ಮಳೆಗಾಲ ಪ್ರಾರಂಭವಾದ ಮೇಲೆ ನಮ್ಮೆಲ್ಲರ ಕಣ್ಣೆದುರು ಒಂದು ಮನೋಹರ ದೃಶ್ಯ ಕಾಣಿಸುತ್ತದೆ. ಅದೆಂದರೆ, ಹೊಸ ಸಮವಸ್ತ್ರದಲ್ಲಿ, ಬೆನ್ನಿಗೆ ಹೊಸ ಪುಸ್ತಕ ಹಾಗೂ ಪುಸ್ತಕಗಳು ತುಂಬಿದ ದೊಡ್ಡ ಚೀಲ, ಉತ್ಸಾಹದಿಂದ ಕುಣಿಯುತ್ತಾ, ಜಡಿ ಮಳೆಯಲ್ಲಿ ಮೋಜು ಮಾಡುತ್ತ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಗುಂಪುಗಳು ! ಬಾಲ್ಯಾ ವಸ್ಥೆಯಲ್ಲಿ ನಾವೂ ಈ ದೃಶ್ಯದ ಒಂದು ಭಾಗವಾಗಿದ್ದೆವು ಮತ್ತು ದೊಡ್ಡವರಾದ ಮೇಲೆಯೂ ವಿದ್ಯಾರ್ಥಿಗಳು ಈ ರೀತಿ ಹೋಗುವುದನ್ನು ನೋಡಿ ನಾವು ಎಷ್ಟೋ ವರ್ಷಗಳವರೆಗೆ ಈ ಆನಂದದಾಯಕ ಕ್ಷಣದ ಆನಂದವನ್ನು ಪಡೆಯುತ್ತಿದ್ದೇವೆ. ಆದರೆ ದುರದೃಷ್ಟವಶಾತ್ ಪ್ರಸಕ್ತ ವರ್ಷ ಈ ಚಿತ್ರಣವು ಸಂಪೂರ್ಣವಾಗಿ ಬದಲಾಗಿದೆ.
೧. ಕೊರೋನಾ ಹಾಗೂ ಅದರಿಂದಾದ ಬದಲಾವಣೆ
ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಗೋವಾ ಮತ್ತು ಇಡೀ ದೇಶದಲ್ಲಿನ ಕೊರೋನಾ ರೋಗಿಗಳ ಹೆಚ್ಚುತ್ತಿರುವ ಸಂಖ್ಯೆಯನ್ನು ಗಮನಿಸಿದಾಗ ಶಾಲೆ ಹಾಗೂ ಮಹಾವಿದ್ಯಾಲಯಗಳಿಗೆ ಜಡಿದ ಬೀಗಗಳನ್ನು ಇಲ್ಲೇ ತೆಗೆಯುವ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಇಂತಹ ಈ ಅಸ್ಥಿರ ವಾತಾವರಣದಲ್ಲಿ ಪರ್ಯಾಯ ವೆಂದು ಎಲ್ಲ ಕಡೆಗೆ ‘ಆನ್‌ಲೈನ್’ ಶಿಕ್ಷಣಪದ್ಧತಿಯ ಚರ್ಚೆಯು ಪ್ರಾರಂಭವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ‘ಆನ್‌ಲೈನ್’ ಶಿಕ್ಷಣ ಪದ್ಧತಿಯ ಬಗ್ಗೆ ಕೆಲವು ತಜ್ಞರ ಅಭಿಪ್ರಾಯ ಹೇಗಿದೆ ಯೆಂದರೆ, ಈ ಪದ್ಧತಿಯಿಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮನೆಯಲ್ಲಿ ಕುಳಿತುಕೊಂಡೇ ಶಿಕ್ಷಣವನ್ನು ಪ್ರಾಪ್ತ ಮಾಡಿಕೊಳ್ಳಬಹುದು. ಇದರಲ್ಲಿ ಪಾಲಕರ ಹೊಣೆಯು ಕಡಿಮೆಯಾಗಿ ಮಕ್ಕಳು ತಮ್ಮ ಶಿಕ್ಷಣದ ಜವಾಬ್ದಾರಿಯನ್ನು ತಾವೇ ವಹಿಸಿ ಸ್ವಾವಲಂಬಿಯಾಗುತ್ತಾರೆ ಎಂದಿದೆ. ಇವೆಲ್ಲವುಗಳಲ್ಲಿ ಒಪ್ಪುವಂತಹ ಒಂದು ವಿಷಯವೆಂದರೆ, ಕಾಲದೊಂದಿಗೆ ಜಗತ್ತು ಬದಲಾಗುತ್ತಿದೆ ಮತ್ತು ಈ ಬದಲಾವಣೆಗಳನ್ನು ಎದುರಿಸುವುದರಲ್ಲಿಯೇ ಜಾಣತನವಿದೆ. ಹೀಗಿದ್ದರೂ ಪ್ರಸ್ತುತ ಪ್ರಶ್ನೆಯೆಂದರೆ, ಒಂದು ವೇಳೆ ತೀರಾ ಪ್ರಾಥಮಿಕ ಶಿಕ್ಷಣದಿಂದ ‘ಆನ್‌ಲೈನ್’ ಶಿಕ್ಷಣ ಪ್ರಾರಂಭವಾದರೆ ಮುಂಬರುವ ಪೀಳಿಗೆಯ ಮೇಲೆ ಅದರ ಪರಿಣಾಮ ಏನಾಗಬಹುದು ? ಇದನ್ನು ನೋಡಿದರೆ, ನಮ್ಮ ದೇಶದ ಸ್ಥಿತಿ, ನಮ್ಮ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಇತಿಹಾಸ ಇವುಗಳ ಅಧ್ಯಯನ ಮಾಡಿದರೆ ಕೆಲವು ತಾತ್ಕಾಲಿಕ ಹಾಗೂ ಕೆಲವು ದೂರಗಾಮಿ ಪರಿಣಾಮಗಳ ವಿಚಾರ ಮಾಡುವುದು ಅನಿವಾರ್ಯವಿದೆ.
೨. ಸರ್ವಸಾಮಾನ್ಯ ಪಾಲಕರ ಆರ್ಥಿಕ ಸ್ಥಿತಿಯು ‘ಆನ್‌ಲೈನ್’ ಶಿಕ್ಷಣದ ಖರ್ಚನ್ನು ನಿರ್ವಹಿಸಬಹುದೇ ?
ಆರ್ಥಿಕ ದೃಷ್ಟಿಯಿಂದ ನಮ್ಮ ದೇಶದಲ್ಲಿನ ಬಹುಸಂಖ್ಯೆಯಲ್ಲಿ (ಸುಮಾರು ಶೇ. ೭೦ ರಷ್ಟು) ಮಧ್ಯಮ ವರ್ಗ ಹಾಗೂ ಬಡವರು ಇವೆರಡು ಗುಂಪಿನವರು ಬರುತ್ತಾರೆ. ‘ಆನ್‌ಲೈನ್’ ಶಿಕ್ಷಣವನ್ನು ಪಡೆಯಲು ‘ಸ್ಮಾರ್ಟ್‌ಫೋನ್’ ಇರುವುದು ಆವಶ್ಯಕವಾಗಿದೆ. ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಕಲಿಯುವ ಮಕ್ಕಳಿದ್ದರೆ ಅಷ್ಟು ಸಂಖ್ಯೆಯಲ್ಲಿ ಆ ದುಬಾರಿ ಸಂಚಾರಿವಾಣಿಗಳನ್ನು ಖರೀದಿಸುವುದು ಸರ್ವಸಾಮಾನ್ಯ ಪಾಲಕರ ಆರ್ಥಿಕ ಸ್ಥಿತಿಗೆ ಕೈಗೆಟುಕಬಹುದೇ ?
೩. ಶಾರೀರಿಕ ದೃಷ್ಟಿಯಿಂದಾಗುವ ಪರಿಣಾಮ
ಚಿಕ್ಕ ಮಕ್ಕಳಿರಲಿ, ಯುವಕರಿರಲಿ ಅಥವಾ ವೃದ್ಧರಿರಲಿ, ಈಗ ಎಲ್ಲರೂ ತಮ್ಮ ಹೆಚ್ಚೆಚ್ಚು ಸಮಯವನ್ನು ದೂರಚಿತ್ರವಾಹಿನಿ ಅಥವಾ ಸಂಚಾರವಾಣಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೋಡುವುದರಲ್ಲಿ ಕಳೆಯುತ್ತಾರೆ, ಎಂದು ಸರ್ವಸಾಮಾನ್ಯ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇಂದಿನ ವಿದ್ಯಾರ್ಥಿಗಳು ಶಾರೀರಿಕ ವ್ಯಾಯಾಮ ಹಾಗೂ ಮೈದಾನದ ಆಟಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಒಂದು ವೇಳೆ, ಅದರೊಂದಿಗೆ ಶಿಕ್ಷಣವನ್ನೂ ನಾಲ್ಕು ಗೋಡೆಗಳ ನಡುವೆ ಆರಂಭಿಸಿದರೆ ಈಶ್ವರನ ಕೃಪೆಯಿಂದ ಯಥೇಚ್ಛ ಪ್ರಮಾಣದಲ್ಲಿ ದೊರಕುವ ಸೂರ್ಯಪ್ರಕಾಶವನ್ನು ಹಾಗೂ ಮುಕ್ತ ಶುದ್ಧ ಹವೆಯ ಲಾಭದಿಂದ ನಮ್ಮ ಮಕ್ಕಳು ವಂಚಿತರಾಗುವುದಿಲ್ಲವೇ ?
೪. ವಿದ್ಯಾರ್ಥಿಗಳ ಮೇಲೆ ಪ್ರಕ್ಷೇಪಿತವಾಗುವ ವಿಕಿರಣಗಳಿಂದಾಗುವ ದುಷ್ಪರಿಣಾಮ
ಸಂಚಾರಿವಾಣಿಯಿಂದ ಹೊರಸೂಸುವ ವಿಕಿರಣಗಳಿಂದಲೂ (‘ರೇಡಿಯೇಶನ್’ನ) ದುಷ್ಪರಿಣಾಮವಾಗುತ್ತದೆ. ಇದರ ಪರಿಣಾಮದಿಂದ ಅತ್ಯಾವಶ್ಯಕ ಜೀವಸತ್ವಗಳ ಅಭಾವ ಹಾಗೂ ಅದರ ಮೇಲೆ ಔಷಧೋಪಚಾರ ಇತ್ಯಾದಿಗಳ ಖರ್ಚು ಬರುತ್ತದೆ. ಮಕ್ಕಳು ಸಂಚಾರಿವಾಣಿಗೆ ಗಂಟೆಗಟ್ಟಲೇ ಅಂಟಿಕೊಂಡರೆ ದೃಷ್ಟಿದೋಷ, ಚಿಕ್ಕ ವಯಸ್ಸಿನಲ್ಲಿ ಸ್ನಾಯುಗಳು ಸೆಟೆದುಕೊಳ್ಳುವುದು ಮುಂತಾದ ಅನಿಷ್ಟ ಪರಿಣಾಮಗಳಾಗಬಹುದು. ಅವರಲ್ಲಿ ಒಂಟಿತನ, ಸ್ವಾರ್ಥಿತನ, ಸಂಕುಚಿತ ವೃತ್ತಿ, ಮಿತೃತ್ವ ಭಾವನೆಯ ಅಭಾವ, ಸಾಮಾಜಿಕ ಕಟ್ಟುಪಾಡುಗಳ ಅಭಾವ ಇಂತಹ ದೋಷಗಳು ಹೆಚ್ಚಾಗಿ ಮುಂಬರುವ ಜೀವನದಲ್ಲಿ ಅವರು ದುಃಖಿಯಾಗಬಹುದು. ಬೌದ್ಧಿಕ ಪ್ರಗತಿಯೇ ನಮ್ಮ ಶಿಕ್ಷಣದ ಧ್ಯೇಯವಾಗಿದೆಯೇ? ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವನ್ನು ಸಾಧಿಸಿ ಅವರನ್ನು ಆದರ್ಶ ನಾಗರಿಕರನ್ನಾಗಿ ಮಾಡುವುದೇ ನಿಜವಾದ ಶಿಕ್ಷಣದ ಗುಟ್ಟಾಗಿದೆ.
೫. ನೈತಿಕತೆಯ ಅಧೋಗತಿಯಾಗಿ ವಿದ್ಯಾರ್ಥಿಗಳು ವಿಕೃತಿಯ ಪ್ರಪಾತದಲ್ಲಿ ನೂಕಲ್ಪಡುವ ಸಾಧ್ಯತೆಯಿರುತ್ತದೆ
ಗುರು-ಶಿಷ್ಯ ಪರಂಪರೆಯು ಭಾರತವು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಮೆಕಾಲೆಯ ಆಂಗ್ಲ ಶಿಕ್ಷಣಪದ್ಧತಿಯಿಂದ ನಾವು ಭಾರತೀಯರು ಭೋಗಿಗಳಾಗಿದ್ದೇವೆ. ‘ವಿದ್ಯಾರ್ಥಿ’ ಈ ಸಂಬಂಧವನ್ನು ಉಳಿಸುವುದು ಆವಶ್ಯಕವಾಗಿದೆ. ಗೌರವ, ನಮ್ರತೆ, ದೇಶಪ್ರೇಮ, ಧರ್ಮಪ್ರೇಮ, ವ್ಯಾಪಕತೆ ಈ ಗುಣಗಳನ್ನು ಸಂಚಾರಿವಾಣಿಯಲ್ಲ, ಸಗುಣರೂಪಿ ಶಿಕ್ಷಕರೇ ಎಳೆಯ ಮನಸ್ಸಿನಲ್ಲಿ ಮೂಡಿಸಬಹುದು. ‘ಆನ್‌ಲೈನ್’ ಕಲಿಯುವ ಪರಿಣಾಮವು ಇದಕ್ಕೆ ವಿರುದ್ಧವಾಗಿದೆ. ಅಂತರಜಾಲದಲ್ಲಿ ಅನೇಕ ಅಶ್ಲೀಲ ಜಾಲತಾಣಗಳು ಕಾರ್ಯನಿರತವಾಗಿರುತ್ತವೆ. ಜಿಜ್ಞಾಸೆಯಿಂದ ವಿದ್ಯಾರ್ಥಿಗಳು ಈ ಜಾಲತಾಣಗಳತ್ತ ಆಕರ್ಷಿತಗೊಳ್ಳಬಹುದು. ಯಾವ ಎಳೆಯ ವಯಸ್ಸಿನಲ್ಲಿ ನೈತಿಕಮೌಲ್ಯಗಳನ್ನು ಮೂಡಿಸಬೇಕಾಗಿದೆಯೋ, ಆ ವಯಸ್ಸಿನಲ್ಲಿ ವಿದ್ಯಾರ್ಥಿಗಳನ್ನು ವಿಕೃತಿಯ ಗುಂಡಿಯಲ್ಲಿ ನೂಕಿದಂತಾಗಬಹುದು.
೬. ಹವಾಮಾನ ಹಾಗೂ ತಾಂತ್ರಿಕ ದೃಷ್ಟಿಯಿಂದಾಗುವ ಪರಿಣಾಮ
‘ಆನ್‌ಲೈನ್’ ಶಿಕ್ಷಣವನ್ನು ಪಡೆಯಲು ನಿರಂತರವಾಗಿ ನಡೆಯುವ ಅಂತರಜಾಲದ ಆವಶ್ಯಕತೆ ಇರುತ್ತದೆ ! ಇಲ್ಲದಿದ್ದರೆ ವಿದ್ಯಾರ್ಥಿಗಳು ಪಠ್ಯಕ್ರಮದಿಂದ ವಂಚಿತರಾಗಿ ಅವರಿಗೆ ಹಾನಿಯಾಗಬಹುದು. ಮೇಲಿಂದ ಮೇಲೆ ಸ್ಥಗಿತಗೊಳ್ಳುವ ವಿದ್ಯುತ್ ಪ್ರವಾಹದಿಂದಾಗಿ, ಜಡಿ ಮಳೆಯಿಂದಾಗಿ ಹಾಗೂ ತೀವ್ರ ಗಾಳಿಯಿಂದಾಗಿ ಮೇಲಿಂದ ಮೇಲೆ ಅಡಚಣೆಗಳು ನಿರ್ಮಾಣವಾಗುತ್ತವೆ. ಹಾಗೆಯೇ ವಿದ್ಯಾರ್ಥಿಗಳು ಯಾವ ರೀತಿಯ ಕಾಳಜಿಯನ್ನು ವಹಿಸಬೇಕು, ಎಂಬುದರ ಬಗ್ಗೆ ಅವರಿಗೆ ಸವಿಸ್ತಾರ ಮಾಹಿತಿಯನ್ನು ನೀಡುವುದು ಆವಶ್ಯಕವಾಗಿದೆ. ಉದಾ. ಸಂಚಾರಿವಾಣಿ ಅಥವಾ ಸಂಚಾರಿ ಗಣಕಯಂತ್ರವನ್ನು (ಲ್ಯಾಪ್ ಟಾಪ್) ಚಾರ್ಜಿಂಗ್ ಮಾಡಲು ಇಟ್ಟು ಇಯರ್ ಫೋನ್ ಉಪಯೋಗಿಸಿದರೆ, ಅದರಿಂದ ಗಂಭೀರ ಪರಿಣಾಮವಾಗಬಹುದು.
೭. ಗುರು-ಶಿಷ್ಯ ಪರಂಪರೆ ಸುರಕ್ಷಿತವಾಗಿರುವುದು ಆವಶ್ಯಕ
ಕೊನೆಗೆ ಇಷ್ಟೇ ಹೇಳಬೇಕೆನಿಸುತ್ತದೆ,
೧. ಸದ್ಯದ ಸ್ಥಿತಿಯಲ್ಲಿ ನಮ್ಮ ಮಕ್ಕಳ ಶೈಕ್ಷಣಿಕ ಹಾನಿಯಾಗಬಾರದೆಂದು, ‘ಆನ್‌ಲೈನ್’ ಶಿಕ್ಷಣಪದ್ಧತಿಯನ್ನು ಪ್ರಾಥಮಿಕ ಸ್ತರದಿಂದ ಸ್ವೀಕರಿಸಬೇಕಾಗಿರುವುದು ಒಂದು ಪರ್ಯಾಯ ಮಾತ್ರವಾಗಿದೆ.
೨. ಹೀಗಿದ್ದರೂ, ಸ್ಥಿತಿಯು ಮೊದಲಿನಂತೆ ಆದನಂತರ ವಿದ್ಯಾರ್ಥಿಗಳಿಗೆ ಮುಕ್ತ ವಾತಾವರಣದಲ್ಲಿ ಶಿಕ್ಷಣದ ಆನಂದವನ್ನು ನೀಡಲು ಮೂಲ ಸ್ಥಾನಕ್ಕೆ ಬರುವುದು ಅತ್ಯಂತ ಆವಶ್ಯಕವಾಗಿದೆ.
೩. ಶಿಕ್ಷಣವು ದೇಶದ ಮೂಲಪಿಂಡದೊಂದಿಗೆ ಹೊಂದಿಕೊಳ್ಳುವಂತಿರಬೇಕು.
೪. ಭಾರತದ ಮೂಲ ಪಿಂಡ ಆಧ್ಯಾತ್ಮಿಕವಾಗಿರುವುದರಿಂದ ನಮ್ಮ ದೇಶ ಜಗತ್ತಿನಲ್ಲಿ ಶ್ರೇಷ್ಠವಾಗಿದೆ.
೫. ಕೊನೆಗೆ ಗುರು-ಶಿಷ್ಯ ಪರಂಪರೆಯು ಸುರಕ್ಷಿತವಾಗಿರಬೇಕು !
ಲೇಖಕರು : ಸೌ. ಅಂಜಲಿ ಸಂಜಯ ನಾಯಕ, ಮ್ಹಾಪಸಾ. ಗೋವಾ