ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ

ಶಿಮ್ಲಾ- ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೂಕುಸಿತಗಳಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಇದರಿಂದಾಗಿ ೧೩೬ ರಸ್ತೆಗಳು ಬಂದ್ ಆಗಿವೆ. ರಾಜ್ಯಕ್ಕೆ ಅಂದಾಜು ೧,೦೦೦ ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ. “ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಸ್ಪಂದನೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ತಕ್ಷಣದ ನೆರವು ನೀಡಲಾಗುತ್ತಿದೆ” ಎಂದು ‘ಹಿಮಾಚಲ ಪ್ರದೇಶ ರಾಜ್ಯ ತುರ್ತು ನಿರ್ವಹಣಾ ಪ್ರಾಧಿಕಾರ’ದ ವಿಶೇಷ ಕಾರ್ಯದರ್ಶಿ ಪುಷ್ಪಿಂದರ್ ರಾಣಾ ತಿಳಿಸಿದ್ದಾರೆ.

ಶಿಮ್ಲಾದ ಭಟ್ಟಾ ಕುಫರ್ ಹಣ್ಣಿನ ಮಾರುಕಟ್ಟೆಯ ಮೇಲಿರುವ ಶಿವ ದೇವಾಲಯದ ಬಳಿ ಭೂಕುಸಿತ ಸಂಭವಿಸಿದ್ದು, ಬೆಟ್ಟದಿಂದ ಬಂಡೆಗಳು ಮತ್ತು ಮಣ್ಣು ಭಾರಿ ಪ್ರಮಾಣದಲ್ಲಿ ಕೆಳಗೆ ಕುಸಿದು ಬಿದ್ದಿದೆ. ಇದರಿಂದಾಗಿ ಭಟ್ಟಾ ಕುಫರ್ ಹಣ್ಣಿನ ಮಾರುಕಟ್ಟೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಇದುವರೆಗೆ ೬೬ ಜನರು ಪ್ರಾಣ ಕಳೆದುಕೊಂಡಿದ್ದಾರೆ.