ಭಾರತದ ಬಿಸಿಲಿಗೆ ಅಪಹಾಸ್ಯ, ಯುರೋಪ್‌ಗೆ ಮಾತ್ರ ಸಹಾನುಭೂತಿ? : Europe Heatwave Bias

ತೀವ್ರ ಉಷ್ಣತೆಯ ಅಲೆಯ ಕುರಿತು ಜಾಗತಿಕ ಮಾಧ್ಯಮಗಳ ದ್ವಂದ್ವ ನಿಲುವಿನ ವಿರುದ್ಧ ಪೋಲೆಂಡ್ ಮಹಿಳೆಯಿಂದ ತೀವ್ರ ವಾಗ್ದಾಳಿ !

ನವ ದೆಹಲಿ – ನಾನೀಗ ಪೋಲೆಂಡ್‌ನಲ್ಲಿದ್ದೇನೆ, ಇಲ್ಲಿನ ತಾಪಮಾನವು ಎಂದೂ ಊಹಿಸದ ರೀತಿಯಲ್ಲಿ ೩೫ ಡಿಗ್ರಿ ಸೆಲ್ಸಿಯಸ್‌ ಗೆ ತಲುಪಿದೆ. ಭಾರತವು ಬಿಸಿಲನ್ನು ಎದುರಿಸುವಾಗ ಅದನ್ನು ‘ವೈಫಲ್ಯ’ ಎಂದು ಕರೆಯಲಾಗುತ್ತದೆ ಮತ್ತು ಪಾಶ್ಚಿಮಾತ್ಯ ಜಗತ್ತು ಬಿಸಿಲನ್ನು ಎದುರಿಸುವಾಗ ಅದನ್ನು ‘ದುರಂತ’ ಎಂದು ಕರೆಯಲಾಗುತ್ತದೆ ಎಂಬ ತೀಕ್ಷ್ಣ ಮಾತುಗಳಲ್ಲಿ ಭಾರತದಲ್ಲಿ ವಾಸಿಸುತ್ತಿರುವ ಪೋಲೆಂಡ್ ಮೂಲದ ಅಗ್ನಿಯೆಸ್ಕಾ ಹಡಾಲಾ ಎಂಬ ಮಹಿಳೆಯು ಹವಾಮಾನ ವೈಪರೀತ್ಯದ ವರದಿಗಳ ಕುರಿತು ಜಾಗತಿಕ ಮಾಧ್ಯಮಗಳ ದ್ವಂದ್ವ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರು ‘ಇನ್‌ ಸ್ಟಾಗ್ರಾಮ್’ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಸೀರೆ ಉಟ್ಟು, ಹಣೆಯ ಮೇಲೆ ಬಿಂದಿಗೆ ಹಚ್ಚಿರುವುದು ಕಂಡುಬಂದಿದೆ.

ಭಾರತದ ಕಷ್ಟ ‘ವೈಫಲ್ಯ’, ಯುರೋಪ್‌ ನ ಕಷ್ಟ ‘ದುರಂತ’ !

ಹಡಾಲಾ ಅವರು, ಯುರೋಪ್‌ ನಲ್ಲಿ ಶಾಲೆಗಳನ್ನು ಮುಚ್ಚಲಾಗುತ್ತಿದೆ, ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತಿದೆ, ರಸ್ತೆಗಳು ಮತ್ತು ರೈಲ್ವೆ ಹಳಿಗಳು ಕರಗುತ್ತಿವೆ ಹಾಗೂ ಹವಾನಿಯಂತ್ರಣ ಯಂತ್ರಗಳ (ಎಸಿ) ಬೇಡಿಕೆ ಹೆಚ್ಚಾದ ಕಾರಣ ವಿದ್ಯುತ್ ವ್ಯವಸ್ಥೆಯು ಕುಸಿದುಬಿದ್ದಿದೆ ಎಂದು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಇರುವಂತೆ ಯುರೋಪ್‌ ನ ಅನೇಕ ಮನೆಗಳು ಮತ್ತು ಕಚೇರಿಗಳಲ್ಲಿ ಎಸಿ ಅಥವಾ ಸಾಮಾನ್ಯ ಫ್ಯಾನ್‌ ಗಳೂ ಇಲ್ಲ. ಭಾರತದ ಅನೇಕ ಭಾಗಗಳಲ್ಲಿ ೪೦ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು ಸಾಮಾನ್ಯ ಸಂಗತಿಯಾಗಿದೆ. ಈಗ ಯೋಚಿಸಿ ! ಭಾರತದ ಅನೇಕ ಸ್ಥಳಗಳಲ್ಲಿ ೩೫ ಡಿಗ್ರಿ ತಾಪಮಾನವನ್ನು ಆಹ್ಲಾದಕರ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಬೇಸಿಗೆಯು ನಿಯಮಿತವಾಗಿ ೪೦ ಡಿಗ್ರಿ ದಾಟುತ್ತದೆ ಮತ್ತು ಕೆಲವು ಭಾಗಗಳಲ್ಲಂತೂ ಅದು ೫೦ ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪುತ್ತದೆ. ಆದಾಗ್ಯೂ, ಭಾರತದ ಮುಂದೆ ಯಾವುದೇ ಸವಾಲು ಎದುರಾದಾಗ ವಿದೇಶಿ ಮಾಧ್ಯಮಗಳು ಭಾರತವನ್ನು ‘ಹಿಂದುಳಿದ ದೇಶ’ ಎಂದು ಕರೆಯಲು ಮುಂಚೂಣಿಯಲ್ಲಿರುತ್ತವೆ; ಆದರೆ ಇಂದು ಯುರೋಪ್‌ ನ ಪರಿಸ್ಥಿತಿ ಹೀಗಾದಾಗ ‘ಅಂತಹ ಮುಖ್ಯಾಂಶಗಳು ಎಲ್ಲಿ ಮಾಯವಾಗಿವೆ?’, ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬಯಿಯ ವರ್ಸೋವಾ ಕಡಲತೀರದಲ್ಲಿ ಮಲಗಿದ್ದವರ ಸಮರ್ಥನೆ

ಹಡಾಲಾ ಮಾತು ಮುಂದುವರೆಸಿ, ವಿದ್ಯುತ್ ಕೈಕೊಟ್ಟಿದ್ದರಿಂದ ಮುಂಬಯಿಯ ವೆಸಾವೆ (ವರ್ಸೋವಾ) ಕಡಲತೀರದಲ್ಲಿ ಅಥವಾ ಉದ್ಯಾನವನಗಳಲ್ಲಿ ಮಲಗಿದ್ದ ಭಾರತೀಯರ ಛಾಯಾಚಿತ್ರಗಳನ್ನು ಪ್ರಪಂಚದಾದ್ಯಂತ ಪ್ರಸಾರ ಮಾಡಿದ್ದು ನಿಮಗೆ ನೆನಪಿದೆಯೇ? ಅದರ ಬಗ್ಗೆ ಜೋಕ್‌ ಗಳನ್ನು ಮಾಡಿ ಭಾರತವನ್ನು ಅಪಹಾಸ್ಯ ಮಾಡಲಾಯಿತು. ಇಂದು ಯುರೋಪ್‌ ನ ಅನೇಕ ಭಾಗಗಳಲ್ಲಿ ಜನರು ರಾತ್ರಿಯ ವೇಳೆ ಕಡಲತೀರಗಳಲ್ಲಿ ಮತ್ತು ಉದ್ಯಾನವನಗಳ ಹುಲ್ಲಿನ ಮೇಲೆ ಮಲಗುತ್ತಿದ್ದಾರೆ; ಏಕೆಂದರೆ ಅವರಿಗೆ ಲಭ್ಯವಿರುವ ಅತ್ಯಂತ ಅಗ್ಗದ ‘ಎಸಿ’ಯ ಪರ್ಯಾಯ ಇದಾಗಿದೆ; ಆದರೆ ಈ ಬಾರಿ ಜಗತ್ತು ಅವರನ್ನ ನೋಡಿ ನಗುತ್ತಿಲ್ಲ, ಬದಲಿಗೆ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದೆ. ವಾಸ್ತವವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಸಹಾನುಭೂತಿ ಪಡೆಯುವ ಹಕ್ಕಿದೆ ಎಂದಿದ್ದಾರೆ.

ಹವಾಮಾನ ವೈಪರೀತ್ಯವು ಜಾಗತಿಕ ವಾಸ್ತವ !

ವಿಡಿಯೋದ ದ್ವಿತೀಯಾರ್ಧದಲ್ಲಿ ಅವರು, ಹವಾಮಾನದಲ್ಲಿನ ತೀವ್ರ ಬದಲಾವಣೆಗಳು ಜಾಗತಿಕ ವಾಸ್ತವತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ದೇಶವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವು ಕಾರಣಗಳಿಗಾಗಿ ಕೇವಲ ಭಾರತದಿಂದ ಮಾತ್ರ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ. ಸುಮಾರು ೧೪೦ ಕೋಟಿ ಜನಸಂಖ್ಯೆ ಹೊಂದಿರುವ ದೇಶವನ್ನು ನಿರ್ವಹಿಸುವುದು ಸಣ್ಣ ದೇಶಗಳನ್ನು ನಿರ್ವಹಿಸುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ನಾವು ಇಬ್ಬರು ವ್ಯಕ್ತಿಗಳ ಕುಟುಂಬವನ್ನು ನಡೆಸುವುದನ್ನು ನೂರಾರು ಜನರ ಕುಟುಂಬವನ್ನು ನಡೆಸುವುದರೊಂದಿಗೆ ಹೋಲಿಸಿದರೆ ಅದು ತಪ್ಪಾಗುತ್ತದೆ. ಇಷ್ಟೊಂದು ದೊಡ್ಡ ಸವಾಲುಗಳಿದ್ದಾಗ್ಯೂ, ಭಾರತವು ಕಳೆದ ದಶಕದಲ್ಲಿ ಅಭೂತಪೂರ್ವ ವೇಗದಲ್ಲಿ ವಿಶ್ವದ ಅತಿ ದೊಡ್ಡ ಮೆಟ್ರೋ ನೆಟ್‌ ವರ್ಕ್‌ಗಳಲ್ಲಿ ಒಂದನ್ನು ನಿರ್ಮಿಸಿದೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಡಿಜಿಟಲ್ ಪಾವತಿ ವ್ಯವಸ್ಥೆ, ಕೈಗೆಟುಕುವ ಕೂಲಿಂಗ್ ಆಯ್ಕೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ವಿಸ್ತರಿಸಿದೆ. ಭಾರತವನ್ನು ಎಲ್ಲಿ ಟೀಕಿಸಬೇಕೋ ಅಲ್ಲಿ ಟೀಕಿಸಿ, ಅದು ಯೋಗ್ಯವಾಗಿದೆ; ಆದರೆ ಭಾರತದ ಯಶಸ್ಸನ್ನು ಅಷ್ಟೇ ಆತ್ಮವಿಶ್ವಾಸದಿಂದ ಆಚರಿಸಿ; ಏಕೆಂದರೆ ನಾವು ನಮ್ಮ ದೇಶವನ್ನು ಗೌರವಿಸದಿದ್ದರೆ, ಬೇರೆ ಯಾರೂ ಗೌರವಿಸುವುದಿಲ್ಲ ಎಂದು ಹೇಳಿದ್ದಾರೆ.