ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಮತ್ತು ಈ ವಾಸ್ತವದಿಂದ ಯಾರೂ ಮುಖ ತಿರುಗಿಸಲು ಸಾಧ್ಯವಿಲ್ಲ! : Madras High Court

  • ಮದ್ರಾಸ್ ಉಚ್ಚನ್ಯಾಯಾಲಯದ ಮಹತ್ವದ ನಿರೀಕ್ಷಣೆ

  • ‘ನ್ಯಾಯಾಧೀಶರನ್ನು ಯಾರೂ ಹಸುಗಳಂತೆ ಪವಿತ್ರರೆಂದು ಭಾವಿಸಬೇಕಾದ ಅಗತ್ಯವಿಲ್ಲ’ ಎಂದೂ ಹೇಳಿಕೆ ನೀಡಿದ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಮತ್ತು ಈ ವಾಸ್ತವದಿಂದ ಯಾರೂ ಮುಖ ತಿರುಗಿಸಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಧೀಶರನ್ನು ಯಾರೂ ಹಸುಗಳಂತೆ ಪವಿತ್ರರೆಂದು ಭಾವಿಸಬೇಕಾದ ಅಗತ್ಯವಿಲ್ಲ ಎಂದು ಮದ್ರಾಸ್ ಉಚ್ಚನ್ಯಾಯಾಲಯ ಟಿಪ್ಪಣಿ ಮಾಡಿದೆ. ಕೆಳಹಂತದ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡುವ ‘ಕರುಪ್ಪು’ ಎಂಬ ತಮಿಳು ಚಲನಚಿತ್ರವನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಉಚ್ಚನ್ಯಾಯಾಲಯ ಈ ಸಂದರ್ಭದಲ್ಲಿ ವಜಾಗೊಳಿಸಿದೆ. ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರ ಪೀಠವು ಈ ತೀರ್ಪು ನೀಡಿದೆ.

ನ್ಯಾಯವಾದಿ ಆರ್.ಎಸ್. ತಮಿಳರ್ವೇದಮ್ ಅವರು ಈ ಅರ್ಜಿಯನ್ನು ದಾಖಲಿಸಿದ್ದರು. ಈ ಚಲನಚಿತ್ರದಲ್ಲಿ ನ್ಯಾಯಾಲಯದ ವರ್ಚಸ್ಸನ್ನು ಅತ್ಯಂತ ತಪ್ಪಾದ ರೀತಿಯಲ್ಲಿ ಮಲಿನಗೊಳಿಸಲಾಗಿದೆ ಮತ್ತು ಇದರಿಂದ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅವಮಾನವಾಗುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಮಂಡಿಸಿದ ಮುಖ್ಯಾಂಶಗಳು!

ಹಿಂದೆಯೂ ಭ್ರಷ್ಟ ನ್ಯಾಯಾಧೀಶರಿದ್ದರು ಮತ್ತು ಇಂದಿಗೂ ಇದ್ದಾರೆ!

ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಹಿಂದೆಯೂ ಭ್ರಷ್ಟ ನ್ಯಾಯಾಧೀಶರಿದ್ದರು ಮತ್ತು ಇಂದಿಗೂ ಇದ್ದಾರೆ. ಆದ್ದರಿಂದ ನ್ಯಾಯಮೂರ್ತಿಗಳ ಮೇಲೆ ಟೀಕೆಯೇ ಮಾಡಲು ಸಾಧ್ಯವಿಲ್ಲ ಎಂದೇನೂ ಇಲ್ಲ. ನ್ಯಾಯ ಎಂಬುದು ಮುಚ್ಚಿದ ಕೋಣೆಯಲ್ಲಿ ಇರುವಂತಹ ವಸ್ತುವಲ್ಲ. ಸಾಮಾನ್ಯ ಜನರು ಮರ್ಯಾದೆಯ ಚೌಕಟ್ಟನ್ನು ಮೀರದೆಯೇ ಮಾಡಿರುವ ಸ್ಪಷ್ಟ ಟೀಕೆಯನ್ನು ಸ್ವಾಗತಿಸಲೇಬೇಕು.

ತಮಿಳು ಚಲನಚಿತ್ರಗಳಲ್ಲಿ ನಾಟಕೀಯತೆ ಇದ್ದೇ ಇರುತ್ತದೆ!

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ತಾವು ಸ್ವತಃ ಈ ಚಲನಚಿತ್ರವನ್ನು ವೀಕ್ಷಿಸಿರುವುದಾಗಿ ಸ್ಪಷ್ಟಪಡಿಸಿದರು. ಚಲನಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಚಿತ್ರಣವು ಖಂಡಿತವಾಗಿಯೂ ಅತಿಶಯೋಕ್ತಿಯಿಂದ ಕೂಡಿದೆ; ಆದರೆ ತಮಿಳು ಚಲನಚಿತ್ರಗಳಲ್ಲಿ ಇಂತಹ ನಾಟಕೀಯತೆ ಸಾಮಾನ್ಯವಾಗಿದೆ. ಚಿತ್ರದಲ್ಲಿ ತೋರಿಸಿರುವ ವಿಷಯಗಳನ್ನು ಉತ್ಪ್ರೇಕ್ಷೆ ಮಾಡಿ ಹೇಳಿರುವುದು ನಿಜ; ಆದರೆ ತಮಿಳು ಚಲನಚಿತ್ರಗಳನ್ನು ಇದೇ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ತೆರೆಯ ಮೇಲೆ ನಾಯಕ ಒಬ್ಬನೇ ಹಲವು ಜನ ಗೂಂಡಾಗಳನ್ನು ಧೂಳೀಪಟ ಮಾಡುತ್ತಾನೆ.

ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕು

ಕಲಾವಿದರಿಗೆ ತಮ್ಮದೇ ಆದ ರೀತಿಯಲ್ಲಿ ಕಥೆಯನ್ನು ಪ್ರಸ್ತುತಪಡಿಸುವ ಪೂರ್ಣ ಹಕ್ಕಿದೆ ಮತ್ತು ಅವರ ಈ ಸ್ವಾತಂತ್ರ್ಯವನ್ನು ಸರ್ವೋಚ್ಚ ಸ್ಥಾನದಲ್ಲಿಡಬೇಕು. ಈ ಚಲನಚಿತ್ರದ ಹಿನ್ನೆಲೆಯು ‘ಸೆವೆನ್ ವೇಲ್ಸ್ ಕೋರ್ಟ್’ ಎಂಬ ಕಾಲ್ಪನಿಕ ನ್ಯಾಯಾಲಯದ ಮೇಲೆ ಆಧಾರಿತವಾಗಿದೆ. ನಿರ್ದೇಶಕರು ಇಡೀ ನ್ಯಾಯಾಂಗ ವ್ಯವಸ್ಥೆಯೇ ಭ್ರಷ್ಟವಾಗಿದೆ ಎಂದು ತೋರಿಸಿಲ್ಲ. ಆರ್.ಕೆ. ನಾರಾಯಣ್ ಅವರ ಕಥೆಗಳಲ್ಲಿನ ‘ಮಾಲ್ಗುಡಿ’ ಹೇಗೆ ಒಂದು ಕಾಲ್ಪನಿಕ ಗ್ರಾಮವೋ, ಹಾಗೆಯೇ ಈ ‘ಸೆವೆನ್ ವೇಲ್ಸ್ ಕೋರ್ಟ್’ ಕೂಡ ಕಾಲ್ಪನಿಕವಾಗಿದೆ. ಇಂತಹ ಕಾಲ್ಪನಿಕ ನ್ಯಾಯಾಲಯದ ವ್ಯಕ್ತಿಯನ್ನು ಭ್ರಷ್ಟ ಎಂದು ತೋರಿಸುವುದರಿಂದ ‘ನ್ಯಾಯಾಲಯ ನಿಂದನೆ ಕಾಯ್ದೆ, 1971’ ರ ಅಡಿಯಲ್ಲಿ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.