ಇಂಡೋನೇಷ್ಯಾ: ಅತ್ಯಂತ ದೊಡ್ಡ ಮತ್ತು ಪ್ರಾಚೀನ ಹಿಂದೂ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ.

ಭಾರತ-ಇಂಡೋನೇಷ್ಯಾ ಜೊತೆಗೂಡಿ ದೇವಸ್ಥಾನದ ಜೀರ್ಣೋದ್ಧಾರ

ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ

ಜಕಾರ್ತಾ (ಇಂಡೋನೇಷ್ಯಾ) – ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮುಸಲ್ಮಾನರಿರುವ ಇಸ್ಲಾಮಿಕ್ ದೇಶವಾದ ಇಂಡೋನೇಷ್ಯಾದ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ ೮ ರಂದು ಯೋಗ್ಯಾಕಾರ್ತಾದಲ್ಲಿರುವ ‘ಪ್ರಂಬನನ’ ಎಂಬ ಅತ್ಯಂತ ದೊಡ್ಡ ಪ್ರಾಚೀನ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಇಂಡೋನೇಷ್ಯಾದ ಅಧ್ಯಕ್ಷರಾದ ಪ್ರಬೊವೊ ಸುಬಿಯಾಂತೊ ಅವರು ಪ್ರಧಾನಿ ಜೊತೆಗಿದ್ದರು. ಈ ಇಬ್ಬರೂ ನಾಯಕರು ದೇವಸ್ಥಾನದ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಯೋಜನೆಯನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ದೇವಸ್ಥಾನದಲ್ಲಿ ಪೂಜೆ ಕೂಡ ಸಲ್ಲಿಸಿದರು.

​ಈ ಸಂದರ್ಭದಲ್ಲಿ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘‘ನನಗೆ ಯಾವಾಗಲೂ ಯಾವುದಾದರೊಂದು ರೂಪದಲ್ಲಿ ಭಗವಾನ್ ಶಿವನ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸೋಮನಾಥ, ಕಾಶಿ ವಿಶ್ವನಾಥ, ಕೇದಾರನಾಥ ಧಾಮ ಮತ್ತು ಉಜ್ಜಯಿನಿಯ ಮಹಾಕಾಲ ದೇವಸ್ಥಾನದ ನಂತರ ಈಗ ಪ್ರಂಬನನ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಕೊಡುಗೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ನಾನು ಅತ್ಯಂತ ಭಾಗ್ಯಶಾಲಿ ಎಂದು ಭಾವಿಸುತ್ತೇನೆ’’ ಎಂದರು.

೨೦೨೯ ರಲ್ಲಿ ಜೀರ್ಣೋದ್ಧಾರದ ಪೂರ್ಣಗೊಂಡ ನಂತರ ಮತ್ತೆ ಇಂಡೋನೇಷ್ಯಾಕ್ಕೆ ಬರಲಿದ್ದೇನೆ!

ಅಧ್ಯಕ್ಷ ಪ್ರಬೊವೊ ಅವರಿಗೆ ಈ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ೨೦೨೯ ರ ವೇಳೆಗೆ ಪೂರ್ಣಗೊಳಿಸುವ ಭರವಸೆ ನೀಡಿರುವುದಾಗಿ ಪ್ರಧಾನಿ ಮೋದಿ ಅವರು ಉಲ್ಲೇಖಿಸಿದರು. ಅಲ್ಲದೆ, ಈ ಕೆಲಸ ಪೂರ್ಣಗೊಂಡ ಬಳಿಕ ಅದನ್ನು ಆಸ್ವಾದಿಸಲು ನಾನು ಮತ್ತೊಮ್ಮೆ ಇಂಡೋನೇಷ್ಯಾಕ್ಕೆ ಬರುತ್ತೇನೆಂದು ಮೋದಿ ಅವರು ಮಾತುಕೊಟ್ಟರು.

ಪ್ರಂಬನನ ದೇವಸ್ಥಾನದ ಇತಿಹಾಸ

ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಾಕಾರ್ತಾ ಬಳಿಯಿರುವ ಪ್ರಂಬನನ ದೇವಸ್ಥಾನವು ಆಗ್ನೇಯ ಏಷ್ಯಾದಲ್ಲಿರುವ ಎರಡನೇ ಅತ್ಯಂತ ದೊಡ್ಡ ಹಿಂದೂ ದೇವಸ್ಥಾನವಾಗಿದೆ. ಕಾಂಬೋಡಿಯಾದ ‘ಅಂಗಕೋರ ವಾಟ್’ ದೇವಸ್ಥಾನವು ಪ್ರಥಮ ಸ್ಥಾನದಲ್ಲಿದೆ. ಪ್ರಂಬನನ ದೇವಸ್ಥಾನದ ಸಂಕೀರ್ಣ ೧,೦೦೦ ವರ್ಷಗಳಷ್ಟು ಹಳೆಯದಾಗಿದೆ.

​ಈ ಸಂಕೀರ್ಣದಲ್ಲಿ ಒಂದು ಕಾಲದಲ್ಲಿ ಸುಮಾರು ೨೪೦ ದೇವಸ್ಥಾನಗಳಿದ್ದವು. ಇಲ್ಲಿ ‘ತ್ರಿಮೂರ್ತಿ’ಗಳಿಗೆ ಅಂದರೆ ಭಗವಾನ್ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಮೂರು ಮುಖ್ಯ ದೇವಸ್ಥಾನಗಳಿವೆ. ೪೭ ಮೀಟರ್ ಎತ್ತರವಿರುವ ಶಿವ ದೇವಸ್ಥಾನವು ಅತ್ಯಂತ ದೊಡ್ಡದಾಗಿದೆ. ಈ ದೇವಸ್ಥಾನದ ಗೋಡೆಗಳ ಮೇಲೆ ರಾಮಾಯಣ ಮತ್ತು ಇತರ ಹಿಂದೂ ಧರ್ಮಗ್ರಂಥಗಳಲ್ಲಿನ ಕಥೆಗಳನ್ನು ಕೆತ್ತಲಾಗಿದೆ.