ಮಹಾಕುಂಭ ಅವಧಿಯಲ್ಲಿ ಇನ್ನು ಹೆಚ್ಚಿನ ದುರುಪಯೋಗ ನಡೆದಿರುವ ಶಂಕೆ!

ಶ್ರೀರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ

ಅಯೋಧ್ಯಾ (ಉತ್ತರ ಪ್ರದೇಶ) – ಪ್ರಯಾಗ್‌ರಾಜ್‌ನಲ್ಲಿ ಜನವರಿ ಮತ್ತು ಫೆಬ್ರವರಿ ೨೦೨೫ ರಲ್ಲಿ ನಡೆದ ಮಹಾಕುಂಭ ಪರ್ವದ ಅವಧಿಯಲ್ಲಿ, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರ ಸಂಖ್ಯೆ ಮತ್ತು ದೇಣಿಗೆಯ ಪ್ರಮಾಣವು ಭಾರೀ ಹೆಚ್ಚಾದ ನಂತರ, ಈ ದುರುಪಯೋಗವು ಇನ್ನು ಹೆಚ್ಚಿನ ಸಂಘಟಿತ ರೀತಿಯಲ್ಲಿ ನಡೆದಿರಬಹುದೆಂಬ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಇದೇ ಅವಧಿಯಲ್ಲಿ ಹಣ ಎಣಿಸುವ ಪ್ರಕ್ರಿಯೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ಮಹಾಕುಂಭ ಪರ್ವದ ೪೫ ದಿನಗಳ ಅವಧಿಯಲ್ಲಿ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ಭಾರಿ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಗೆ ಸಹಾಯ ಮಾಡಲು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಶಿಫಾರಸಿನ ಮೇರೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಯಿತು. ದೇಣಿಗೆ ನೀಡಿದ ಹಣವನ್ನು ಎಣಿಸಲು ಮತ್ತು ಬ್ಯಾಂಕಿನ ಶಾಖೆಗೆ ಕಳುಹಿಸುವ ಕೆಲಸಕ್ಕಾಗಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಸಂಸ್ಥೆಯು ‘ಸೈನಿಕ ಸೆಕ್ಯುರಿಟಿ ಸರ್ವಿಸಸ್’ ಅನ್ನು ನೇಮಿಸಿತ್ತು.

‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ನಮಗೆ ನೇಮಕ ಮಾಡಿಕೊಳ್ಳಬೇಕಾದ ಜನರ ಹೆಸರುಗಳನ್ನು ನೀಡಿತ್ತು! – ಸೆಕ್ಯುರಿಟಿ ಸರ್ವಿಸಸ್

ಸೈನಿಕ ಸೆಕ್ಯುರಿಟಿ ಸರ್ವಿಸಸ್‌ನ ನಿರ್ದೇಶಕ ಗೌರವ್ ಸಿಂಹ ಮಾತನಾಡಿ, ‘‘ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳಿಗೆ ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ನಮ್ಮ ಸಂಸ್ಥೆ ಸಿಬ್ಬಂದಿಯನ್ನು ಒದಗಿಸುತ್ತದೆ. ನಾವು ಬ್ಯಾಂಕಿನ ಕೆಲಸಗಳಿಗಾಗಿ ಸಂಬಂಧಿತ ನುರಿತ ಮಾನವ ಸಂಪನ್ಮೂಲವನ್ನು ಒದಗಿಸುವುದಿಲ್ಲ. ಸಂಬಂಧಪಟ್ಟ ಬ್ಯಾಂಕ್ ಅಥವಾ ಸಂಸ್ಥೆಯು ಆ ಸಿಬ್ಬಂದಿಯಿಂದ ಯಾವ ಕೆಲಸ ಮಾಡಿಸಿಕೊಳ್ಳುತ್ತದೆ ಎಂಬುದು ಅವರಿಗೆ ಬಿಟ್ಟ ವಿಷಯವಾಗಿದೆ. ಶ್ರೀರಾಮ ಮಂದಿರದ ನೇಮಕಾತಿ ಪ್ರಕ್ರಿಯೆಯಲ್ಲಿ ಜನರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮ್ಮ ಸಂಸ್ಥೆಗಿರಲಿಲ್ಲ. ಈ ಪ್ರಕರಣದಲ್ಲಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ನಮಗೆ ನೇಮಕ ಮಾಡಿಕೊಳ್ಳಬೇಕಾದ ಕೆಲ ಜನರ ಹೆಸರುಗಳನ್ನು ನೀಡಿತ್ತು. ನಾವು ಕೇವಲ ಅವರ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದ್ದೆವು. ನೇಮಕಗೊಂಡವರು ಈ ಹಿಂದೆ ಎಂದಿಗೂ ನಮ್ಮೊಂದಿಗೆ ಕೆಲಸ ಮಾಡಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪುರಾವೆಗಳನ್ನು ವಿಶೇಷ ತನಿಖಾ ತಂಡಕ್ಕೆ (SIT) ಹಸ್ತಾಂತರಿಸಲಾಗಿದೆ’’ ಎಂದು ಹೇಳಿದರು.