ಚಂಪತ್ ರಾಯ್ ವಿರುದ್ಧ ಕೇಸ್‌ ಆಗ್ರಹಿಸಿ ಅಯೋಧ್ಯೆಯಲ್ಲಿ ವಕೀಲರ ಪ್ರತಿಭಟನೆ : Ayodhya Protest News

ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣ

ಅಯೋಧ್ಯೆ (ಉತ್ತರ ಪ್ರದೇಶ) – ಜುಲೈ 2 ರ ಬೆಳಗ್ಗೆ ನಗರದಲ್ಲಿ 500 ಕ್ಕೂ ಹೆಚ್ಚು ವಕೀಲರು ಬೀದಿಗಿಳಿದು ಪ್ರತಿಭಟಿಸಿದರು. ಅಯೋಧ್ಯಾ ಬಾರ್ ಅಸೋಸಿಯೇಷನ್‌ನ ಈ ಸದಸ್ಯರು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳಾದ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರು ಶ್ರೀರಾಮ ಮಂದಿರದ ದಾನದ ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿ ತೀವ್ರ ಘೋಷಣೆ ಕೂಗಿದರು. ವಕೀಲರು ಸಿವಿಲ್ ಲೈನ್ಸ್ ಪೊಲೀಸ್ ಚೌಕಿಗೆ ತೆರಳಿ ಈ ಮೂವರು ಸೇರಿದಂತೆ ಒಟ್ಟು 4 ಜನರ ವಿರುದ್ಧ ದೂರು ನೀಡಿದರು. ಫೈಜಾಬಾದ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಾಲಿಕಾ ಪ್ರಸಾದ್ ಮಿಶ್ರಾ ಅವರ ನೇತೃತ್ವದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಅಯೋಧ್ಯಾ ಪೊಲೀಸ್ ಠಾಣೆಯ ಕಡೆಗೆ ಹೊರಟಿದ್ದ ವಕೀಲರನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದರು.

ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ಜೈಸ್ವಾಲ್ ಮಾತನಾಡಿ, ಪೊಲೀಸರು ಪ್ರಕರಣ ದಾಖಲಿಸದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಲಾಗುವುದು ಎಂದು ತಿಳಿಸಿದರು. ಅಯೋಧ್ಯಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಾಲಿಕಾ ಪ್ರಸಾದ್ ಮಿಶ್ರಾ ಅವರು, “ಪೊಲೀಸರಿಗೆ ನಮ್ಮ ದೂರು ತಲುಪಿದೆ. ಅವರು ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಮ್ಮ ದೂರಿನಲ್ಲಿ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರ ಹೆಸರುಗಳಿವೆ” ಎಂದು ಹೇಳಿದರು.

ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ್ !

ಮೂಲಗಳ ಪ್ರಕಾರ, ಶ್ರೀರಾಮ ಮಂದಿರದ ದೇಣಿಗೆ ಹಣ ಕಳ್ಳತನದ ಆರೋಪಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಆಡಳಿತ ಮಂಡಳಿಯು ಆರೋಪಿಗಳ ಹೊಸ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಲು ಸಿದ್ಧತೆ ನಡೆಸಿದೆ. ಯಾವ ಮನೆಗಳ ನಕ್ಷೆ (ಪ್ಲಾನ್) ಮಂಜೂರಾಗಿಲ್ಲವೋ ಅಥವಾ ಯಾರು ನಿಯಮಗಳನ್ನು ಉಲ್ಲಂಘಿಸಿದ್ದಾರೋ, ಅಂತಹ ಮನೆಗಳನ್ನು ಅಯೋಧ್ಯಾ ನಗರಾಭಿವೃದ್ಧಿ ಪ್ರಾಧಿಕಾರವು ಗುರುತಿಸಿದೆ. (ಯಾರಾದರೂ ಅಪರಾಧ ಮಾಡಿದಾಗ ಮಾತ್ರ ಆಡಳಿತ ಮಂಡಳಿಗೆ ಈ ವಿಷಯ ತಿಳಿಯುತ್ತದೆಯೇ? ಉಳಿದ ಸಮಯದಲ್ಲಿ ಆಡಳಿತ ಮಂಡಳಿ ನಿದ್ದೆ ಮಾಡುತ್ತಿರುತ್ತದೆಯೇ ಅಥವಾ ಹಣ ಪಡೆದು ಸುಮ್ಮನಿರುತ್ತದೆಯೇ? – ಸಂಪಾದಕರು)

ಗೋಪಾಲ್ ರಾವ್ ಅವರು ಶ್ರೀರಾಮನ ಪರಂಪರೆಯನ್ನು ನಂಬುವುದಿಲ್ಲ! – ಟ್ರಸ್ಟ್ ಸದಸ್ಯ ಮಹಂತ್ ದಿನೇಂದ್ರ ದಾಸ್ ಅವರ ಆರೋಪ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಮಹಂತ್ ದಿನೇಂದ್ರ ದಾಸ್ ಮಾತನಾಡಿ, “ಈ ಇಡೀ ವಿವಾದಕ್ಕೆ ಮಂದಿರದ ಸಹಾಯಕ ಆಡಳಿತಾಧಿಕಾರಿ ಗೋಪಾಲ್ ರಾವ್ ಅವರೇ ಕಾರಣ. ಉತ್ತರ ಪ್ರದೇಶದ ಟ್ರಸ್ಟಿಗಳು ಪ್ರಭು ಶ್ರೀರಾಮನ ಪರಂಪರೆಗಳನ್ನು ಪಾಲಿಸುತ್ತಾರೆ, ಆದರೆ ಗೋಪಾಲ್ ರಾವ್ ಪಾಲಿಸುವುದಿಲ್ಲ. ಗೋಪಾಲ್ ರಾವ್ ಅವರು ಅನಾವಶ್ಯಕವಾಗಿ ವಿಷಯಗಳನ್ನು ಸಂಕೀರ್ಣಗೊಳಿಸುತ್ತಾರೆ ಮತ್ತು ಇದೇ ಕಾರಣದಿಂದಾಗಿ ಈ ವಿವಾದ ಉಲ್ಬಣಗೊಂಡಿದೆ. ಮಂದಿರದ ಆಡಳಿತದಲ್ಲಿ ರಾಜಕೀಯದ ವಾತಾವರಣ ನಿರ್ಮಿಸಲಾಗುತ್ತಿದೆ” ಎಂದು ಆರೋಪಿಸಿದರು. ಗೋಪಾಲ್ ರಾವ್ ಅವರು ರಾಮ ಮಂದಿರದ ನಿರ್ಮಾಣ ಉಸ್ತುವಾರಿ ಮತ್ತು ಟ್ರಸ್ಟ್‌ನ ಆಹ್ವಾನಿತ ಸದಸ್ಯರಾಗಿದ್ದರು. ಅವರು ಮೂಲತಃ ಕರ್ನಾಟಕದ ನಿವಾಸಿಯಾಗಿದ್ದಾರೆ.