೭೦೦ ವರ್ಷಗಳ ನಂತರ ಶುಕ್ರವಾರದಂದು ಭೋಜಶಾಲೆಯಲ್ಲಿ ನಮಾಜ ಇಲ್ಲ, ಬದಲಾಗಿ ಹಿಂದೂಗಳು ಅಖಂಡ ಪೂಜೆ ಮಾಡಿದರು !

ಇನ್ನುಮುಂದೆ ಶುಕ್ರವಾರದಂದು ನಮಾಜ ಆಗುವುದಿಲ್ಲ, ಬದಲಾಗಿ ಕೇವಲ ಪೂಜೆಯನ್ನೇ ಮಾಡಬಹುದು !

ಧಾರ (ಮಧ್ಯಪ್ರದೇಶ) – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ನಿರ್ಣಯದ ನಂತರದ ಮೊದಲ ಶುಕ್ರವಾರವೇ ಹಿಂದೂಗಳು ಭೋಜಶಾಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದ್ದರು. ೭೦೦ ವರ್ಷಗಳಲ್ಲಿ ಮೊದಲ ಬಾರಿಗೆ ಹೀಗೆ ನಡೆಯಿತು. ಶುಕ್ರವಾರ ಭೋಜಶಾಲೆಯಲ್ಲಿ ನಮಾಜದ ಬದಲಾಗಿ ಕೇವಲ ‘ಜಯ ಸಿಯಾರಾಮ’ ಎಂಬ ಜಯಘೋಷ ಮೊಳಗುತ್ತಿತ್ತು. ಬೆಳಿಗ್ಗೆಯಿಂದಲೇ ಅಲ್ಲಿ ಹಿಂದೂ ಭಕ್ತರ ದೊಡ್ಡ ಗುಂಪು ಸೇರಿತ್ತು. ಉಚ್ಚ ನ್ಯಾಯಾಲಯವು ತನ್ನ ನಿರ್ಣಯದಲ್ಲಿ ಭೋಜಶಾಲೆ ಪರಿಸರದಲ್ಲಿನ ಮಸೀದಿಯಲ್ಲಿ ನಮಾಜದ ಅನುಮತಿಯನ್ನು ರದ್ದುಗೊಳಿಸಿತ್ತು. ಆದ್ದರಿಂದ ಮುಸಲ್ಮಾನರಿಗೆ ಇಲ್ಲಿ ನಮಾಜ ಮಾಡಲು ಸಾಧ್ಯವಾಗಲಿಲ್ಲ.

ಹಿಂದೂಗಳಿಂದ ಅಖಂಡ ಪೂಜೆ

ನಿರ್ಣಯದ ಎರಡನೇ ದಿನದಿಂದಲೇ ಭೋಜಶಾಲೆಯಲ್ಲಿ ಹಿಂದೂಗಳು ಅಖಂಡ ಪೂಜೆ ಮಾಡುತ್ತಿದ್ದರು. ೨೨ ಮೇಯ ಬೆಳಿಗ್ಗೆಯಿಂದಲೇ ಹಿಂದೂ ಬಾಂಧವರು ಭೋಜಶಾಲೆ ದೇವಸ್ಥಾನಕ್ಕೆ ತಲುಪಿ ಪೂಜೆ ಮಾಡುತ್ತಿದ್ದರು. ಅದರೊಂದಿಗೆ ದೇವಿ ವಾಗ್ದೇವಿಯ ಆರತಿಯನ್ನೂ ಮಾಡಿದರು. ಧಾರದೊಂದಿಗೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ದರ್ಶನಕ್ಕಾಗಿ ಮತ್ತು ಪೂಜೆಗಾಗಿ ತಲುಪುತ್ತಿದ್ದರು. ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆಗನುಸಾರ ಭೋಜಶಾಲೆ ಪರಿಸರದಲ್ಲಿ ಮಂಗಳವಾರದಂದು ಹಿಂದೂ ಸಮಾಜವು ಪೂಜೆ ಮಾಡುತ್ತಿತ್ತು, ಹಾಗೆಯೇ ಶುಕ್ರವಾರದಂದು ಮುಸಲ್ಮಾನರಿಗೆ ನಮಾಜಪಠಣದ ಅನುಮತಿಯಿತ್ತು.

ಭಾಜಪ ಶಾಸಕರೂ ಭೋಜಶಾಲೆಗೆ ತಲುಪಿದರು

ಶಾಸಕಿ ನೀನಾ ವರ್ಮಾಯವರು ಭೋಜಶಾಲೆಗೆ ತಲುಪಿ ಶ್ರೀ ವಾಗ್ದೇವಿಯ ತೈಲಚಿತ್ರದ ದರ್ಶನ ಪಡೆದರು ಮತ್ತು ಪೂಜೆ ಮಾಡಿದರು. ಹಾಗೆಯೇ ಭೋಜಶಾಲೆಗೆ ಸಂಬಂಧಿಸಿದ ವಯೋವೃದ್ಧ ಹೋರಾಟಗಾರ ವಿಮಲ ಗೋದಾಯವರ ಚರಣಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಅವರು ಭಜನಾ ಮಂಡಳಿಯೊಂದಿಗೆ ಕುಳಿತು ಭಜನೆ-ಕೀರ್ತನೆಯಲ್ಲಿಯೂ ಪಾಲ್ಗೊಂಡರು.