೧. ಸೂರ್ಯಗ್ರಹಣ
‘ಜ್ಯೇಷ್ಠ ಅಮಾವಾಸ್ಯೆ, ೨೧.೬.೨೦೨೦, ರವಿವಾರದಂದು ಭಾರತದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ‘ಕಂಕಣಾಕೃತಿ’ ಸೂರ್ಯಗ್ರಹಣವು ಕಾಣಿಸಲಿದ್ದು ಉಳಿದ ಸಂಪೂರ್ಣ ಭಾರತದಲ್ಲಿ ‘ಖಂಡಗ್ರಾಸ ಸೂರ್ಯ ಗ್ರಹಣವು ಕಾಣಿಸಲಿದೆ.
ಸೂರ್ಯ ಹಾಗೂ ಪೃಥ್ವಿಯ ನಡುವೆ ಚಂದ್ರನು ಬಂದು ಚಂದ್ರನ ನೆರಳು ಪೃಥ್ವಿಯ ಮೇಲೆ ಬೀಳುತ್ತದೆ. ಅದು ಯಾವ ಭಾಗದ ಮೇಲೆ ಬೀಳುತ್ತದೆ ಮತ್ತು ಎಷ್ಟು ಸಮಯ ಬೀಳುತ್ತದೆ, ಅಷ್ಟು ಸಮಯ ಚಂದ್ರಬಿಂಬದಿಂದಾಗಿ ಸೂರ್ಯಬಿಂಬವು ಮುಚ್ಚಿದಂತೆ ಕಾಣಿಸುತ್ತದೆ. ಸೂರ್ಯಬಿಂಬವು (ಸೂರ್ಯನು) ಸಂಪೂರ್ಣ ಕಾಣದಂತಾದರೆ, ‘ಖಗ್ರಾಸ ಸೂರ್ಯಗ್ರಹಣ’ ಹಾಗೂ ಸೂರ್ಯಬಿಂಬವು ಅರ್ಧದಷ್ಟು ಮುಚ್ಚಿದರೆ, ‘ಖಂಡಗ್ರಾಸ ಸೂರ್ಯಗ್ರಹಣ’ವಾಗುತ್ತದೆ. ಸೂರ್ಯಬಿಂಬವು ಕಂಕಣದ (ಸ್ತ್ರೀಯರ ಕೈಯಲ್ಲಿನ ಬಳೆಯ) ಆಕಾರದಲ್ಲಿ ಮುಚ್ಚಲ್ಪಟ್ಟರೆ, ಕಾಣಿಸುವ ಗ್ರಹಣಕ್ಕೆ ‘ಕಂಕಣಾಕೃತಿ ಗ್ರಹಣ’ ಎನ್ನುತ್ತಾರೆ. ಕಂಕಣಾಕೃತಿ ಸೂರ್ಯಗ್ರಹಣದಲ್ಲಿ ಸೂರ್ಯನು ಸಂಪೂರ್ಣ ಮುಚ್ಚಿದಂತೆ ಕಾಣಿಸುವುದಿಲ್ಲ; ಅದರಲ್ಲಿ ಸೂರ್ಯನ ಹೊರಗಿನ ಭಾಗವು ಬಳೆಯಂತೆ ಹೊಳೆಯುತ್ತದೆ. ಸೂರ್ಯಗ್ರಹಣವು ಕೇವಲ ಅಮಾವಾಸ್ಯೆಯಂದೇ ಬರುತ್ತದೆ. ‘ಮಹರ್ಷಿ ಆರ್ಟ್ರಿಮುನಿ’ ಇವರು ಗ್ರಹಣದ ಬಗ್ಗೆ ಜ್ಞಾನವನ್ನು ನೀಡುವ ಮೊದಲ ಶಿಕ್ಷಕರಾಗಿದ್ದರು.
೨. ಭಾರತದಲ್ಲಿ ಎಲ್ಲೆಡೆ ಕಾಣಿಸುವ ಸೂರ್ಯಗ್ರಹಣದ ಸಮಯಗಳು
‘ಈ ಗ್ರಹಣವು ಭಾರತದೊಂದಿಗೆ ಸಂಪೂರ್ಣ ಏಶಿಯಾ ಖಂಡ, ಆಫ್ರಿಕಾ ಖಂಡ, ದಕ್ಷಿಣ ಯುರೋಪಿನ ಕೆಲವು ಭಾಗ ಹಾಗೂ ಆಸ್ಟ್ರೇಲಿಯಾದ ಉತ್ತರದ ಭಾಗದ ಪ್ರದೇಶ ಈ ಪ್ರದೇಶಗಳಲ್ಲಿ ಕಾಣಿಸಲಿದೆ. ಇದರೊಂದಿಗೆ ನೀಡಿದ ಭಾರತದ ನಕಾಶೆಯಲ್ಲಿನ ಛಾಯಾಂಕಿತ (ಕಪ್ಪು) ಮಾಡಿದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಖಂಡದಲ್ಲಿನ ಕೆಲವು ಪ್ರದೇಶಗಳಲ್ಲಿ ಕಂಕಣಾಕೃತಿಯು ನೋಡಲು ಸಿಗುವುದು. ಉಳಿದ ಸಂಪೂರ್ಣ ಭಾರತದಲ್ಲಿ ಈ ಗ್ರಹಣವು ‘ಖಂಡಗ್ರಾಸ ಗ್ರಹಣ’ ಕಾಣಿಸುವುದು. ಈ ಗ್ರಹಣವು ೨೧.೬.೨೦೨೦ ರಂದು ಬೆಳಗ್ಗೆ ೧೦.೦೧ ರಿಂದ ಮಧ್ಯಾಹ್ನ ೧.೨೮ ರ ವರೆಗೆ ಇದೆ.’ (ಆಧಾರ : ದಾತೆ ಪಂಚಾಂಗ)
೨ ಅ. ಸೂರ್ಯಗ್ರಹಣದ ಸಮಯಗಳು (ಕೆಳಗಿನ ಸಮಯಗಳು ಬೆಂಗಳೂರಿನ ಸಮಯಗಳಾಗಿವೆ.)
೨ ಅ ೧. ಸ್ಪರ್ಶ (ಆರಂಭ) : ೨೧.೬.೨೦೨೦ ರಂದು ಬೆಳಗ್ಗೆ ೧೦.೧೩
೨ ಅ ೨. ಮಧ್ಯ : ೨೧.೬.೨೦೨೦ ರಂದು ಬೆಳಗ್ಗೆ ೧೧.೪೭
೨ ಅ ೩. ಮೋಕ್ಷ (ಮುಕ್ತಾಯ) : ೨೧.೬.೨೦೨೦ ರಂದು ೧೩.೩೨ (ಮಧ್ಯಾಹ್ನ ೧.೩೨)
೨ ಅ ೪. ಗ್ರಹಣಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಮುಕ್ತಾಯದವರೆಗಿನ ಒಟ್ಟು ಅವಧಿ) :
೩ ಗಂಟೆ ೧೯ ನಿಮಿಷಗಳು
ಟಿಪ್ಪಣಿ ೧ – ಪರ್ವವೆಂದರೆ ಪರ್ವಣಿ ಅಥವಾ ಪುಣ್ಯಕಾಲ. ಗ್ರಹಣದ ಸ್ಪರ್ಶದಿಂದ ಗ್ರಹಣದ ಮೋಕ್ಷದವರೆಗಿನ ಕಾಲವು ಪುಣ್ಯಕಾಲವಾಗಿದೆ. ‘ಈ ಕಾಲದಲ್ಲಿ ಈಶ್ವರಿ ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
೨ ಆ. ಗ್ರಹಣದ ವೇಧಕಾಲ
೨ ಆ ೧. ಅರ್ಥ : ಸೂರ್ಯಗ್ರಹಣದ ಮೊದಲು ಸೂರ್ಯನು ಚಂದ್ರನ ನೆರಳಿನಲ್ಲಿ ಬರ ತೊಡಗುತ್ತಾನೆ. ಆದುದರಿಂದ ಅವನ ಪ್ರಕಾಶವು ನಿಧಾನವಾಗಿ ಕಡಿಮೆಯಾಗಲು ಆರಂಭವಾಗುತ್ತದೆ. ಇದಕ್ಕೆ ‘ಗ್ರಹಣದ ವೇಧಕಾಲ’, ಎಂದು ಹೇಳುತ್ತಾರೆ.
೨ ಆ ೨. ಕಾಲಾವಧಿ : ‘ಈ ಸೂರ್ಯಗ್ರಹಣವು ದಿನದ ಎರಡನೇ ಪ್ರಹರದಲ್ಲಿ (ಟಿಪ್ಪಣಿ ೨) ಇರುವುದರಿಂದ ಶನಿವಾರ ೨೦.೬.೨೦೨೦ ರಂದು ರಾತ್ರಿ ೧೦ ಗಂಟೆಯಿಂದ ಗ್ರಹಣದ ಮೋಕ್ಷದ ವರೆಗೆ, ಅಂದರೆ ೨೧.೬.೨೦೨೦ರ ಮಧ್ಯಾಹ್ನ ೧.೩೨ ರ ವರೆಗೆ ವೇಧವನ್ನು ಪಾಲಿಸಬೇಕು.’ (ಆಧಾರ : ದಾತೆ ಪಂಚಾಂಗ)
ಟಿಪ್ಪಣಿ ೨ – ಒಂದು ಪ್ರಹರವು ೩ ಗಂಟೆಗಳದ್ದಾಗಿರುತ್ತದೆ. ದಿನದಲ್ಲಿನ ೪ ಹಾಗೂ ರಾತ್ರಿಯಲ್ಲಿನ ೪ ಪ್ರಹರಗಳು ಸೇರಿ ಒಂದು ದಿನದಲ್ಲಿ ಒಟ್ಟು ೮ ಪ್ರಹರಗಳಿವೆ.
೩. ಸೂರ್ಯಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು
‘ವೇಧಕಾಲದಲ್ಲಿ ಸ್ನಾನ, ದೇವರ ಪೂಜೆ, ನಿತ್ಯ ಕರ್ಮಗಳು, ಜಪತಪ ಹಾಗೂ ಶ್ರಾದ್ಧ, ಈ ಕರ್ಮಗಳನ್ನು ಮಾಡಬಹುದು. ವೇಧಕಾಲದಲ್ಲಿ ಭೋಜನ ನಿಷಿದ್ಧವಾಗಿದೆ. ಆದುದರಿಂದ ಆಹಾರ ಪದಾರ್ಥಗಳನ್ನು ಸೇವಿಸಬಾರದು; ಆದರೆ ಆವಶ್ಯಕವಾಗಿರುವ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಹಾಗೂ ವಿಶ್ರಾಂತಿ ಪಡೆಯುವುದು ಈ ಕರ್ಮಗಳನ್ನು ಮಾಡಬಹುದು. ಗ್ರಹಣಪರ್ವದ ಕಾಲದಲ್ಲಿ (ಬೆಳಗ್ಗೆ ೧೦.೦೧ ರಿಂದ ೧೩.೨೮ ರ ಅವಧಿಯಲ್ಲಿ) ಮಾತ್ರ ನೀರು ಕುಡಿಯುವುದು, ಮಲ-ಮೂತ್ರವಿಸರ್ಜನೆ ಹಾಗೂ ಮಲಗುವುದು, ಈ ಕರ್ಮಗಳು ನಿಷಿದ್ಧವಾಗಿರುವುದರಿಂದ ಅವುಗಳನ್ನು ಮಾಡಬಾರದು. ಮಕ್ಕಳು, ನಿಶ್ಯಕ್ತರು ಹಾಗೂ ಅನಾರೋಗ್ಯ ವ್ಯಕ್ತಿಗಳು, ಹಾಗೆಯೇ ಗರ್ಭವತಿ ಸ್ತ್ರೀಯರು ೨೧.೬.೨೦೨೦ ರಂದು ಮುಂಜಾನೆ ೪.೪೫ ರಿಂದ ಗ್ರಹಣಮೋಕ್ಷದವರೆಗೆ ವೇಧವನ್ನು ಪಾಲಿಸಬೇಕು.’ (ಆಧಾರ : ದಾತೆ ಪಂಚಾಂಗ)
೩ ಅ. ಆರೋಗ್ಯದ ದೃಷ್ಟಿಯಿಂದ ವೇಧನಿಯಮಗಳನ್ನು ಪಾಲಿಸುವುದರ ಮಹತ್ವ !
೩ ಅ ೧. ಶಾರೀರಿಕ ಹಾಗೂ ಭೌತಿಕ ಸ್ತರ : ವೇಧ ಕಾಲದಲ್ಲಿ ಜೀವಾಣುಗಳು ಹೆಚ್ಚಾಗುವುದರಿಂದ ಆಹಾರವು ಬೇಗನೆ ಕೆಡುತ್ತದೆ. ಈ ಕಾಲದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾಗಿರುತ್ತದೆ. ಯಾವ ರೀತಿ ರಾತ್ರಿಯ ಆಹಾರ ಮರುದಿನ ತಂಗಳಾಗುತ್ತದೆಯೋ, ಅದೇ ರೀತಿ ಗ್ರಹಣದ ಮೊದಲಿನ ಆಹಾರವು ಗ್ರಹಣದ ನಂತರ ತಂಗಳೆಂದು ತಿಳಿಯಲಾಗುತ್ತದೆ. ಆದುದರಿಂದ ಆ ಆಹಾರವನ್ನು ಚೆಲ್ಲಬೇಕು. ಕೇವಲ ಹಾಲು ಹಾಗೂ ನೀರು ಇವುಗಳಿಗೆ ಈ ನಿಯಮವು ಅನ್ವಯಿಸುವುದಿಲ್ಲ. ಗ್ರಹಣದ ಮೊದಲಿನ ಹಾಲು ಮತ್ತು ನೀರನ್ನು ಗ್ರಹಣ ಮುಗಿದ ನಂತರವೂ ಉಪಯೋಗಿಸಬಹುದು.
೩ ಅ ೨. ಮಾನಸಿಕ ಸ್ತರ : ವೇಧಕಾಲದಲ್ಲಿ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮವಾಗುತ್ತದೆ. ‘ಕೆಲವು ವ್ಯಕ್ತಿಗಳಿಗೆ ನಿರಾಶೆಯಾಗುವುದು, ಒತ್ತಡ ಬರುವುದು ಇತ್ಯಾದಿ ಮಾನಸಿಕ ತೊಂದರೆಗಳಾಗುತ್ತವೆ’, ಎಂದು ಮನೋರೋಗತಜ್ಞರು ಹೇಳುತ್ತಾರೆ. ಗ್ರಹಣದ ಕಾಲದಲ್ಲಿ ಮಾಡಿದ ಸಾಧನೆಯ ಫಲವು ಸಾವಿರಾರು ಪಟ್ಟು ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಗೆ ಪ್ರಾಧಾನ್ಯತೆಯನ್ನು ನೀಡುವುದು ಮಹತ್ವದ್ದಾಗಿದೆ. ವೇಧದ ಆರಂಭದಿಂದ ಗ್ರಹಣವು ಮುಗಿಯು ವವರೆಗೆ ನಾಮಜಪ, ಸ್ತ್ರೋತ್ರಪಠಣ, ಧ್ಯಾನಧಾರಣೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸನ್ನು ತೊಡಗಿಸಿದರೆ ಅದರಿಂದ ಲಾಭವಾಗುತ್ತದೆ.
೪. ಗ್ರಹಣಕಾಲದಲ್ಲಿನ ವರ್ಜ್ಯ ಕೃತಿಗಳು
೪ ಅ. ವರ್ಜ್ಯ ಕೃತಿಗಳು : ‘ಗ್ರಹಣಕಾಲದಲ್ಲಿ (ಪರ್ವ ಕಾಲದಲ್ಲಿ) ‘ನಿದ್ದೆ, ಮಲ-ಮೂತ್ರವಿಸರ್ಜನೆ, ಅಭ್ಯಂಗ (ಸಂಪೂರ್ಣ ಶರೀರಕ್ಕೆ ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಅದು ಶರೀರದಲ್ಲಿ ಇಂಗುವವರೆಗೆ ಉಜ್ಜುವುದು), ಭೋಜನ, ಇತರ ತಿನ್ನುವುದು-ಕುಡಿಯುವುದು ಹಾಗೂ ಕಾಮ ವಿಷಯದ ಸೇವನೆ’ ಈ ಕರ್ಮಗಳನ್ನು ಮಾಡಬಾರದು.
೪ ಆ. ಯಾವ ಕರ್ಮಗಳನ್ನು ಮಾಡಬೇಕು ?
೧. ಗ್ರಹಣ ಸ್ಪರ್ಶವಾದ ಕೂಡಲೇ ಸ್ನಾನ ಮಾಡಬೇಕು.
೨. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣ, ಶ್ರಾದ್ಧ, ಜಪ, ಹೋಮ ಹಾಗೂ ದಾನ ಮಾಡಬೇಕು.
೩. ಹಿಂದೆ ಕೆಲವು ಕಾರಣಗಳಿಂದ ನಿಂತಿದ್ದ ಮಂತ್ರದ ಪುರಶ್ಚರಣವನ್ನು ಈ ಕಾಲಾವಧಿಯಲ್ಲಿ ಆರಂಭವನ್ನು ಮಾಡಿದರೆ ಅದರ ಫಲವು ಅನಂತ ಪಟ್ಟುಗಳಲ್ಲಿ ಸಿಗುತ್ತದೆ.
೪. ಗ್ರಹಣಮೋಕ್ಷದ ನಂತರ ಸ್ನಾನ ಮಾಡಬೇಕು.
ಯಾವುದಾದರೊಬ್ಬ ವ್ಯಕ್ತಿಗೆ ಮೈಲಿಗೆಯಿದ್ದರೆ ಗ್ರಹಣಕಾಲದಲ್ಲಿ ಗ್ರಹಣಕ್ಕೆ ಸಂಬಂಧಿಸಿದ ಸ್ನಾನ ಹಾಗೂ ದಾನ ಮಾಡಲು ಅವನಿಗೆ ಶುದ್ಧಿಯಿರುತ್ತದೆ.
೫. ರಾಶಿಗಳ ಮೇಲಾಗುವ ಗ್ರಹಣದ ಶುಭ-ಅಶುಭ ಫಲಗಳು
೫ ಅ. ಶುಭ ಫಲ : ಮೇಷ, ಸಿಂಹ, ಕನ್ಯಾ ಹಾಗೂ ಮಕರ
೫ ಆ. ಅಶುಭ ಫಲ : ಮಿಥುನ, ಕರ್ಕ, ವೃಶ್ಚಿಕ ಹಾಗೂ ಮೀನ
೫ ಇ. ಮಿಶ್ರ ಫಲ : ವೃಷಭ, ತುಲಾ, ಧನು ಹಾಗೂ ಕುಂಭ
ಯಾವ ರಾಶಿಗಳಿಗೆ ಅಶುಭ ಫಲವಿದೆಯೋ, ಆ ವ್ಯಕ್ತಿಗಳು ಹಾಗೂ ಗರ್ಭವತಿ ಮಹಿಳೆಯರು ಈ ಸೂರ್ಯಗ್ರಹಣವನ್ನು ನೋಡಬಾರದು.’ (ಆಧಾರ : ದಾತೆ ಪಂಚಾಂಗ)
೬. ಸೂರ್ಯಗ್ರಹಣ ನೋಡುವಾಗವಹಿಸಬೇಕಾದ ಕಾಳಜಿ
‘ಕಂಕಣಾಕೃತಿ ಹಾಗೂ ಖಂಡಗ್ರಾಸ ಸೂರ್ಯ ಗ್ರಹಣವನ್ನು ನೋಡುವಾಗ ಗ್ರಹಣವನ್ನು ನೋಡಲು ತಯಾರಿಸಿದ ವಿಶೇಷ ಕನ್ನಡಕ ಅಥವಾ ಕಪ್ಪು ಮಾಡಿದ ಗಾಜು ಅಥವಾ ‘ಸೂರ್ಯನ ಪ್ರಖರ ಕಿರಣಗಳು ಕಣ್ಣುಗಳವರೆಗೆ ತಲುಪಬಾರದೆಂದು’, ಲಭ್ಯವಿರುವ ಸಾಧನಗಳನ್ನು ಬಳಸಿಯೇ ಗ್ರಹಣವನ್ನು ನೋಡಬೇಕು. ಯಾವುದೇ ಕಾರಣಕ್ಕೂ ಸಾಧನಗಳನ್ನು ಬಳಸದೇ ಕೇವಲ ಕಣ್ಣುಗಳಿಂದ ಸೂರ್ಯನ ಕಡೆಗೆ ನೋಡಬಾರದು. ಗ್ರಹಣದ ಛಾಯಾಚಿತ್ರಗಳನ್ನು ತೆಗೆಯುವವರು ವಿಶಿಷ್ಟ ಫಿಲ್ಟರ್‌ನ ಉಪಯೋಗ ಮಾಡಿಯೇ ಛಾಯಾಚಿತ್ರಗಳನ್ನು ತೆಗೆಯಬೇಕು, ಇಲ್ಲದಿದ್ದರೆ ಕಣ್ಣುಗಳಿಗೆ ಹಾನಿಯಾಗಬಹುದು.
ಈ ಗ್ರಹಣದಲ್ಲಿ ಕಂಕಣಾಕೃತಿಯ ಅವಸ್ಥೆಯು ೪೦ ಸೆಕೆಂಡುಗಳವರೆಗೆ ಕಾಣಿಸುವುದರಿಂದ ಈ ಕಾಲಾವಧಿಯಲ್ಲಿ ಕಣ್ಣುಗಳ ಮೇಲೆ ಗ್ರಹಣವನ್ನು ನೋಡುವ ಕನ್ನಡಕವನ್ನು ಹಾಕಿಕೊಂಡೇ ಇರಬೇಕು. ಇದರ ನಂತರ ಪುನಃ ೨೧.೫.೨೦೩೧ ರಂದು ದಕ್ಷಿಣ ಭಾರತದಲ್ಲಿ ಕಂಕಣಾಕೃತಿ ಸೂರ್ಯಗ್ರಹಣವು ಕಾಣಿಸಲಿದೆ. ಇದಕ್ಕೂ ಮೊದಲು ೧೫.೧.೨೦೧೦ ಹಾಗೂ ೨೬.೧೨.೨೦೧೯ ರಂದು ಕಂಕಣಾಕೃತಿ ಸೂರ್ಯ ಗ್ರಹಣವು ಭಾರತದ ದಕ್ಷಿಣ ಕಡೆಗಿನ ಕೆಲವು ಪ್ರದೇಶಗಳಲ್ಲಿ ಕಾಣಿಸಿತ್ತು. ಈ ವರ್ಷ ಜ್ಯೇಷ್ಠ ಅಮಾವಾಸ್ಯೆ, ೨೧.೬.೨೦೨೦, ರವಿವಾರದಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಭಾರತದ ಉತ್ತರದ ಕಡೆಗಿನ ಪ್ರದೇಶಗಳಲ್ಲಿ ಕಂಕಣಾಕೃತಿ ಸೂರ್ಯಗ್ರಹಣವು ಕಾಣಿಸಲಿದ್ದು ಉಳಿದ ಸಂಪೂರ್ಣ ಭಾರತದಲ್ಲಿ ಈ ಸೂರ್ಯಗ್ರಹಣವು ಖಂಡಗ್ರಾಸ ಕಾಣಿಸಲಿದೆ. (ಆಧಾರ : ದಾತೆ ಪಂಚಾಂಗ)
೭. ಗ್ರಹಣ ಕಾಲದಲ್ಲಿನ ಸ್ನಾನದ ಬಗೆಗಿನ ಮಾಹಿತಿ
‘ಗ್ರಹಣದ ಕಾಲದಲ್ಲಿ ಎಲ್ಲ ಜಲವು ಗಂಗೆಯ ಸಮಾನವಾಗಿದೆ, ಆದರೂ ಉಷ್ಣೋದಕಕ್ಕಿಂತ ಶೀತೋದಕವು ಪುಣ್ಯಕಾರಕ, ನೀರನ್ನು ಮೇಲೆ ತೆಗೆದು ಸ್ನಾನ ಮಾಡುವುದಕ್ಕಿಂತ ಹರಿಯುವ ನೀರು, ಸರೋವರ, ನದಿ, ಮಹಾನದಿ, ಗಂಗಾ, ಸಮುದ್ರ ಇವುಗಳ ಸ್ನಾನವು ಉತ್ತರೋತ್ತರ ಶ್ರೇಷ್ಠ ಹಾಗೂ ಪುಣ್ಯಕಾರಕವಾಗಿದೆ. ಸೂರ್ಯಗ್ರಹಣದ ಕಾಲದಲ್ಲಿ ನರ್ಮದಾ ಸ್ನಾನದ ವಿಶೇಷ ಮಹತ್ವವನ್ನು ಹೇಳಲಾಗಿದೆ. ನರ್ಮದಾಸ್ನಾನವು ಸಾಧ್ಯವಿಲ್ಲದಿದ್ದರೆ ಸ್ನಾನದ ಸಮಯದಲ್ಲಿ ನರ್ಮದೆಯ ಸ್ಮರಣೆ ಮಾಡಬೇಕು.’ (ಆಧಾರ : ದಾತೆ ಪಂಚಾಂಗ)
೮. ಸೂರ್ಯಗ್ರಹಣದಲ್ಲಿ ಸಾಧನೆಯ ಮಹತ್ವ
ಗ್ರಹಣಕಾಲದಲ್ಲಿನ ವಿಶೇಷ ವಾತಾವರಣದ ಪರಿಣಾಮವು ಪ್ರತಿಯೊಂದು ಸಜೀವದ ಮೇಲಾಗುತ್ತದೆ. ಚಂದ್ರಗ್ರಹಣಕ್ಕಿಂತ ಸೂರ್ಯಗ್ರಹಣದ ಕಾಲವು ಸಾಧನೆಗಾಗಿ ಹೆಚ್ಚು ಪೋಷಕವಾಗಿರುತ್ತದೆ. ಜ್ಯೋತಿಷ್ಯ, ಧಾರ್ಮಿಕ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಗ್ರಹಣ ಕಾಲವನ್ನು ಮಹತ್ವದೆಂದು ನಂಬಲಾಗಿದೆ. ಗ್ರಹಣ ಕಾಲವು ಸಂಧಿಕಾಲವಾಗಿರುವುದರಿಂದ ಈ ಕಾಲದಲ್ಲಿ ಮಾಡಿದ ಸಾಧನೆಯ ಪರಿಣಾಮವು ತಕ್ಷಣವೇ ಸಿಗುತ್ತದೆ. ಗ್ರಹಣಕಾಲದಲ್ಲಿನ ಜಪ ಹಾಗೂ ದಾನದ ಲಾಭವು ಅನಂತಪಟ್ಟುಗಳಲ್ಲಿ ಸಿಗುತ್ತದೆ. ಇದಕ್ಕಾಗಿ ಗ್ರಹಣಮೋಕ್ಷದ ನಂತರ ತಮ್ಮ ಶಕ್ತಿಗನುಸಾರ ದಾನವನ್ನು ಮಾಡಬೇಕು. ಸೂರ್ಯಗ್ರಹಣದಲ್ಲಿ ಹೊಸ ಮಂತ್ರವನ್ನು ತೆಗೆದುಕೊಳ್ಳುವುದು ಹಾಗೂ ಮಂತ್ರದ ಪುರಶ್ಚರಣ ಮಾಡಲು ಸೂರ್ಯಗ್ರಹಣವು ಮುಖ್ಯ ಕಾಲವಾಗಿದೆ. ಮೊದಲಿಗೆ ತೆಗೆದುಕೊಂಡ ಮಂತ್ರದ ಪುರಶ್ಚರಣವನ್ನು ಗ್ರಹಣದ ಪರ್ವಕಾಲದಲ್ಲಿ ಮಾಡಿದರೆ ಮಂತ್ರವು ಸಿದ್ಧವಾಗುತ್ತದೆ. ಸೂರ್ಯ ಗ್ರಹಣದ ಕಾಲದಲ್ಲಿ ಶ್ರೀ ಗುರುಗಳ ಅನನ್ಯಭಾವದಿಂದ ಸ್ಮರಣೆ ಮಾಡಿ ಪೂರ್ಣ ಶ್ರದ್ಧೆಯಿಂದ ಹಾಗೂ ಏಕಾಗ್ರ ಮನಸ್ಸಿನಿಂದ ಮಾಡಿದ ಜಪದಿಂದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ವ್ಯವಹಾರಿಕ ತೊಂದರೆಗಳು ನಾಶವಾಗುತ್ತವೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಗ್ರಹಣಕಾಲದಲ್ಲಿ ಜಪ ಮಾಡಲು ಜಪಮಾಲೆಯ ಆವಶ್ಯಕತೆಯಿರುವುದಿಲ್ಲ. ಗ್ರಹಣಸ್ಪರ್ಶದಿಂದ ಮೋಕ್ಷದವರೆಗಿನ ಸಂಪೂರ್ಣ ಸಮಯವು ಬಹಳ ಮಹತ್ವದ್ದಾಗಿರುತ್ತದೆ.’ – ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಜ್ಯೋತಿಷ್ಯ ವಿಭಾಗ ಪ್ರಮುಖ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೪.೨೦೨೦)