ಪ್ರತಿಪಕ್ಷಗಳ ಗದ್ದಲದಿಂದಾಗಿ ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣಾ ಮಸೂದೆಯ ಕುರಿತು ಚರ್ಚೆ ನಡೆಯಲಿಲ್ಲ !

ವಿದ್ಯಾರ್ಥಿಗಳ ಮೇಲಿನ ಲಾಠಿಪ್ರಹಾರದ ಕುರಿತು ಚರ್ಚಿಸಬೇಕೆಂದು ಪ್ರತಿಪಕ್ಷಗಳು ಆಗ್ರಹ

ಕೇಂದ್ರ ಸಚಿವ ಜಿತೇಂದ್ರ ಸಿಂಗ್

ನವದೆಹಲಿ – ಜುಲೈ 27 ರಂದು ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣಾ ಮಸೂದೆಯ ಕುರಿತು ನಡೆಯಬೇಕಿದ್ದ ಚರ್ಚೆಯು ವಿರೋಧ ಪಕ್ಷದ ಸಂಸದರ ಗದ್ದಲದಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ. ಜಂತರ್ ಮಂತರ್‌ನಲ್ಲಿ ಹಾಗೂ ಬಿಹಾರದ ಸಿವಾನ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಲಾಠಿಪ್ರಹಾರ ಮತ್ತು ಗುಂಡಿನ ದಾಳಿಯ ಘಟನೆಯ ಕುರಿತು ಚರ್ಚೆ ನಡೆಸಬೇಕು ಎಂಬುದು ಪ್ರತಿಪಕ್ಷಗಳ ಬೇಡಿಕೆಯಾಗಿತ್ತು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷದ ಸಂಸದರಿಗೆ, ‘ನಾನು ಸಂಜೆ 5 ಗಂಟೆಯವರೆಗೆ ಸಮಯ ನೀಡುತ್ತೇನೆ. ಸರಕಾರ ಮತ್ತು ವಿರೋಧ ಪಕ್ಷದ ಸಂಸದರು ಈ ವಿಷಯದ ಕುರಿತು ಚರ್ಚಿಸಿ ವಿಷಯವನ್ನು ಮಂಡಿಸಬೇಕು’ ಎಂದು ಹೇಳಿದರು. ಆದರೆ ಈ ವಿಷಯದ ಕುರಿತು ಒಪ್ಪಿಗೆ ಮೂಡಲಿಲ್ಲ. ಅದಕ್ಕೂ ಮುನ್ನ ಲೋಕಸಭೆಯನ್ನು ಮೊದಲು ಮಧ್ಯಾಹ್ನ 12 ಗಂಟೆಯವರೆಗೆ, ನಂತರ 2 ಗಂಟೆಯವರೆಗೆ ಮುಂದೂಡಲಾಯಿತು. ರಾಜ್ಯಸಭೆಯ ಪರಿಸ್ಥಿತಿಯೂ ಹೀಗೆಯೇ ಇತ್ತು. ಇಲ್ಲೂ ಸದನವನ್ನು 2 ಬಾರಿ ಮುಂದೂಡಲಾಗಿತ್ತು. ನಂತರ ಸಂಜೆ 5.15 ಕ್ಕೆ ಇಡೀ ದಿನಕ್ಕೆ ಮುಂದೂಡಲಾಯಿತು. ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷಾ ಸುಧಾರಣಾ ಮಸೂದೆಯನ್ನು ಮಂಡಿಸಿದರು.

ಇನ್ನೊಂದೆಡೆ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಯ ರಾಜೀನಾಮೆಯ ನಂತರ ಮೊದಲ ಬಾರಿಗೆ ಸಂಸತ್ತಿಗೆ ಆಗಮಿಸಿದರು. ಆಡಳಿತ ಪಕ್ಷದ ಸಂಸದರು ಅವರಿಗೆ ಶಾಲು ಹೊದಿಸಿ ಗೌರವಿಸಿ ಸಂಸತ್ ಭವನದ ಒಳಗಿನವರೆಗೆ ಕರೆದೊಯ್ದರು.

ಸಂಪಾದಕೀಯ ನಿಲುವು

  • ಸಂಸತ್ತಿನ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ ಸುಮಾರು ಎರಡು ಮುಕ್ಕಾಲು ಲಕ್ಷ ರೂಪಾಯಿ ವೆಚ್ಚವಾಗುತ್ತಿರುವಾಗ, ಇಂತಹ ಗದ್ದಲ ಎಬ್ಬಿಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿಗಳನ್ನು ವ್ಯರ್ಥ ಮಾಡುವವರಿಂದ ಅದನ್ನು ವಸೂಲಿ ಮಾಡುವುದರ ಜೊತೆಗೆ ಅವರ ಸಂಸತ್ ಸದಸ್ಯತ್ವವನ್ನೂ ರದ್ದುಗೊಳಿಸಬೇಕು !
  • ಇದರಿಂದ ಪ್ರತಿಪಕ್ಷಗಳಿಗೆ ವಿದ್ಯಾರ್ಥಿಗಳ ಬಗ್ಗೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಯಾವುದೇ ಆಸಕ್ತಿಯಿಲ್ಲ, ಕೇವಲ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮಾತ್ರ ಅವರು ಈ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ !