ಓರ್ವ ನಿರ್ದಯಿ ಮತ್ತು ಮಹಾಪಾಪಿ ಬೇಟೆಗಾರನಿದ್ದನು. ಒಂದು ದಿನ ಅವನು ಬೇಟೆಗೆಂದು ಹೋಗುವಾಗ ದಾರಿಯಲ್ಲಿ ಒಂದು ಶಿವನ ದೇವಸ್ಥಾನವು ಕಾಣಿಸಿತು. ಅಂದು ಮಹಾ ಶಿವರಾತ್ರಿಯಾಗಿರುವುದರಿಂದ ಅಲ್ಲಿ ಭಕ್ತರು ಪೂಜೆ, ಭಜನೆ, ಕೀರ್ತನೆ ಇತ್ಯಾದಿಗಳನ್ನು ಮಾಡುತ್ತಿದ್ದರು. ಅದನ್ನು ನೋಡಿ ಆ ಬೇಟೆಗಾರನು, `ಕಲ್ಲನ್ನು ದೇವರೆಂದು ತಿಳಿದು `ಶಿವ ಶಿವ’ `ಹರ ಹರ’ ಎಂದು ಹೇಳುವ ಮೂರ್ಖ ಜನರು’ ಎಂದು ಅವರ ನಿಂದನೆಯನ್ನು ಮಾಡುತ್ತಾ ಬೇಟೆಗಾಗಿ ವನಕ್ಕೆ ಹೋದನು. ಬೇಟೆಯನ್ನು ನೋಡಲು ಅವನು ಒಂದು ಮರದ ಮೇಲೆ ಏರಿ ಕುಳಿತನು, ಆದರೆ ಮರಗಳ ಎಲೆಗಳಿಂದಾಗಿ ಅವನಿಗೆ ಬೇಟೆಯು ಕಾಣಿಸುತ್ತಿರಲಿಲ್ಲ. ಆಗ ಅವನು ಒಂದೊಂದು ಎಲೆಯನ್ನು ತೆಗೆದು ಕೆಳಗೆ ಎಸೆಯ ತೊಡಗಿದನು ಎಲೆಗಳನ್ನು ಎಸೆಯುವಾಗ ಅವನು `ಶಿವ ಶಿವ’ ಎಂದು ಹೇಳುತ್ತಿದ್ದನು. ಆ ಎಲೆಗಳು ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬೀಳುತ್ತಿದ್ದವು. ಬೆಳಗಿನ ಸಮಯದಲ್ಲಿ ಅವನಿಗೆ ಒಂದು ಜಿಂಕೆಯು ಕಾಣಿಸಿತು. ಬೇಟೆಗಾರನು ಅದಕ್ಕೆ ಬಾಣವನ್ನು ಬಿಡಲು ಸಿದ್ಧತೆಯನ್ನು ಮಾಡುವಾಗ ಆ ಜಿಂಕೆಯು ಅವನಿಗೆ, ಬಾಣವನ್ನು ಬಿಡಬೇಡವೆಂದು ವಿನಂತಿಸಿತು. ಪಾಪವನ್ನು ಮಾಡಿದರೆ ಏನಾಗುತ್ತದೆ ಎಂಬುದನ್ನು ಹೇಳಿ ಆ ಜಿಂಕೆಯು ಅಲ್ಲಿಂದ ಹೊರಟು ಹೋಯಿತು. ತನಗೆ ಅರಿವಿಲ್ಲದೇ ಆಗಿರುವ ಮಹಾಶಿವರಾತ್ರಿಯ ಜಾಗರಣೆ, ಶಿವನಿಗೆ ಮಾಡಿದ ಬಿಲ್ವಾರ್ಚನೆ ಮತ್ತು ಶಿವನ ಜಪ ಇವುಗಳಿಂದಾಗಿ ಆ ಬೇಟೆಗಾರನ ಎಲ್ಲ ಪಾಪಗಳು ನಾಶವಾಗಿ ಅವನಿಗೆ ಜ್ಞಾನಪ್ರಾಪ್ತವಾಯಿತು.
ಇದರಿಂದ ಅರಿವಿಲ್ಲದೇ ಮಾಡಿದ ಶಿವನ ಉಪಾಸನೆಯಿಂದ ಶಿವನು ಹೇಗೆ ಪ್ರಸನ್ನನಾಗುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ.
ವ್ರತದ ವಿಧಿ : ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಪ್ಪತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷ ಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಷೋಡಶೋಪಚಾರ ಪೂಜೆಯನ್ನು ಮಾಡಿ ಭವಭವಾನಿ ಪ್ರೀತ್ಯರ್ಥ ತರ್ಪಣವನ್ನು ನೀಡ ಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮ ಮಂತ್ರ ಸಹಿತ ಅರ್ಪಿಸಬೇಕು. ನಂತರ ಪುಷ್ಪಾಂಜಲಿಯನ್ನು ಅರ್ಪಿಸಿ ಅಘ್ರ್ಯ ನೀಡಬೇಕು. ಪೂಜೆ, ಸ್ತೋತ್ರ ಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.
‘ಮಹಾಶಿವರಾತ್ರಿಯ ದಿನದಂದು ಶಂಕರನಿಗೆ ಆಮ್ರಮಂಜಿರಿಯನ್ನೂ (ತುಳಸಿ) ಅರ್ಪಿಸುತ್ತಾರೆ.’ – ಗುರುದೇವ ಡಾ. ಕಾಟೇಸ್ವಾಮೀಜಿ
ಮಹಾಶಿವರಾತ್ರಿಯ ದಿನ ಹರ ಮತ್ತು ಹರಿ ಇಬ್ಬರೂ ಒಂದಾಗುತ್ತಾರೆ; ಆದುದರಿಂದ ಶಂಕರನಿಗೆ ತುಳಸಿ ಮತ್ತು ಶ್ರೀವಿಷ್ಣುವಿಗೆ ಬಿಲ್ವವನ್ನು ಅರ್ಪಿಸುತ್ತಾರೆ.
ಯಾಮಪೂಜೆ : ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮ ಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧತ್ತೂರಿ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅಘ್ರ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣ ಭೋಜನ ನೀಡಬೇಕು. ಆಶೀರ್ವಾದವನ್ನು ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.
(ಆಧಾರ : ಸನಾತನ ನಿರ್ಮಿತ ಗ್ರಂಥ `ಶಿವನ ಉಪಾಸನೆಯ ಹಿಂದಿನ ಶಾಸ್ತ್ರ’)