ತ್ರಿವಳಿ ತಲಾಖ್ ಹೆಸರಲ್ಲಿ ಲೈಂಗಿಕ ಶೋಷಣೆಗೆ ಅವಕಾಶವಿಲ್ಲ: ಹೈಕೋರ್ಟ್ : Allahabad High Court Triple Talaq

​(ತ್ರಿವಳಿ ತಲಾಖ್ ಎಂದರೆ ಮುಸಲ್ಮಾನ ಪುರುಷನು ಒಂದೇ ಬಾರಿಗೆ ಮೂರು ಬಾರಿ ‘ತಲಾಖ್’ ಎಂದು ಹೇಳಿ ಪತ್ನಿಗೆ ನೀಡುವ ವಿಚ್ಛೇದನ. ಈ ಪದ್ಧತಿಯನ್ನು 2019 ರಲ್ಲಿ ಭಾರತದಲ್ಲಿ ಅಕ್ರಮ ಎಂದು ಘೋಷಿಸಲಾಗಿದೆ.)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಲಾಹಾಬಾದ ಉಚ್ಚ ನ್ಯಾಯಾಲಯವು ತ್ರಿವಳಿ ತಲಾಖ್ ಮತ್ತು ‘ನಿಕಾಹ್ ಹಲಾಲಾ’ (ಹಲಾಲಾ ಎಂದರೆ ಮೊದಲ ಪತಿಯು ತಲಾಖ್ ನೀಡಿದ ನಂತರ ಮತ್ತೆ ಆತನೊಂದಿಗೇ ವಿವಾಹವಾಗಬೇಕಾದರೆ, ಮಹಿಳೆಯು ಬೇರೆ ಯಾರೊಂದಿಗಾದರೂ ವಿವಾಹವಾಗಿ ಆತನೊಂದಿಗೆ ದೈಹಿಕ ಸಂಬಂಧ ಹೊಂದಿದ ನಂತರ, ಆತ ತಲಾಖ್ ನೀಡಿದ ಬಳಿಕವೇ ಮತ್ತೆ ಮೊದಲ ಪತಿಯೊಂದಿಗೆ ವಿವಾಹವಾಗುವ ಪದ್ಧತಿ) ಮೂಲಕ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ ಮಹಿಳೆಯ ಪ್ರಕರಣದಲ್ಲಿ 9 ಜನರ ವಿರುದ್ಧದ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ‘ಅಪರಾಧಿಕ ಕೃತ್ಯಗಳನ್ನು ರಕ್ಷಿಸಲು ವೈಯಕ್ತಿಕ (ಧಾರ್ಮಿಕ) ಕಾನೂನುಗಳನ್ನು ಆಧಾರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ನ್ಯಾಯಾಲಯವು ಮಹಿಳೆಯ ಮಾಜಿ ಪತಿ, ಮೌಲಾನಾ (ಧರ್ಮಗುರು), ಸಂಬಂಧಿಕರು ಮತ್ತು ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸುವಾಗ ನಿರೀಕ್ಷಣೆ ಮಾಡಿದೆ. ಈ ಪ್ರಕರಣವು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯದ್ದಾಗಿದೆ. ಅಲ್ಲಿ ಮಹಿಳೆಯೊಬ್ಬರು ಬಾಲ್ಯವಿವಾಹ, ತಲಾಖ್, ನಿಕಾಹ್ ಹಲಾಲಾ ಮತ್ತು ಮರುವಿವಾಹದ ಹೆಸರಿನಲ್ಲಿ ಪದೇ ಪದೇ ಲೈಂಗಿಕ ಶೋಷಣೆಯಾಗಿದೆ ಎಂದು ಆರೋಪಿಸಿದ್ದರು.

ಉಚ್ಚ ನ್ಯಾಯಾಲಯವು, ಈ ಆರೋಪಗಳಿಂದ ಅತ್ಯಂತ ಗಂಭೀರ ಸ್ವರೂಪದ ಸತ್ಯಗಳು ಹೊರಬರುತ್ತಿದ್ದು, ಅವು ಮೇಲ್ನೋಟಕ್ಕೆ ಕಾನೂನಿಗೆ ವಿರುದ್ಧವಾಗಿವೆ ಎಂದು ತಿಳಿಸಿದೆ. ಈ ಪ್ರಕರಣದಲ್ಲಿ ತಥಾಕಥಿತವಾಗಿ ಬಳಸಲಾದ ಪದ್ಧತಿಗಳು ಸಮಾಜದ ಒಂದು ‘ಕಪ್ಪು ಪುಟ’ವನ್ನು ಪ್ರದರ್ಶಿಸುತ್ತವೆ ಮತ್ತು ಅವು ಸಾಂವಿಧಾನಿಕ ಮೌಲ್ಯಗಳು, ಸಮಾನತೆ ಹಾಗೂ ಮಾನವ ಘನತೆಗೆ ಅನುಗುಣವಾಗಿಲ್ಲ. ಈ ಕೃತ್ಯವು ಕೇವಲ ಕಾನೂನಿನ ಹೆಸರಿನಲ್ಲಿ ಮಾಡಿದ ಅಪರಾಧ ಮಾತ್ರವಲ್ಲದೆ ಸಮಾಜದ ಸತ್ಸದ್ವಿವೇಕ ಬುದ್ಧಿಗೆ ಧಕ್ಕೆ ತರುವಂತಹದ್ದಾಗಿದೆ. ಅಪರಾಧಿಕ ಕೃತ್ಯವನ್ನು ಮುಚ್ಚಿಡಲು ವೈಯಕ್ತಿಕ ಕಾನೂನುಗಳನ್ನು ಗುರಾಣಿಯಾಗಿ ಬಳಸಲು ಸಾಧ್ಯವಿಲ್ಲ.

ಯಾವ ಪ್ರಕರಣ ?

ದೂರುದಾರ ಮಹಿಳೆಯ ವಯಸ್ಸು ಏಪ್ರಿಲ್ 2015 ರಲ್ಲಿ ಸುಮಾರು 15 ವರ್ಷಗಳಾಗಿದ್ದಾಗ, ಆಕೆಗೆ ಅಝರ್ ನವಾಜ್ ಎಂಬ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿತ್ತು. ಜನವರಿ 2016 ರಲ್ಲಿ ಅಝರ್ ತಥಾಕಥಿತವಾಗಿ ತ್ರಿವಳಿ ತಲಾಖ್ ನೀಡಿದ ನಂತರ, 2017 ರಲ್ಲಿ ಅಝರ್ ಜೊತೆ ಮತ್ತೆ ವಿವಾಹವಾಗುವ ಮುನ್ನ ಆಕೆಗೆ ಮೌಲಾನಾ ಖಯ್ಯೂಮ್ ಜೊತೆಗೆ ‘ನಿಕಾಹ್ ಹಲಾಲಾ’ ಮಾಡಲು ಒತ್ತಾಯಿಸಲಾಯಿತು. 2021 ರಲ್ಲಿ ಮತ್ತೆ ವಿಚ್ಛೇದನವಾದ ನಂತರ ಅಝರ್ ಮತ್ತೆ ಒಂದಾಗುವ ಇಚ್ಛೆಯನ್ನು ವ್ಯಕ್ತಪಡಿಸಿದನು. ಆತನ ಸಹೋದರ ಶಹನವಾಜ್ ಚೌಧರಿ ಮತ್ತು ಸಂಬಂಧಿ ಹಕೀಮ್ ನಿಶಾತ್ ಅವರು ಪೀಡಿತೆಗೆ, ಆಕೆಯ ಎರಡು ಬಾರಿ ವಿಚ್ಛೇದನವಾಗಿರುವುದರಿಂದ ಅಝರ್ ಜೊತೆ ಮತ್ತೆ ವಿವಾಹವಾಗುವ ಮುನ್ನ ಎರಡು ಬಾರಿ ನಿಕಾಹ್ ಹಲಾಲಾ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು. ಈ ಪದ್ಧತಿಯ ಹೆಸರಿನಲ್ಲಿ ಶಹನವಾಜ್ ಮತ್ತು ನಿಶಾತ್ ಫೆಬ್ರವರಿ 2025 ರಲ್ಲಿ ಪೀಡಿತೆಯ ಮೇಲೆ ಬಲಾತ್ಕಾರ ಮಾಡಿದರು ಮತ್ತು ವಿರೋಧಿಸಿದರೆ ಆಕೆಯನ್ನು ಹಾಗೂ ಆಕೆಯ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.

ಸಂಪಾದಕೀಯ ನಿಲುವು

ತ್ರಿವಳಿ ತಲಾಖ್ ಕಾನೂನಿನ ಪ್ರಕಾರ ಅಪರಾಧ ಆಗಿರುವುದರಿಂದ ಇಂತಹ ಅಪರಾಧ ಮಾಡುವವರನ್ನು ಜೈಲಿಗೆ ಹಾಕಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !