ಅಯೋಧ್ಯೆ (ಉತ್ತರಪ್ರದೇಶ) – ಆಗಸ್ಟ್ ೫ ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆಯನ್ನು ಪ್ರಧಾನಿ ಮೋದಿಯವರ ಹಸ್ತದಿಂದ ನೆರವೇರಲಿದೆ. ಇದು ಜಗತ್ತಿನ ಮೂರನೇ ಅತೀದೊಡ್ಡ ದೇವಸ್ಥಾನವಾಗಲಿದೆ, ಎಂದು ಹೇಳಲಾಗುತ್ತಿದೆ. ಇದರ ಕೆಲಸ ಪೂರ್ಣವಾಗಲು ೩ ವರ್ಷ ತಗಲಬಹುದು.
ಜುಲೈ ೧೮ ರಂದು ಮಹಂತ ನೃತ್ಯ ಗೋಪಾಲ ದಾಸ ಇವರ ಅಧ್ಯಕ್ಷತೆಯಲ್ಲಿ ನಡೆದ ‘ಟ್ರಸ್ಟ’ನ ಸಭೆಯಲ್ಲಿ ದೇವಸ್ಥಾನದ ನಕ್ಷೆಯಲ್ಲಿನ ಬದಲಾವಣೆಗೆ ಒಪ್ಪಿಗೆ ನೀಡಲಾಯಿತು. ಇನ್ನು ದೇವಸ್ಥಾನದ ಗೋಪುರವು ಮೂರರ ಬದಲಾಗಿ ಐದು ಇರಲಿದೆ. ದೇವಸ್ಥಾನದ ಎತ್ತರ ೧೨೮ ಅಡಿಯ ಬದಲು ೧೬೧ ಅಡಿ ಎತ್ತರ ಇರಲಿದೆ. ಪ್ರದಕ್ಷಿಣೆ ಹಾಕುವ ಮಾರ್ಗದಲ್ಲಿ ಶ್ರೀ ಗಣೇಶ, ಮಹಾಮಾಯಾ, ಸೀತೆ, ಹನುಮಾನ ಇವರೊಂದಿಗೆ ೫ ದೇವತೆಗಳ ದೇವಸ್ಥಾನ ಇರಲಿದೆ. ಇದನ್ನು ಸಮಾಜ ಹಾಗೂ ರಾಮಭಕ್ತರ ಬೇಡಿಕೆಗನುಸಾರ ಬದಲಾವಣೆಯನ್ನು ಮಾಡಲಾಗಿದೆ. ಈ ಸಭೆಯಲ್ಲಿ ದೇವಸ್ಥಾನ ಕಟ್ಟಡ ಕಾಮಗಾರಿ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾಯವರೊಂದಿಗೆ ೧೨ ಸದಸ್ಯರು ಉಪಸ್ಥಿತರಿದ್ದರು.
ಭೂಮಿಪೂಜೆಯ ಸಮಯದಲ್ಲಿ ಪ್ರಧಾನಿ ಮೋದಿಯವರ ಹಸ್ತದಿಂದ ದೇವಸ್ಥಾನದ ಅಡಿಯಲ್ಲಿ ತಾಮ್ರದ ಕಳಸವನ್ನು ಸ್ಥಾಪಿಸಲಾಗುವುದು, ಅದರಲ್ಲಿ ವಜ್ರ, ಮುತ್ತು, ರತ್ನ, ಮಾಣಿಕ್ಯ, ಚಿನ್ನ ಹಾಗೂ ಹಿತ್ತಾಳೆ ಈ ಪಂಚರತ್ನಗಳು ಇರಲಿವೆ. ಇದರೊಂದಿಗೆ ಬೆಳ್ಳಿಯ ನಾಗ-ನಾಗಿಣಿ, ಗರಿಕೆ ಹಾಗೂ ಗಂಗಾಜಲವೂ ಇರಲಿದೆ. ಕಳಸ ಸ್ಥಾಪನೆಯ ನಂತರ ನಂದಾ, ಭದ್ರಾ, ಜಯಾ, ರಿಕ್ತ ಹಾಗೂ ಪೂರ್ಣಾ ಹೆಸರಿನ ೫ ಇಟ್ಟಿಗೆಗಳ ಪೂಜೆ ಮಾಡಲಾಗುವುದು. ಪ್ರಧಾನಿಯವರ ಹಸ್ತದಿಂದ ವಿವಿಧ ಪೂಜೆಗಳನ್ನು ನೆರವೇರಿಸಿದ ನಂತರ ಈ ಭವ್ಯ ರಾಮಮಂದಿರದ ಗುದ್ದಲಿ ಪೂಜೆ ಮಾಡಲಾಗುವುದು ಮತ್ತು ಅನಂತರ ದೇವಸ್ಥಾನದ ಕಟ್ಟಡಕೆಲಸ ಆರಂಭಿಸಲಾಗುವುದು.