ಅಂತ್ಯ ಸಂಸ್ಕಾರಕ್ಕಾಗಿ ಸಾಲ ಮಾಡಿ ಸ್ಮಶಾನಭೂಮಿಯ ಸಿಬ್ಬಂದಿಗೆ ಲಂಚ ಕೊಟ್ಟ ಮಹಿಳೆ

ಸತ್ತವರ ನೆತ್ತಿಯ ಮೇಲಿನ ಬೆಣ್ಣೆ ತಿನ್ನುವಂತಹ ಸಿಬ್ಬಂದಿಯನ್ನು ಗಲ್ಲಿಗೇರಿಸುವ ಶಿಕ್ಷೆ ನೀಡಿ !

ಬೆಂಗಳೂರು – ಬೀದಿ ಬೀದಿ ವ್ಯಾಪಾರ ಮಾಡುವ ರಾಧಮ್ಮ ಹೆಸರಿನ ಮಹಿಳೆ ಬಡ್ಡಿ ಸಹಿತ ಸಾಲ ತಂದು ಆಯಂಬುಲೆನ್ಸ್‌ಗೆ ೫ ಸಾವಿರ ಹಾಗೂ ಚಿತಾಗಾರ ಸಿಬ್ಬಂದಿಗೆ ೩ ಸಾವಿರ ನೀಡಿ ಮೃತ ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿದ ದಾರುಣ ಘಟನೆಯು ಶುಕ್ರವಾರ ಯಲಹಂಕದ ಮೇಡಿ ಚಿತಾಗಾರದಲ್ಲಿ ನಡೆದಿದೆ.

ಶವವನ್ನು ಆಯಂಬುಲೆನ್ಸ್ ಮೂಲಕ ಯಲಹಂಕ ಮೇಡಿ ಚಿತಾಗಾರಕ್ಕೆ ತರಲಾಗಿತ್ತು. ಈ ವೇಳೆ ‘ಹಣ ನೀಡಿದರೆ ಮಾತ್ರ ಶವ ಅಂತ್ಯಕ್ರಿಯೆ ನೆರವೇರಿಸುವುದಾಗಿ’ ಚಿತಾಗಾರದ ಸಿಬ್ಬಂದಿಯು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆಂಬುಲೆನ್ಸ್ ಚಾಲಕನೂ ಹೆಚ್ಚು ಹಣ ಕೇಳಿದ್ದಾನೆ. ರಾಧಮ್ಮ ಕೈ ಮುಗಿದು ಕೇಳಿಕೊಂಡಿದ್ದಾರೆ. ಆದರೆ ಸಿಬ್ಬಂದಿ ಕೇಳಲಿಲ್ಲ. ಅನಿವಾರ್ಯವಾಗಿ ರಾಧಮ್ಮ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಬಡ್ಡಿಗೆ ಸಾಲ ತಂದು ಹಣ ನೀಡಿದ್ದಾರೆ.

ಹಣ ಪಡೆದ ಚಿತಾಗಾರ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ಪ್ರಜಾ ಪರಿವರ್ತನಾ ವೇದಿಕೆ ಸದಸ್ಯರು ಸ್ಥಳದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಬ್ಬಂದಿ ಹಾಗೂ ವೇದಿಕೆ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಡವರನ್ನು ದೋಚುವ ಚಿತಾಗಾರ ಸಿಬ್ಬಂದಿಗಳ ಸುಲಿಗೆ ನಿಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.