ಮಿರಜನಲ್ಲಿ ‘ಶ್ರೀ ಜ್ಞಾನಗಿರಿ ಸ್ವಾಮಿ ಮಹಾರಾಜ ಟ್ರಸ್ಟ್’ನ ಜಾಗದಲ್ಲಿನ ‘ಲ್ಯಾಂಡ್ ಜಿಹಾದ್’ನ ಯತ್ನವನ್ನು ಹತ್ತಿಕ್ಕಿದ ಹಿಂದುತ್ವನಿಷ್ಠರು !

  • ಶಾಸಕೀಯ ಹಸ್ತಕ್ಷೇಪದಿಂದ ಅನಧಿಕೃತ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿ ಜಾಗವನ್ನು ಎಲ್ಲ ಕಡೆಗಳಿಂದ ಮುಚ್ಚಲಾಯಿತು !

  • ಮತಾಂಧರು ಕಾನೂನುಬಾಹಿರ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಟ್ರಸ್ಟ್‌ನ ಭೂಮಿಯನ್ನು ಕಬಳಿಸಿದ್ದರು !

  • 30 ದಿನಗಳಲ್ಲಿ ಅತಿಕ್ರಮಣವನ್ನು ತೆರವುಗೊಳಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ !

ಶ್ರೀ ಜ್ಞಾನಗಿರಿ ಸ್ವಾಮಿ ಮಹಾರಾಜ

ಮಿರಜ (ಸಾಂಗ್ಲಿ ಜಿಲ್ಲೆ), 14 ಮೇ (ವಾರ್ತೆ.) – ಇಲ್ಲಿನ ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯಾಗಿರುವ ‘ಶ್ರೀ ಜ್ಞಾನಗಿರಿ ಸ್ವಾಮಿ ಮಹಾರಾಜ ಟ್ರಸ್ಟ್’ ಮಾಲೀಕತ್ವದ ಶಿವಾಜಿ ರಸ್ತೆಯಲ್ಲಿನ ಪ್ಲಾಟ್ ಸಂಖ್ಯೆ 57 ರ ಖಾಲಿ ಜಾಗದಲ್ಲಿ ಮತಾಂಧ ಅಲ್ತಾಫ ಗುಲಾಮ ಹುಸೇನ ಮಣೇರ ಎಂಬಾತನು ಒಳಸಂಚಿನಿಂದ ಮತ್ತು ಕಾನೂನುಬಾಹಿರವಾಗಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುವ ಮೂಲಕ ‘ಲ್ಯಾಂಡ್ ಜಿಹಾದ್’ಗೆ ಯತ್ನಿಸಿದ್ದನು. ಈ ಕುರಿತು ಹಿಂದುತ್ವನಿಷ್ಠರು ಮತ್ತು ಟ್ರಸ್ಟಿಗಳು ನೀಡಿದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರಕಾರವು ಮಧ್ಯಪ್ರವೇಶಿಸಿ ಈ ಅನಧಿಕೃತ ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ಕೊಲ್ಲಾಪುರದ ಧರ್ಮದಾಯ ದತ್ತಿ ಆಯುಕ್ತರ ಕಚೇರಿಯು ಈ ಜಾಗವನ್ನು ‘ಸೀಲ್‌’ ಮಾಡಿದ್ದು, 30 ದಿನಗಳ ಒಳಗಾಗಿ ಈ ನಿರ್ಮಾಣವನ್ನು ತೆರವುಗೊಳಿಸಲು ಆದೇಶಿಸಿದೆ.

ದಾನಪತ್ರದ ಷರತ್ತುಗಳನ್ನು ಉಲ್ಲಂಘಿಸಿ ಭೂಮಿಯನ್ನು ಕಬಳಿಸುವ ಸಂಚು!

ಸದರಿ ಜಾಗವನ್ನು 1934 ರಲ್ಲಿ ದಿವಂಗತ ದೌಲತರಾವ ಖರಾತರವರು ದಾನಪತ್ರದ ಮೂಲಕ ಟ್ರಸ್ಟಗೆ ನೀಡಿದ್ದರು. ಈ ಪತ್ರದಲ್ಲಿ ‘ಜಾಗದ ಬಳಕೆಯನ್ನು ಟ್ರಸ್ಟನ ಮೂಲ ಉದ್ದೇಶಗಳನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಗಳಿಗಾಗಿ ಬಳಸುವಂತಿಲ್ಲ’ ಎಂಬ ಸ್ಪಷ್ಟ ಷರತ್ತು ಇತ್ತು. ಹೀಗಿದ್ದರೂ ಸಹ, ಕೆಲವು ಆರೋಪಿತ ಟ್ರಸ್ಟಿಗಳು ಒಳಸಂಚಿನಿಂದ ಈ ಜಾಗವನ್ನು ಅಲ್ತಾಫ ಮಣೇರ ಎಂಬಾತನಿಗೆ ಬಾಡಿಗೆಯ ಒಪ್ಪಂದದ ಮೇರೆಗೆ ನೀಡಲು ಯತ್ನಿಸಿದರು. ಮಣೇರನು ಆನಂದ ದೇವಮಾನೆ, ರಮೇಶ ಕಾರಂಡೆ, ಮಹಾದೇವ ಕುರಣೆ, ಬಬನ ಸಾತಪುತೆ ಮತ್ತು ವಿಶಾಲ ಸಾತಪುತೆಯವರೊಂದಿಗೆ ಒಳಸಂಚು ರೂಪಿಸಿ ಟ್ರಸ್ಟನ ಈ ಜಾಗವನ್ನು ಕಬಳಿಸುವ ಗಂಭೀರ ಕೃತ್ಯಕ್ಕೆ ಮುಂದಾಗಿದ್ದನು.

‘ಶ್ರೀ ಜ್ಞಾನಗಿರಿ ಸ್ವಾಮಿ ಮಹಾರಾಜ ಟ್ರಸ್ಟ್’ನ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ

ಸರಕಾರದ ಕಾರ್ಯಾಚರಣೆ ಮತ್ತು ಹಿಂದುತ್ವನಿಷ್ಠರ ವಿಜಯ !

ಕೊಲ್ಲಾಪುರದ ಸಹಾಯಕ ಧರ್ಮದಾಯ ದತ್ತಿ ಆಯುಕ್ತರು ಈ ಜಾಗದಲ್ಲಿ ಯಾವುದೇ ನಿರ್ಮಾಣ ಮಾಡಬಾರದು ಎಂದು ಮಧ್ಯಂತರ ಆದೇಶ ನೀಡಿದ್ದರು. ಆದಾಗ್ಯೂ ಮತಾಂಧರು ಆದೇಶವನ್ನು ಉಲ್ಲಂಘಿಸಿ ನಿರ್ಮಾಣ ಕಾರ್ಯವನ್ನು ಮುಂದುವರಿಸಿದ್ದರು. ಟ್ರಸ್ಟಿಗಳಾದ ಶ್ರೀ. ಅನಿಲ ಸಾತಪುತೆ ಮತ್ತು ಧರ್ಮಾಭಿಮಾನಿ ಭಕ್ತ ಶ್ರೀ. ಶಿವಪ್ರಸಾದ ಸಾತಪುತೆಯವರ ದೂರಿನ ನಂತರ, ಮೇ 13 ರಂದು ಧರ್ಮದಾಯಿ ದತ್ತಿ ಆಯುಕ್ತರ ಕಚೇರಿಯ ನಿರೀಕ್ಷಕರಾದ ರಾಗಿಣಿ ಖಡಕೆ, ಸಾಂಗ್ಲಿ-ಮಿರಜ್-ಕುಪವಾಡ ಮಹಾನಗರ ಪಾಲಿಕೆಯ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಅನಧಿಕೃತ ನಿರ್ಮಾಣವನ್ನು ಸ್ಥಗಿತಗೊಳಿಸಿದರು. ಈ ಪ್ರಕರಣದಲ್ಲಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ಸಂಸ್ಥಾಪಕರಾದ ಪೂ. ಸಂಭಾಜಿರಾವ ಭಿಡೆಗುರೂಜಿಯವರು ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲರವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಪಾಟೀಲರು ಈ ಪ್ರಕರಣದಲ್ಲಿ ಸರಕಾರಕ್ಕೆ ಸಹಕರಿಸುವಂತೆ ಸೂಚನೆ ನೀಡಿದರು. ಇದರಿಂದಾಗಿ ಪೊಲೀಸರು ಮತ್ತು ಆಡಳಿತ ಯಂತ್ರವು ಸಕಾರಾತ್ಮಕ ನಿಲುವು ತಳೆದವು.

ಅನಧಿಕೃತ ಕಟ್ಟಡ ನಿರ್ಮಾಣ ತಡೆಯಲು ಬಂದ ಆಡಳಿತಾಧಿಕಾರಿಗಳು, ಹಿಂದುತ್ವನಿಷ್ಠರು ಮತ್ತು ಭಕ್ತರು

ಹಿಂದೂಗಳಲ್ಲಿ ತೀವ್ರ ಆಕ್ರೋಶದ ಅಲೆ !

ಮತಾಂಧರ ಈ ಕೃತ್ಯದಿಂದ ಇಡೀ ಹಿಂದೂ ಸಮಾಜ, ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು, ಚರ್ಮಕಾರ ಸಮಾಜ ಮತ್ತು ಶ್ರೀ ಜ್ಞಾನಗಿರಿ ಮಹಾರಾಜರ ಭಕ್ತ ಮಂಡಳಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ‘ಈ ಅನಧಿಕೃತ ನಿರ್ಮಾಣವನ್ನು 30 ದಿನಗಳ ಒಳಗಾಗಿ ತೆರವುಗೊಳಿಸದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಹಿಂದುತ್ವನಿಷ್ಠರಾದ ಶ್ರೀಯುತ ಅನಿಲ ಸಾತಪುತೆ, ಶಿವಪ್ರಸಾದ ಸಾತಪುತೆ, ಸರದಾರ ಸಾತಪುತೆ, ರಾಜು ಸಾತಪುತೆ, ವಿನಾಯಕ ದಬಡೆ, ಶ್ರೀಕಾಂತ ರಾಯಮಾನೆ ಮತ್ತು ರಾಜೇಂದ್ರ ಪಾಟೀಲ ಸೇರಿದಂತೆ ಅನೇಕ ಸಮಾಜ ಬಾಂಧವರು ಎಚ್ಚರಿಕೆ ನೀಡಿದ್ದಾರೆ. ‘ಸಂಬಂಧಪಟ್ಟ ಆರೋಪಿತ ಟ್ರಸ್ಟಿಗಳು, ಹಾಗೆಯೇ ಆದೇಶದ ಕ್ರಮವನ್ನು ತಪ್ಪಿಸುತ್ತಿರುವ ಕೆಲವು ಅಧಿಕಾರಿಗಳ ಪಾತ್ರ ಸಂಶಯಾಸ್ಪದವಾಗಿದ್ದು, ಅವರ ವಿರುದ್ಧ ಕಠಿಣ ಇಲಾಖಾ ಮತ್ತು ಕಾನೂನು ಕ್ರಮ ಜರುಗಿಸಬೇಕು’ ಎಂದು ಸಮಾಜವು ಒತ್ತಾಯಿಸಿದೆ. ‘ಧಾರ್ಮಿಕ ಟ್ರಸ್ಟನ ಆಸ್ತಿಯನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದ್ದು, ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಮತ್ತು ತುರ್ತು ಕ್ರಮ ಜರುಗುವುದು ಅಗತ್ಯ’ ಎಂದೂ ಮನವಿ ಮಾಡಲಾಗಿದೆ.

ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾದ ಪ.ಪೂ. ಭಕ್ತರಾಜ ಮಹಾರಾಜರು ಶ್ರೀ ಜ್ಞಾನಗಿರಿ ಮಹಾರಾಜರನ್ನು ಗುರುಸ್ಥಾನದಲ್ಲಿ ಕಾಣುತ್ತಿದ್ದರು. ಶ್ರೀ ಜ್ಞಾನಗಿರಿ ಮಹಾರಾಜರೇ ಪ.ಪೂ. ಭಕ್ತರಾಜ ಮಹಾರಾಜರನ್ನು (ಬಾಬಾ) ಮಿರಜಗೆ ಆಗಾಗ ಆಮಂತ್ರಿಸುತ್ತಿದ್ದರು. ಪ.ಪೂ. ಭಕ್ತರಾಜ ಮಹಾರಾಜರು ಪ್ರತಿ ವರ್ಷ ಮಿರಜಗೆ ಬಂದು ಮಠದಲ್ಲಿ ಅನ್ನಸಂತರ್ಪಣೆಯ ಕಾರ್ಯಕ್ರಮ ನಡೆಸುತ್ತಿದ್ದರು.