NEET Paper Leak : ಪ್ರಶ್ನೆಪತ್ರಿಕೆ ಸೋರಿಕೆ; ‘ನೀಟ್’ ಪರೀಕ್ಷೆ ರದ್ದು!

  • ಕೇಂದ್ರ ತನಿಖಾ ದಳದಿಂದ (CBI) ಪತ್ರಿಕೆ ಸೋರಿಕೆಯ ತನಿಖೆ

  • ಪರೀಕ್ಷೆಯ ಹೊಸ ದಿನಾಂಕ ಶೀಘ್ರದಲ್ಲೇ ಘೋಷಣೆ

(ನೀಟ್ (NEET) – ‘ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್’, ಅಂದರೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ)

ನವದೆಹಲಿ: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ (NTA) ಮೇ 3 ರಂದು ನಡೆಸಿದ್ದ ‘ನೀಟ್’ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆಯು ಮೊದಲೇ ಸೋರಿಕೆಯಾದ ಕಾರಣ (ಲೀಕ್) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಪರೀಕ್ಷೆಯನ್ನು ಒಟ್ಟು 23 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಈಗ ಈ ಎಲ್ಲಾ ಪ್ರಕ್ರಿಯೆಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಬೇಕಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಹೊರಡಿಸಿದ ಅಧಿಕೃತ ಪ್ರಕಟಣೆಯ ಪ್ರಕಾರ, ತನಿಖಾ ಸಂಸ್ಥೆಗಳು ಸಲ್ಲಿಸಿದ ವರದಿಯಲ್ಲಿ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿತ್ತು. ಪರೀಕ್ಷಾ ಪದ್ಧತಿಯ ಮೇಲಿನ ವಿಶ್ವಾಸಾರ್ಹತೆಯನ್ನು ಕಾಪಾಡಲು ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಿಗಾಗುವ ಅನ್ಯಾಯವನ್ನು ತಪ್ಪಿಸಲು, ಪರೀಕ್ಷೆಯನ್ನು ರದ್ದುಗೊಳಿಸಿ ಪುನಃ ನಡೆಸಲು ನಿರ್ಧರಿಸಲಾಗಿದೆ. ಈ ಸಂಪೂರ್ಣ ಪ್ರಕರಣದ ಆಳವಾದ ತನಿಖೆಯ ಜವಾಬ್ದಾರಿಯನ್ನು ಈಗ ಕೇಂದ್ರ ತನಿಖಾ ದಳಕ್ಕೆ (CBI) ಒಪ್ಪಿಸಲಾಗಿದೆ.

‘ಗೆಸ್ ಪೇಪರ್’ನಲ್ಲಿ 720 ಅಂಕಗಳ ಪೈಕಿ 600 ಅಂಕಗಳ ಪ್ರಶ್ನೆಗಳಿದ್ದವು !

ರಾಜಸ್ಥಾನದ ಅನೇಕ ವಿದ್ಯಾರ್ಥಿಗಳಿಗೆ ನಿಜವಾದ ಪರೀಕ್ಷೆಯ ಪ್ರಶ್ನೆಗಳಿಗೆ ಹೋಲುವ ಹಸ್ತಪ್ರತಿಯ ‘ಗೆಸ್ ಪೇಪರ್’ (ನಿರೀಕ್ಷಿತ ಪ್ರಶ್ನೆಪತ್ರಿಕೆ) ದೊರೆತಿತ್ತು. ಮೇ 10 ರಂದು ‘ರಾಜಸ್ಥಾನ ವಿಶೇಷ ಕಾರ್ಯಾಚರಣೆ ತಂಡ’ವು ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಡೆಹ್ರಾಡೂನ್, ಸಿಕರ್ ಮತ್ತು ಝುಂಜುನು ಪ್ರದೇಶಗಳಿಂದ 13 ಶಂಕಿತರನ್ನು ವಶಕ್ಕೆ ಪಡೆದಿದೆ.

ತನಿಖೆಯ ವೇಳೆ, ಪರೀಕ್ಷೆಯ 720 ಅಂಕಗಳ ಪೈಕಿ 600 ಅಂಕಗಳ ಪ್ರಶ್ನೆಗಳು ಎರಡು ದಿನಗಳ ಮೊದಲೇ ಸಿಕರ್‌ನ ವಿದ್ಯಾರ್ಥಿಗಳಿಗೆ ತಲುಪಿದ್ದವು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ, ಕೇರಳದ ಕಾಲೇಜೊಂದರ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಮೇ 1 ರಂದು ಸಿಕರ್‌ನಲ್ಲಿರುವ ತನ್ನ ಸ್ನೇಹಿತನಿಗೆ ‘ಗೆಸ್ ಪೇಪರ್’ ಕಳುಹಿಸಿದ್ದನು. ಸಿಕರ್‌ನ ಕೋಚಿಂಗ್ ಕ್ಲಾಸ್ ನಡೆಸುವ ವ್ಯಕ್ತಿಯೊಬ್ಬನಿಗೆ ಈ ಪೇಪರ್ ಸಿಕ್ಕಿದ್ದು, ನಂತರ ಆತ ಅದನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಹಂಚಿದ್ದನು. ಈ ಪ್ರಕ್ರಿಯೆಯಿಂದಾಗಿ ಆ ಪ್ರಶ್ನೆಪತ್ರಿಕೆ ಹಲವಾರು ಜನರಿಗೆ ತಲುಪಿತ್ತು.

ಸಂಪಾದಕೀಯ ನಿಲುವು

ಕಳೆದ ಕೆಲವು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಮಟ್ಟದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದ್ದರೂ, ಯಾಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ? ಪರೀಕ್ಷೆಗಳು ರದ್ದಾಗುವುದರಿಂದ ವಿದ್ಯಾರ್ಥಿಗಳಿಗೆ ಆಗುವ ಆರ್ಥಿಕ ನಷ್ಟ, ಮಾನಸಿಕ ಸಂಕಷ್ಟ ಮತ್ತು ಸಮಯದ ವ್ಯರ್ಥವನ್ನು ಸರಿಪಡಿಸುವರು ಯಾರು?