಗುತ್ತದೆ; ಆದರೆ, ಶವಪರೀಕ್ಷೆ ಮಾಡದೇ ಇದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಆಡಳಿತವು ಹೇಳಿದೆ. ಶವಗಳು ಬಿಹಾರದಿಂದಲ್ಲ, ಉತ್ತರ ಪ್ರದೇಶದಿಂದ ಹರಿದು ಬಂದಿದೆ ಎಂದು ಬಿಹಾರ ಆಡಳಿತ ಮಂಡಳಿಯು ಹೇಳಿಕೊಂಡಿದೆ.

೧. ಪ್ರತಿದಿನ ೧೦೦ ರಿಂದ ೨೦೦ ಶವಗಳನ್ನು ಈ ಘಾಟ್‌ಗೆ ತರಲಾಗುತ್ತದೆ; ಆದರೆ, ಶವ ಸಂಸ್ಕಾರಕ್ಕೆ ಕಟ್ಟಿಗೆಯ ಕೊರತೆಯಿಂದ, ಮೃತರ ಸಂಬಂಧಿಕರು ಶವಗಳನ್ನು ನದಿಯಲ್ಲಿ ಬಿಡುತ್ತಾರೆ. ಇದನ್ನು ತಡೆಯಲು ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ನರೇಂದ್ರ ಕುಮಾರ ಮೌರ್ಯ ಹೇಳಿದರು.

ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ನದಿಯಲ್ಲಿ ಇದೇ ರೀತಿ ಮೃತದೇಹಗಳು ಹರಿದುಬಂದಿದೆ. ಈ ಹಿಂದೆ ಹಮೀರಪುರ ಮತ್ತು ಕಾನಪುರ ಜಿಲ್ಲೆಗಳಲ್ಲಿ ಗಂಗಾನದಿಯ ದಡದಲ್ಲಿ ಶವಗಳು ಪತ್ತೆಯಾಗಿದ್ದವು. ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯದ ಗ್ರಾಮಗಳಲ್ಲಿ ಕೊರೊನಾ ಪರೀಕ್ಷಾ ಸೌಲಭ್ಯಗಳ ಕೊರತೆ ಮತ್ತು ವೈದ್ಯರ ಕೊರತೆಯಿಂದ ಅನೇಕ ಜನರು ಕೊರೊನಾದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.