ಸಿಲಿಗುರಿ ಕಾರಿಡಾರ್ ಈಗ ‘ಚಿಕನ್ ನೆಕ್’ ಆಗಿ ಉಳಿದಿಲ್ಲ, ಬದಲಿಗೆ ‘ಎಲಿಫೆಂಟ್ಸ್ ಟ್ರಂಕ್’ ಆಗಿದೆ!

ಭಾರತೀಯ ಸೇನೆಯ ಮಾಹಿತಿ

(ಸಿಲಿಗುರಿ ಕಾರಿಡಾರ್ – ಪಶ್ಚಿಮ ಬಂಗಾಳದಲ್ಲಿರುವ ಸುಮಾರು ೨೨ ಕಿಲೋಮೀಟರ್ ಉದ್ದದ ಅತ್ಯಂತ ಕಿರಿದಾದ ಭೂಭಾಗ. ಈಶಾನ್ಯದ ೭ ರಾಜ್ಯಗಳನ್ನು ಭಾರತದ ಉಳಿದ ಭಾಗದೊಂದಿಗೆ ಸಂಪರ್ಕಿಸುವ ಏಕೈಕ ಭೂಮಾರ್ಗ ಇದಾಗಿದೆ. ಇದರ ಕಿರಿದಾದ ಸ್ವರೂಪದಿಂದಾಗಿ ಇದನ್ನು ‘ಚಿಕನ್ ನೆಕ್’ (ಕೋಳಿಯ ಕತ್ತು) ಎಂದು ಕರೆಯಲಾಗುತ್ತದೆ.

ನವದೆಹಲಿ – ಈಶಾನ್ಯ ರಾಜ್ಯಗಳನ್ನು ದೇಶದ ಮುಖ್ಯ ಭೂಭಾಗಕ್ಕೆ ಜೋಡಿಸುವ ಸಿಲಿಗುರಿ ಕಾರಿಡಾರ್ ಅನ್ನು ಹಲವು ವರ್ಷಗಳಿಂದ ‘ಚಿಕನ್ ನೆಕ್’ ಎಂದು ಕರೆಯಲಾಗುತ್ತಿತ್ತು. ಏಕೆಂದರೆ, ಬೃಹತ್ ಯುದ್ಧದ ಸನ್ನಿವೇಶದಲ್ಲಿ ಈ ಮಾರ್ಗವನ್ನು ಗುರಿಯಾಗಿಸಿದರೆ ಈಶಾನ್ಯ ಭಾರತದೊಂದಿಗಿನ ಸಂಪರ್ಕ ಕಡಿತಗೊಳ್ಳುವ ಅಪಾಯವಿತ್ತು. ಆದಾಗ್ಯೂ, ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ವರದಿಯ ಪ್ರಕಾರ, ಈ ಕಲ್ಪನೆ ಈಗ ಬದಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಭಾಗವು ಈಗ ‘ಎಲಿಫೆಂಟ್ಸ್ ಟ್ರಂಕ್’ (ಆನೆಯ ಸೊಂಡಿಲು) ಆಗಿ ಮಾರ್ಪಟ್ಟಿದೆ. ಇದು ಶಕ್ತಿ, ನಮ್ಯತೆ ಮತ್ತು ಪರಿಣಾಮಕಾರಿ ಪ್ರತ್ಯುತ್ತರ ನೀಡುವ ಸಾಮರ್ಥ್ಯದ ಸಂಕೇತವಾಗಿದೆ.

ಭಾರತೀಯ ಸೇನೆಯ ‘ಈಸ್ಟರ್ನ್ ಕಮಾಂಡ್’ ನೀಡಿರುವ ಮಾಹಿತಿಯಂತೆ, ೨೦೧೪ ರಿಂದ ಕೇಂದ್ರ ಸರಕಾರವು ಭಾರತದ ಪೂರ್ವ ಗಡಿಯಲ್ಲಿನ ಕಾರ್ಯತಾಂತ್ರಿಕ ಸಿದ್ಧತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಸೈನಿಕ ಮೂಲಸೌಕರ್ಯಗಳ ವಿಸ್ತರಣೆ, ಹೊಸ ರಸ್ತೆಗಳ ನಿರ್ಮಾಣ, ರೈಲ್ವೆ ಜಾಲದ ಸುಧಾರಣೆ, ಆಧುನಿಕ ಕಣ್ಗಾವಲು ವ್ಯವಸ್ಥೆ ಹಾಗೂ ಸೇನೆಯ ಸಂಪರ್ಕ ಜಾಲವನ್ನು ಬಲಪಡಿಸಲು ಭಾರೀ ಪ್ರಮಾಣದ ಹೂಡಿಕೆ ಮಾಡಲಾಗಿದೆ.

ಸೇನೆಯಿಂದ ೩ ಪ್ರಮುಖ ಮಿಲಿಟರಿ ನೆಲೆಗಳ ನಿರ್ಮಾಣ !

೧. ಲಾಚಿತ್ ಬೋರ್ಫುಕನ್ ಮಿಲಿಟರಿ ನೆಲೆ (ಆಸ್ಸಾಂ) – ಧುಬ್ರಿಯ ಬಾಮುನಿ ಪ್ರದೇಶದಲ್ಲಿರುವ ಈ ನೆಲೆಯು ಪೂರ್ವ ವಲಯದಲ್ಲಿನ ಸೇನೆಯ ಸಂಪರ್ಕ ಅಗತ್ಯತೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಇದು ಸೈನಿಕರ ಸಂಚಾರ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಶೇಖರಣೆ, ಉಪಕರಣಗಳ ನಿರ್ವಹಣೆ ಹಾಗೂ ಸೈನಿಕ ಪೂರೈಕೆಗಳ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

೨. ಕಿಶನ್ ಗಂಜ್ ಫಾರ್ವರ್ಡ್ ಬೇಸ್ (ಬಿಹಾರ) – ಈ ನೆಲೆಯು ಕಾರಿಡಾರ್‌ನ ಪಶ್ಚಿಮ ಭಾಗದ ಭದ್ರತೆ ನೋಡಿಕೊಳ್ಳುತ್ತದೆ ಮತ್ತು ಅಗತ್ಯ ಬಿದ್ದಾಗ ಈಶಾನ್ಯಕ್ಕೆ ತೆರಳುವ ಸೇನೆಗೆ ತಕ್ಷಣ ನೆರವು ನೀಡಲು ನೆರವಾಗುತ್ತದೆ.

೩. ಚೋಪ್ರಾ ಫಾರ್ವರ್ಡ್ ಬೇಸ್ (ಬಂಗಾಳ): ಅಂತಾರಾಷ್ಟ್ರೀಯ ಗಡಿಯ ಬಳಿ ಇರುವ ಈ ನೆಲೆಯು ಸಿಲಿಗುರಿ ಕಾರಿಡಾರ್‌ನ ಅತ್ಯಂತ ಕಿರಿದಾದ ಭಾಗದ ಮೇಲೆ ಕಣ್ಣಿಟ್ಟಿರುತ್ತದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸೇನೆ ತಕ್ಷಣ ಪ್ರತಿಕ್ರಿಯಿಸಲು ತಗುಲುವ ಸಮಯವನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ.

೪. ‘ಚಿಕನ್ ನೆಕ್’ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನ – ಇದಲ್ಲದೆ, ಈಶಾನ್ಯ ಭಾರತದ ಸಂಪರ್ಕಕ್ಕಾಗಿ ಕೇವಲ ‘ಸಿಲಿಗುರಿ ಕಾರಿಡಾರ್’ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಮ್ಯಾನ್ಮಾರ್ ಮೂಲಕ ಹಾದುಹೋಗುವ ‘ಕಲಾದಾನ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್’ ಕೆಲಸವೂ ನಡೆಯುತ್ತಿದೆ.

ವೆಬ್‌ಸೈಟ್‌ಗಾಗಿ –

ಬಾಂಗ್ಲಾದೇಶ ಗಡಿಯಲ್ಲಿ ಹೆಚ್ಚಿದ ಜಾಗರೂಕತೆ!

ಬಾಂಗ್ಲಾದೇಶದಲ್ಲಿನ ರಾಜಕೀಯ ಬದಲಾವಣೆಗಳು ಮತ್ತು ಪ್ರಾದೇಶಿಕ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ತನ್ನ ಪೂರ್ವ ಗಡಿಯಲ್ಲಿ ಕಣ್ಗಾವಲನ್ನು ಹೆಚ್ಚಿಸಿದೆ ಎಂದು ಸೇನೆ ಉಲ್ಲೇಖಿಸಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಆಧುನಿಕ ಕಣ್ಗಾವಲು ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

 ಚೀನಾ ಮೇಲೆಯೂ ಗಮನ!

ಸೇನೆಯು ಚೀನಾದ ಚುಂಬಿ ಕಣಿವೆ ಪ್ರದೇಶದ ಮೇಲೆಯೂ ಸೂಕ್ಷ್ಮವಾಗಿ ಕಣ್ಣಿಟ್ಟಿದೆ. ಭೂತಾನ್ ಮತ್ತು ಸಿಕ್ಕಿಂ ನಡುವೆ ಇರುವ ಈ ಪ್ರದೇಶವು ಸಿಲಿಗುರಿ ಕಾರಿಡಾರ್‌ಗೆ ಹತ್ತಿರವಾಗಿರುವುದರಿಂದ ಯಾವಾಗಲೂ ಸಮರತಾಂತ್ರಿಕವಾಗಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿರುವ ಭಾರತದ ‘ತ್ರಿಶಕ್ತಿ ಕಾರ್ಪ್ಸ್’ ಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಇನ್ನಷ್ಟು ಬಲಪಡಿಸಲಾಗಿದೆ.