ಸಿಬಿಐ ವಶದಲ್ಲಿದ್ದ ೪೫ ಕೋಟಿ ರೂಪಾಯಿಗಳ ೧೦೩ ಕೆಜಿ ಚಿನ್ನ ಕಾಣೆ

೬ ತಿಂಗಳೊಳಗೆ ತನಿಖೆ ನಡೆಸುವಂತೆ ಮದ್ರಾಸ್ ಉಚ್ಚನ್ಯಾಯಾಲಯದ ಆದೇಶ

ದೇಶದ ಪ್ರಮುಖ ಭದ್ರತಾ ಸಂಸ್ಥೆಗಳಲ್ಲಿ ಒಂದು ಸೂಕ್ಷ್ಮ ಪ್ರಕರಣದಲ್ಲಿ ಇಂತಹ ಪಿತೂರಿ ನಡೆಯುತ್ತಿದ್ದರೆ, ಒಟ್ಟಾರೆ ಅವರ ಕೆಲಸ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಯೋಚಿಸದಿರುವುದು ಉತ್ತಮ ! ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯ !

ಚೆನ್ನೈ (ತಮಿಳುನಾಡು) – ಇಲ್ಲಿಯ ಒಂದು ದಾಳಿಯಲ್ಲಿ ಸಿಬಿಐ ವಶಪಡಿಸಿಕೊಂಡ ೧೦೩ ಕೆಜಿ ಚಿನ್ನ ನಾಪತ್ತೆಯಾಗಿದೆ. ಸಿಬಿಐ ವಶದಲ್ಲಿದ್ದಾಗ ೪೫ ಕೋಟಿ ರೂಪಾಯಿಗಳ ಚಿನ್ನ ಕಣ್ಮರೆಯಾದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸಿಬಿ-ಸಿಐಡಿಗೆ ಆದೇಶ ನೀಡಿದೆ. ‘ಈ ಎಲ್ಲಾ ಪ್ರಕರಣಗಳು ತನಿಖಾ ಸಂಸ್ಥೆಗಳ ಚಿತ್ರಣವನ್ನು ಕಳಂಕಿಸುತ್ತಿವೆ. ಆದ್ದರಿಂದ ಇದನ್ನು ೬ ತಿಂಗಳೊಳಗೆ ತನಿಖೆ ಮಾಡಬೇಕು’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

೨೦೧೨ ರಲ್ಲಿ ಚೆನ್ನೈನ ಸುರಾನಾ ಕಾರ್ಪೊರೇಶನ್ ಲಿಮಿಟೆಡ್ ಕಚೇರಿಯಿಂದ ೪೦೦.೫ ಕೆಜಿ ಚಿನ್ನದ ಇಟ್ಟಿಗೆ ಮತ್ತು ಆಭರಣ ರೂಪದಲ್ಲಿ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಚಿನ್ನವನ್ನು ಸಿಬಿಐನ ‘ಸೇಫ್ ಕಸ್ಟಡಿಯಲ್ಲಿ’ ಇಡಲಾಗಿತ್ತು. ಈಗ ೧೦೩ ಕೆಜಿ ಚಿನ್ನ ಕಾಣೆಯಾಗಿದೆ.