ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರಗೆ ಸಂಬಂಧಿಸಿದ ೧೪ ಕಡೆಗಳ ಮೇಲೆ ಸಿಬಿಐ ದಾಳಿ

ದಾಳಿಯ ಸಮಯದಲ್ಲಿ ಬೇನಾಮಿ ೫೦ ಲಕ್ಷ ರೂಪಾಯಿ ಪತ್ತೆ ಎಂಬ ಆರೋಪ

ಇಲ್ಲಿಯವರೆಗೆ ಭ್ರಷ್ಟ ರಾಜಕಾರಣಿಗಳು, ಆಡಳಿತಾಧಿಕಾರಿಗಳು, ಉದ್ಯಮಿಗಳ ಮನೆಗಳ ಮೇಲೆ ದಾಳಿ ಮಾಡಲಾಗುತ್ತದೆ; ಆದರೆ ಮುಂದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೆರೆಮನೆಗೆ ಹಾಕುವ ಘಟನೆ ತುಂಬಾ ವಿರಳವಾಗಿದೆ. ಇದು ವ್ಯವಸ್ಥೆಯ ವೈಫಲ್ಯವಲ್ಲವೇ ?

ಬೆಂಗಳೂರು – ಕಾಂಗ್ರೆಸ್ ಪಕ್ಷದ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ ಇವರ ಕರ್ನಾಟಕದಲ್ಲಿ ೯, ಮುಂಬಯಿಯಲ್ಲಿ ೧ ಮತ್ತು ದೆಹಲಿಯಲ್ಲಿ ೪ ಸ್ಥಳಗಳಲ್ಲಿ ಒಟ್ಟು ೧೪ ಸ್ಥಳಗಳಲ್ಲಿ ಸಿಬಿಐ ಅಕ್ಟೋಬರ್ ೫ ರಂದು ದಾಳಿ ಮಾಡಿದೆ. ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಬೆಂಗಳೂರು ಗ್ರಾಮೀಣ ಸಂಸದ ಡಿ.ಕೆ. ಸುರೇಶ ಅವರ ಮನೆಯ ಮೇಲೆಯೂ ಸಿಬಿಐ ದಾಳಿ ನಡೆಸಿತು. ಶಿವಕುಮಾರ ಮೇಲೆ ಅಕ್ರಮ ಆಸ್ತಿಗಳನ್ನು ಸಂಗ್ರಹಿಸಲಾಗಿದೆ ಎಂಬ ಆರೋಪವಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐಯು ವಿಶೇಷ ನ್ಯಾಯಾಲಯದಿಂದ ಅನುಮತಿ ಕೋರಿತ್ತು. ಈ ದಾಳಿಗಳಲ್ಲಿ ೫೦ ಲಕ್ಷ ರೂ. ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯನ್ನು ಟೀಕಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಮುಖಂಡ ಸಿದ್ದರಾಮಯ್ಯರವರು ಮಾತನಾಡುತ್ತಾ, ಭಾಜಪ ಯಾವಾಗಲೂ ಸೇಡಿನ ರಾಜಕೀಯವನ್ನು ಮಾಡುತ್ತದೆ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಇದು ಉಪಚುನಾವಣೆಗೆ ನಾವು ಮಾಡಿದ ಸಿದ್ಧತೆಯನ್ನು ನಿಷ್ಕ್ರಿಯಗೊಳಿಸುವ ಮತ್ತೊಂದು ಪ್ರಯತ್ನವಾಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.