ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ ಅವರಿಂದ ‘ಲಿಟ್ಟೆ’ ಮುಖ್ಯಸ್ಥ ಪ್ರಭಾಕರನ್‌ ಗೆ ಶ್ರದ್ಧಾಂಜಲಿ

(ಲಿಟ್ಟೆ ಎಂದರೆ ‘ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ’ - ತಮಿಳು ರಾಷ್ಟ್ರ ವಿಮೋಚನಾ ಹುಲಿಗಳು)

ಎಡದಿಂದ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿ. ಪ್ರಭಾಕರನ್

ಚೆನ್ನೈ (ತಮಿಳುನಾಡು) – ಭಾರತದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ‘ಲಿಟ್ಟೆ’ ಮುಖ್ಯಸ್ಥ ವಿ. ಪ್ರಭಾಕರನ್‌ ಪುಣ್ಯತಿಥಿಯು ಮೇ 18 ರಂದು ಇತ್ತು. ಅವನಿಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 2009 ರಲ್ಲಿ ಶ್ರೀಲಂಕಾದ ಮುಲ್ಲಿವಾಯಿಕ್ಕಲ್‌ ನಲ್ಲಿ ಶ್ರೀಲಂಕಾ ಸೈನ್ಯವು ಪ್ರಭಾಕರನ್‌ ನನ್ನು ಗುಂಡಿಕ್ಕಿ ಕೊಂದಿತ್ತು. ವಿಶೇಷವೆಂದರೆ ಭಾರತದಲ್ಲಿ ‘ಲಿಟ್ಟೆ’ ಸಂಘಟನೆಯನ್ನು ನಿಷೇಧಿಸಲಾಗಿದೆ. ರಾಜೀವ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿದ್ದರು. ಇದೇ ಕಾಂಗ್ರೆಸ್ ಪಕ್ಷದ 5 ಶಾಸಕರು ಜೋಸೆಫ್ ವಿಜಯ ಅವರ ಸರಕಾರಕ್ಕೆ ಬೆಂಬಲ ನೀಡಿದ್ದಾರೆ. ಕಳೆದ ವಾರವಷ್ಟೇ ವಿಜಯ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿತ್ತು. ಅದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.

ಪ್ರಭಾಕರನ್‌ ಗಾಗಿ ವಿಜಯ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಶ್ರದ್ಧಾಂಜಲಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಿಜಯ, ನಾವು ಮುಲ್ಲಿವಾಯಿಕ್ಕಲ್‌ ನ ನೆನಪುಗಳನ್ನು ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿಡುತ್ತೇವೆ. ಸಮುದ್ರದಾಚೆ ವಾಸಿಸುವ ನಮ್ಮ ತಮಿಳು ಸಹೋದರ-ಸಹೋದರಿಯರ ಹಕ್ಕುಗಳಿಗಾಗಿ ನಾವು ಯಾವಾಗಲೂ ಅವರೊಂದಿಗೆ ಜೊತೆಯಾಗಿ ನಿಲ್ಲುತ್ತೇವೆ ಎಂದು ಬರೆದಿದ್ದಾರೆ.

‘ಮುಲ್ಲಿವಾಯಿಕ್ಕಲ್ ಸ್ಮರಣ ದಿನ’ದ ಮಹತ್ವವೇನು?

1991 ರಲ್ಲಿ ಲಿಟ್ಟೆ ಸಂಘಟನೆಯು ರಾಜೀವ್ ಗಾಂಧಿಯವರ ಹತ್ಯೆಯನ್ನು ನಡೆಸಿತ್ತು. ಈ ಪ್ರಕರಣದಲ್ಲಿ ಪ್ರಭಾಕರನ್ ಮುಖ್ಯ ಆರೋಪಿಯಾಗಿದ್ದನು. ಜಗತ್ತಿನಾದ್ಯಂತ ಹರಡಿರುವ ತಮಿಳು ಸಮುದಾಯ ಮತ್ತು ಭಾರತದಲ್ಲಿ ವಾಸಿಸುವ ತಮಿಳರು ಮೇ 18 ರಂದು ‘ಮುಲ್ಲಿವಾಯಿಕ್ಕಲ್ ಸ್ಮರಣ ದಿನ’ ಅಂದರೆ ‘ತಮಿಳು ಜನಾಂಗೀಯ ಹತ್ಯೆ ಸ್ಮರಣ ದಿನ’ ಎಂದು ಆಚರಿಸುತ್ತಾರೆ. 2009 ರಲ್ಲಿ ಶ್ರೀಲಂಕಾದ ಅಂತರ್ಯುದ್ಧವು ಕೊನೆಗೊಂಡಿತು. ಈ ದಿನದಂದು ಮೃತಪಟ್ಟ ಸಹಸ್ರಾರು ತಮಿಳು ನಾಗರಿಕರನ್ನು ಸ್ಮರಿಸಲಾಗುತ್ತದೆ. ಮುಲ್ಲಿವಾಯಿಕ್ಕಲ್ ಎಂಬ ಕರಾವಳಿ ಹಳ್ಳಿಯ ಮೇಲೆ ಶ್ರೀಲಂಕಾ ಸೈನ್ಯವು ಕೊನೆಯ ಬಾರಿ ತೀವ್ರ ಪ್ರಹಾರ ನಡೆಸಿತ್ತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಯುದ್ಧದ ಈ ಅಂತಿಮ ಹಂತದಲ್ಲಿ ಸುಮಾರು 40 ರಿಂದ 70 ಸಹಸ್ರ ತಮಿಳು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಶ್ರೀಲಂಕಾ ಸೈನ್ಯವು ನಾಗರಿಕರ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ಎಸಗಿತ್ತು. ಆದ್ದರಿಂದ ತಮಿಳು ಹಿಂದೂಗಳು ಈ ದಿನವನ್ನು ‘ಮುಲ್ಲಿವಾಯಿಕ್ಕಲ್ ಸ್ಮರಣ ದಿನ’ ಎಂದು ಆಚರಿಸುತ್ತಾರೆ.

ಸಂಪಾದಕೀಯ ನಿಲುವು

  • ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ‘ಲಿಟ್ಟೆ’ ಸಂಘಟನೆಯ ಮುಖ್ಯಸ್ಥನಿಗೆ ಶ್ರದ್ಧಾಂಜಲಿ ಸಲ್ಲಿಸುವುದು, ವಿಜಯ ಅವರ ಸರಕಾರಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ಸಿಗೆ ಒಪ್ಪಿಗೆಯೇ ?
  • ಸ್ವಾತಂತ್ರ್ಯವೀರ ಸಾವರ್ಕರ್ ಅವರ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್, ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದವರನ್ನು ಮಾತ್ರ ರಾಜಕೀಯ ಲಾಭಕ್ಕಾಗಿ ವಿರೋಧಿಸುವುದಿಲ್ಲ ಎಂಬುದನ್ನು ಗಮನಿಸಿರಿ! ಇದರಿಂದ ಗಾಂಧಿ ಪರಿವಾರದ ಬಗ್ಗೆ ಕಾಂಗ್ರೆಸ್ ಹೊಂದಿರುವ ಪ್ರೀತಿ ಕೇವಲ ಡೋಂಗಿತನದ್ದಾಗಿದೆ ಎಂದೇ ಹೇಳಬೇಕಾಗುತ್ತದೆ!