2030 ರ ವೇಳೆಗೆ ವಿದೇಶಿ ರೋಗಿಗಳಿಗೆ ಭಾರತವು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆಯಾಗಲಿದೆ !

ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಹೊರಹೊಮ್ಮಿದ ಭಾರತ !

(ವೈದ್ಯಕೀಯ ಪ್ರವಾಸೋದ್ಯಮ ಎಂದರೆ ಮೆಡಿಕಲ್ ಟೂರಿಸಂ. ಇದರರ್ಥ ವೈದ್ಯಕೀಯ ಚಿಕಿತ್ಸೆ ಪಡೆಯಲು ವಿದೇಶದಿಂದ ಜನರು ಯಾವುದೋ ಒಂದು ದೇಶಕ್ಕೆ ಹೋಗುವ ಪ್ರಕ್ರಿಯೆ.)

ನವದೆಹಲಿ – ಭಾರತವು ಈಗ ವೈದ್ಯಕೀಯ ಪ್ರವಾಸೋದ್ಯಮದ ಒಂದು ದೊಡ್ಡ ಜಾಗತಿಕ ಕೇಂದ್ರವಾಗುವ ದಿಕ್ಕಿನಲ್ಲಿ ಸಾಗುತ್ತಿದೆ. 2009 ರಲ್ಲಿ 1 ಲಕ್ಷದ 12 ಸಾವಿರ ವಿದೇಶಿ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದರು. ಈ ಸಂಖ್ಯೆಯು ಕಳೆದ ವರ್ಷ 5 ಲಕ್ಷದ 7 ಸಾವಿರಕ್ಕೆ ತಲುಪಿದೆ. ಈ ಬೆಳವಣಿಗೆಯು ಸುಮಾರು ನಾಲ್ಕುವರೆ ಪಟ್ಟು ಆಗಿದೆ. ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಮಾರುಕಟ್ಟೆಯು 2025 ರಲ್ಲಿ 84 ಸಾವಿರ ಕೋಟಿ ರೂಪಾಯಿಗಳಾಗಿತ್ತು. ಮುಂದಿನ 5 ವರ್ಷಗಳಲ್ಲಿ, ಅಂದರೆ 2030 ರ ವೇಳೆಗೆ ಅದು ಹೆಚ್ಚಿ 1 ಲಕ್ಷದ 56 ಸಾವಿರ ಕೋಟಿ ರೂಪಾಯಿ, ಅಂದರೆ ಸುಮಾರು ಎರಡರಷ್ಟಾಗಲಿದೆ.

ಈ ದೇಶಗಳಿಂದ ಗರಿಷ್ಠ ಸಂಖ್ಯೆಯ ರೋಗಿಗಳು ಭಾರತಕ್ಕೆ ಬರುತ್ತಾರೆ !

ಬಾಂಗ್ಲಾದೇಶ, ಇರಾಕ್, ಉಜ್ಬೇಕಿಸ್ತಾನ್, ಸೊಮಾಲಿಯಾ, ಓಮಾನ್ ಮತ್ತು ಕೀನ್ಯಾ

ಭಾರತವು ‘ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರ’ವಾಗಲು ಕಾರಣಗಳು ಹೀಗಿವೆ…!

1. ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗುತ್ತವೆ. ಉದಾಹರಣೆಗೆ ಅಮೆರಿಕದಲ್ಲಿ ಯಾವ ಚಿಕಿತ್ಸೆಗೆ 15 ಸಾವಿರ ರೂಪಾಯಿ ವೆಚ್ಚವಾಗುತ್ತದೆಯೋ, ಅದೇ ಚಿಕಿತ್ಸೆಯು ಭಾರತದಲ್ಲಿ 1 ರಿಂದ 2 ಸಾವಿರ ರೂಪಾಯಿಗಳಲ್ಲಿ ಸಾಧ್ಯವಿದೆ.

2. ತಜ್ಞ ವೈದ್ಯರು ಬೇಗನೆ ಲಭ್ಯವಾಗುತ್ತಾರೆ

3. ತಪಾಸಣಾ ವರದಿಗಳು ತಕ್ಷಣ ಸಿಗುತ್ತವೆ

4. ಚಿಕಿತ್ಸೆಯ ವೆಚ್ಚವು ಮೊದಲೇ ನಿಗದಿಯಾಗಿರುತ್ತದೆ

5. ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆಗಳ ಲಭ್ಯತೆ : ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಅತ್ಯಧಿಕ ಆಸ್ಪತ್ರೆಗಳಿವೆ. ಭಾರತದಲ್ಲಿ ಈ ಸಂಖ್ಯೆ 69 ಸಾವಿರ, ಆದರೆ ಚೀನಾದಲ್ಲಿ 39 ಸಾವಿರ ಇದೆ.

6. ಭಾರತವು ವಿಶ್ವದ 172 ದೇಶಗಳಿಗೆ ಇ-ಮೆಡಿಕಲ್ ವೀಸಾ ನೀಡುತ್ತದೆ.

ಭಾರತದಲ್ಲಿ 69 ಸಾವಿರ ಆಸ್ಪತ್ರೆಗಳು !

ಭಾರತದ ಬಳಿ ವೈದ್ಯಕೀಯ ಪ್ರವಾಸೋದ್ಯಮವನ್ನು ನಿರ್ವಹಿಸಲು ದೊಡ್ಡ ಮಟ್ಟದ ಆರೋಗ್ಯ ಮೂಲಸೌಕರ್ಯವೂ ಲಭ್ಯವಿದೆ. ದೇಶದಲ್ಲಿ ಒಟ್ಟು 69 ಸಾವಿರದ 364 ಆಸ್ಪತ್ರೆಗಳಿವೆ. ಇವುಗಳಲ್ಲಿ 43 ಸಾವಿರದ 486 ಖಾಸಗಿ, ಹಾಗೂ 25 ಸಾವಿರದ 778 ಸರಕಾರಿ ಆಸ್ಪತ್ರೆಗಳಾಗಿವೆ. 12 ಲಕ್ಷ ನೋಂದಾಯಿತ ವೈದ್ಯರಿದ್ದಾರೆ.

ಭಾರತದಲ್ಲಿ ವಿವಿಧ ರೀತಿಯ ವೈದ್ಯಕೀಯ ವೀಸಾಗಳು ಲಭ್ಯವಿದೆ !

ವಿದೇಶಿ ರೋಗಿಗಳಿಗೆ ಭಾರತಕ್ಕೆ ಸುಲಭವಾಗಿ ಬರಲು ಅನುಕೂಲವಾಗುವಂತೆ, ಭಾರತವು 172 ದೇಶಗಳಿಗೆ ಇ-ಮೆಡಿಕಲ್ ವೀಸಾ ನೀಡುತ್ತದೆ. ಸಹಾಯಕರಗಾಗಿ ‘ಇ-ಮೆಡಿಕಲ್ ಅಟೆಂಡೆಂಟ್ ವೀಸಾ’ ಸೌಲಭ್ಯವನ್ನೂ ಒದಗಿಸಲಾಗಿದೆ. ಅಷ್ಟೇ ಅಲ್ಲದೆ, ಆಯುರ್ವೇದ, ಯೋಗ, ಯುನಾನಿ ಮತ್ತು ಹೋಮಿಯೋಪತಿಯಂತಹ ಭಾರತೀಯ ಚಿಕಿತ್ಸಾ ಪದ್ಧತಿಗಳಿಂದ ಚಿಕಿತ್ಸೆ ಪಡೆಯುವವರಿಗಾಗಿ ‘ಇ-ಆಯುಷ್ ವೀಸಾ’ ಎಂಬ ಪ್ರತ್ಯೇಕ ವರ್ಗವನ್ನು ಪ್ರಾರಂಭಿಸಲಾಗಿದೆ.