ಆಂಧ್ರಪ್ರದೇಶ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ನಾಯಕ ಜೋಗಿ ರಮೇಶ್ ಅವರ ಸೊಸೆಯಿಂದ ಕೌಟುಂಬಿಕ ಹಿಂಸಾಚಾರದ ದೂರು

  • ಕ್ರಿಶ್ಚಿಯನ್ ಗುರುತನ್ನು ಮರೆಮಾಚಿ ಮದುವೆಯಾಗಿದ್ದಾರೆಂದು ಆರೋಪ

  • ದೇವರೆದುರು ಹಚ್ಚಿದ ಉದಬತ್ತಿ ಪರಿಮಳವನ್ನು ಶವದ ದುರ್ನಾತಕ್ಕೆ ಹೋಲಿಸಿದ ಘಟನೆ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ವೈ.ಎಸ್.ಆರ್. ಕಾಂಗ್ರೆಸ್ (ಯುವಜನ ಶ್ರಮಿಕ ರೈತು ಕಾಂಗ್ರೆಸ್ – ಯುವಕ, ಕಾರ್ಮಿಕ ಮತ್ತು ರೈತರ ಕಾಂಗ್ರೆಸ್) ಪಕ್ಷದ ಹಿರಿಯ ನಾಯಕ ಜೋಗಿ ರಮೇಶ್ ಮತ್ತು ಅವರ ಕುಟುಂಬದ ವಿರುದ್ಧ ಅವರ ಸೊಸೆ ಮೇಘನಾ ಅವರು ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.

ದೂರಿನಲ್ಲಿ ಮೇಘನಾ ಅವರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. “ಮದುವೆ ನಿಶ್ಚಯವಾಗುವಾಗ ಜೋಗಿ ರಮೇಶ್ ಅವರ ಕುಟುಂಬವು ತಾವು ಹಿಂದೂ ಕುಟುಂಬ ಎಂದು ಹೇಳಿಕೊಂಡಿತ್ತು ಮತ್ತು ಮದುವೆಯು ಹಿಂದೂ ಸಂಪ್ರದಾಯ ಮತ್ತು ಪರಂಪರೆಯಂತೆಯೇ ನಡೆದಿತ್ತು; ಆದರೆ ಗಂಡನ ಮನೆಗೆ ಬಂದ ನಂತರ ಈ ಕುಟುಂಬ ವಾಸ್ತವವಾಗಿ ಕ್ರಿಶ್ಚಿಯನ್ ಕುಟುಂಬ ಎಂಬುದು ಕ್ರಮೇಣ ಅರಿವಾಯಿತು. ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿತ್ತು. ಇದೊಂದು ದೊಡ್ಡ ವಂಚನೆಯಾಗಿದೆ. ಒಮ್ಮೆ ನಾನು ಮನೆಯಲ್ಲಿ ಪೂಜೆ ಮಾಡುವಾಗ ದೇವರೆದುರು ಉದಬತ್ತಿ ಹಚ್ಚಿದಾಗ, ಗಂಡನ ಮನೆಯವರು ಕೋಪಗೊಂಡರು. ಧೂಪದ ಸುಗಂಧವನ್ನು ಗೇಲಿ ಮಾಡಿದರು ಮತ್ತು ಅದನ್ನು ಶವದಿಂದ ಬರುವ ದುರ್ನಾತಕ್ಕೆ ಹೋಲಿಸಿದರು. ನಾನು ಇದನ್ನು ವಿರೋಧಿಸಿದಾಗ ನನಗೆ ಬೆದರಿಕೆ ಹಾಕಲಾಯಿತು ಹಾಗೂ ಮನೆಯ ವಿಷಯಗಳನ್ನು ಅಥವಾ ಧರ್ಮಕ್ಕೆ ಸಂಬಂಧಿಸಿದ ಸತ್ಯವನ್ನು ತವರು ಮನೆಯವರಿಗೆ ತಿಳಿಸಬೇಡ ಎಂದು ಎಚ್ಚರಿಕೆ ನೀಡಲಾಯಿತು. ನಾನು ಸುಮ್ಮನಿರದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ‘ಆಂಧ್ರಪ್ರದೇಶದ ಸುಮಾರು ಶೇ. ೨೫% ಕ್ಕಿಂತ ಹೆಚ್ಚು ಹಿಂದೂಗಳು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದು, ಮತಾಂತರಗೊಂಡವರು ಸಾರ್ವಜನಿಕವಾಗಿ ಈ ವಿಷಯವನ್ನು ಮರೆಮಾಚುತ್ತಿದ್ದಾರೆ’, ಎಂದು ಈ ಹಿಂದೆ ಹೇಳಲಾಗಿತ್ತು. ಈ ಘಟನೆಯಿಂದ ಆ ಮಾತು ನಿಜವೆಂದೇ ಕಂಡುಬರುತ್ತಿದೆ!
  • ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಕೂಡ ಕ್ರಿಶ್ಚಿಯನ್ ಆಗಿದ್ದಾರೆ, ಆದ್ದರಿಂದ ಅವರ ಪಕ್ಷದ ನಾಯಕರು ಕ್ರಿಶ್ಚಿಯನ್ ಆಗಿರಬಹುದೆಂದು ಯಾರಾದರೂ ಹೇಳಿದರೆ, ತಪ್ಪಾಗಲಾರದು!