ದೇವಸ್ಥಾನದ ಆಡಳಿತವನ್ನು ಪಾರದರ್ಶಕವಾಗಿರಿಸುವ ದೃಷ್ಟಿಯಿಂದ ಪ್ರತಿಯೊಂದು ನಿರ್ಣಯದ ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ಕ್ಕೆ ಮಾಹಿತಿ ನೀಡಿ ! – ಧಾರ್ಮಿಕ ದತ್ತಿ ಇಲಾಖೆಯ ಉಪಾಯುಕ್ತರು

  • ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘದ ಆಂದೋಲನದ ಪರಿಣಾಮ

  • ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಆಯೋಜಿಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರ ಸಭೆಯಲ್ಲಿ ದೇವಸ್ಥಾನ ಮಹಾಸಂಘದ ಸಹಭಾಗ !

ಕೊಲ್ಲೂರು : ದೇವಸ್ಥಾನದ ಆಡಳಿತವನ್ನು ಪಾರದರ್ಶಕವಾಗಿರಿಸುವ ದೃಷ್ಟಿಯಿಂದ ಇಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯದ ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ಕ್ಕೆ ವಿವರವನ್ನು ಕೊಡಬೇಕೆಂದು ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರಾದ ಶ್ರೀ. ಜಯಪ್ರಕಾಶ ಇವರು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿಗೆ ಆದೇಶ ನೀಡಿದರು.

೨೦ ಮಾರ್ಚ್ ೨೦೨೧ ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾರ್ವಜನಿಕ ಕುಂದುಕೊರತೆಗಳು, ದೇವಸ್ಥಾನದ ಸ್ಥಿರಾಸ್ತಿ ಮತ್ತು ಚರಾಸ್ತಿ ನಿರ್ವಹಣೆಯ ಬಗ್ಗೆ, ಯಾತ್ರಾರ್ಥಿಗಳ ಸೌಲಭ್ಯ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರಾದ ಶ್ರೀ. ಜಯಪ್ರಕಾಶ ಇವರು, ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀ. ಮಹೇಶ, ತಹಶೀಲ್ದಾರರು, ದೇವಸ್ಥಾನದ ಸಿಬ್ಬಂದಿ ವರ್ಗ, ಭೂಮಾಪನ ಇಲಾಖೆಯ ಅಧಿಕಾರಿಗಳು ಇವರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮಹಾಸಂಘದ ಸದಸ್ಯರಾದ ಶ್ರೀ. ಮಧುಸೂದನ ಅಯಾರ, ಶ್ರೀ. ದಿನೇಶ ಎಂ.ಪಿ, ಶ್ರೀ. ಚಂದ್ರ ಮೊಗೇರ, ಶ್ರೀ. ಶ್ರೀನಿವಾಸ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯಕುಮಾರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಶ್ವನಾಥ ಹಾಗೂ ಶ್ರೀ. ದಿನೇಶ ಇವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಜಯಪ್ರಕಾಶ ಇವರು ಆದೇಶ ನೀಡಿದರು.
೧. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ೯ ಮಾರ್ಚ್ ೨೦೨೧ ರಂದು ಉಡುಪಿಯಲ್ಲಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ವತಿಯಿಂದ ಪತ್ರಿಕಾಗೋಷ್ಠಿಯ ಮೂಲಕ ಬಹಿರಂಗಪಡಿಸಲಾಗಿತ್ತು.
೨. ಪತ್ರಿಕಾಗೋಷ್ಠಿ ನಡೆದು ಸುಮಾರು ೧೦ ದಿನಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉಪಾಯುಕ್ತರ ಸಮ್ಮುಖದಲ್ಲಿ ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ಮಾಡಲು ೨೦ ಮಾರ್ಚ್ ೨೦೨೧ ರಂದು ಆಯೋಜನೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಹಾಸಂಘದ ವತಿಯಿಂದ ದೇವಸ್ಥಾನದಲ್ಲಿ ೨೦೦೫ ರಿಂದ ೨೦೧೯ ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶಗಳನ್ನು ಉಪ ಆಯುಕ್ತರ ಜೊತೆ ಚರ್ಚಿಸಲಾಯಿತು. ಆ ವೇಳೆಯಲ್ಲಿ ಉಪಾಯುಕ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

ಆಕ್ಷೇಪಿಸಿದ ಎಲ್ಲ ವಿಷಯಗಳ ಸಂದರ್ಭದಲ್ಲಿ ಸೂಕ್ತ ಕ್ರಮವನ್ನು ಕೈಗೊಂಡು ಅದನ್ನು ಸರಿಪಡಿಸುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟವನ್ನು ಮುಂದುವರೆಸುವುದು – ಗುರುಪ್ರಸಾದ ಗೌಡ, ರಾಜ್ಯ ವಕ್ತಾರರು, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ,

ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ ಇವರು, ನಮ್ಮ ಮನವಿಗೆ ಉಪಾಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲಿಯವರೆಗೆ ಮಹಾಸಂಘವು ಆಕ್ಷೇಪಿಸಿದ ಎಲ್ಲ ವಿಷಯಗಳ ಸಂದರ್ಭದಲ್ಲಿ ಸೂಕ್ತ ಕ್ರಮವನ್ನು ಕೈಗೊಂಡು ಅದನ್ನು ಸರಿಪಡಿಸುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟವನ್ನು ಮುಂದುವರೆಸುವುದು ಎಂದು ಹೇಳಿದರು.