ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆ ಪ್ರಸಾರವಾಗುತ್ತಿರುವುದರಿಂದ ಪ್ರತಿಯೊಂದು ವಿಷಯದ ಪರಿವೀಕ್ಷಣೆ ಆಗಬೇಕು! – ಸರ್ವೋಚ್ಚ ನ್ಯಾಯಾಲಯ

ಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತದೆ ? ಇದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೇ? ಈ ಹಿಂದೆ ವಿವಿಧ ಸಂಘಟನೆಗಳು ಇದನ್ನೇ ಒತ್ತಾಯಿಸಿವೆ. ಹಾಗಾಗಿ ತಡವಾದರೂ ಸರಿ ಸರ್ಕಾರ ನಿಯಮಗಳನ್ನು ಮಾಡಿದೆ; ಆದರೆ ನಿಯಮಗಳ ಉಲ್ಲಂಘನೆ ಮಾಡುವವರಿಗೆ ಕಠಿಣ ಶಿಕ್ಷೆಯಾಗುತ್ತದೆಯೇ ಎಂದು ಕಾದು ನೋಡಬೇಕು !

ನವದೆಹಲಿ: ‘ಓವರ್ ದಿ ಟಾಪ್’ ಅಂದರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆಯನ್ನು ಪ್ರಸಾರ ಮಾಡಲಾಗುತ್ತಿದೆ. ಆದ್ದರಿಂದ, ಅಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ‘ತಾಂಡವ್’ ವೆಬ್ ಸೀರೀಸ್ ಪ್ರಕರಣದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಪ್ರಸಾರ ವೇದಿಕೆಗಳನ್ನು ನಿಯಂತ್ರಿಸಲು ರೂಪಿಸಲಾದ ಹೊಸ ನಿಯಮಗಳನ್ನು ಪ್ರಸ್ತುತಪಡಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಅಮೆಜಾನ್ ಪ್ರೈಮ್‌ನ ಭಾರತದ ಮುಖ್ಯಸ್ಥ ಅಪರ್ಣಾ ಪುರೋಹಿತ್ ಅವರ ಮಧ್ಯಂತರ ಜಾಮೀನಿನ ವಿಚಾರಣೆಯ ವೇಳೆ ನ್ಯಾಯಾಲಯ ಈ ಆದೇಶವನ್ನು ಜಾರಿಗೊಳಿಸಿದೆ. ಮುಂದಿನ ವಾರ ಈ ವಿಷಯ ವಿಚಾರಣೆಗೆ ಬರಲಿದೆ.