ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮನವರು ಮಂಗಳೂರಿನ ಆಶ್ರಮಕ್ಕೆ ಆಗಮನ

ಮಂಗಳೂರು – ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂದರೆ ದಿನಾಂಕ ೧೪ ಡಿಸೆಂಬರ್ ೨೦೨೦ ಈ ದಿನದಂದು ಸಂಜೆ ೪.೧೦ ಕ್ಕೆ ಮಂಗಳೂರು ಆಶ್ರಮಕ್ಕೆ ತುಮಕೂರಿನ ಶ್ರೀಮಹಾಲಕ್ಷ್ಮೀ ಮದ್ದರಲಕ್ಕಮ್ಮನವರ ದಿವ್ಯ ಆಗಮನವಾಯಿತು. ಈ ವೇಳೆ ದೇವಿಯೊಂದಿಗೆ ಧರ್ಮದರ್ಶಿಗಳಾದ ಶ್ರೀ. ಲಕ್ಷ್ಮೀಶ, ಆಧ್ಯಾತ್ಮಿಕ ಚಿಂತಕರೂ ಹಾಗೂ ಭಕ್ತರಾದ ಶ್ರೀ. ಪವನಕುಮಾರ ಯಜಮಾನ ಹಾಗೂ ಶ್ರೀ. ಅರುಣಕುಮಾರ ಮತ್ತು ಅರ್ಚಕರಾದ ಶ್ರೀ. ಸಿದ್ದೇಶ ಶಾಸ್ತ್ರಿಯವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಶ್ರೀ. ಗುರುಪ್ರಸಾದ ಗೌಡ ಇವರು ದೇವಿಗೆ ಆರತಿ ಬೆಳಗಿಸಿ ಪುಷ್ಪಹಾರವನ್ನು ಅರ್ಪಿಸಿ ಆಶ್ರಮದೊಳಗೆ ಸ್ವಾಗತಿಸಿದರು. ಕೊರೋನಾದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುತ್ತಾ ಸನಾತನದ ಸಂತರಾದ ಪೂ. ವಿನಾಯಕ ಕರ್ವೆ, ಪೂ. ರಮಾನಂದ ಗೌಡ ದೇವಿಯ ದರ್ಶನವನ್ನು ಪಡೆದರು. ಈ ವೇಳೆ ದೇವಿಯು ತನ್ನ ಭಕ್ತರ ಮಾಧ್ಯಮದಿಂದ ‘ಸನಾತನದ ಕಾರ್ಯವು ಉತ್ತರೋತ್ತರ ಹೆಚ್ಚಾಗಲಿ, ಎಂದು ಆಶೀರ್ವಾದ ಮಾಡಿದರು.

ಅದೇರೀತಿ ಈ ವೇಳೆ ಭಕ್ತರು, ಸನಾತನದ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಬಗ್ಗೆ ಶ್ಲಾಘಿಸುತ್ತಾ ಈ ಕಾರ್ಯವು ಅದ್ಭುತವಾಗಿದೆ ಎಂದರು. ನಾವೂ ನಿಮ್ಮ ಕಾರ್ಯದಲ್ಲಿ ಕೈಜೋಡಿಸುವೆವು. ನೀವೆಲ್ಲರು ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಎಂದರು. ಶ್ರೀ ದೇವಿಗೆ ಅರ್ಪಿಸಿದ್ದ ಹಿಂಗಾರವನ್ನು ಪ್ರಸಾದದ ರೂಪದಲ್ಲಿ ಸಾಧರಿಗೆ ನೀಡಿದರು. ಸನಾತನ ಸಂಸ್ಥೆಯ ಸೌ. ಮಂಜುಳಾ ಗೌಡ ಇವರು ದೇವಿಗೆ ಉಡಿ ತುಂಬಿಸಿದರು. ಪೂ. ರಮಾನಂದ ಗೌಡ ಹಾಗೂ ಪೂ. ಕರ್ವೆ ಮಾಮಾರವರು ದೇವಿಗೆ ಬಿಲ್ವಗಳನ್ನು ಅರ್ಪಿಸಿ ಆರತಿ ಮಾಡಿದರು. ಈ ವೇಳೆ ಚಾಮರಸೇವೆ ಇತ್ಯಾದಿಗಳಿಂದ ದೇವಿಗೆ ಉಪಚಾರ ಮಾಡಿದರು.