ಮುಂಬಯಿಯಲ್ಲಿ ನಕಲಿ ಜನನ ಪ್ರಮಾಣಪತ್ರಗಳ ಪತ್ತೆಗಾಗಿ ವಿಶೇಷ ತನಿಖಾ ತಂಡದ ಸ್ಥಾಪನೆ !

ಬಾಂಗ್ಲಾದೇಶಿ ನುಸುಳುಕೋರರ ಪತ್ತೆ ಕಾರ್ಯ !

ಎಐ ಚಿತ್ರ

ಮುಂಬಯಿ – ಕಳೆದ ಕೆಲವು ವರ್ಷಗಳಲ್ಲಿ ಮುಂಬಯಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಪತ್ತೆಯಾಗಿದ್ದಾರೆ. ನಕಲಿ ದಾಖಲೆಗಳ ಆಧಾರದ ಮೇಲೆ ಜನನ ಪ್ರಮಾಣಪತ್ರ ಪಡೆದ ನುಸುಳುಕೋರರ ಸಂಖ್ಯೆ ಹೆಚ್ಚಾಗಿದೆ. ಇಂತಹವರನ್ನು ಪತ್ತೆಹಚ್ಚುವಂತೆ ಸರಕಾರ ಸೂಚನೆ ನೀಡಿದ್ದರೂ, ಕಂದಾಯ ಇಲಾಖೆಯಿಂದ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಂಡಿರಲಿಲ್ಲ. ಮುಂಬಯಿನಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ನಕಲಿ ದಾಖಲೆಗಳ ಮೂಲಕ ಜನನ ಪ್ರಮಾಣಪತ್ರ ಪಡೆದವರನ್ನು ಪತ್ತೆಹಚ್ಚಲು ‘ವಿಶೇಷ ತನಿಖಾ ತಂಡ’ (SIT) ವನ್ನು ರಚಿಸಲಾಗಿದೆ.

ಮೇ 5 ರಂದು ಮುಂಬಯಿ ಪೊಲೀಸ್ ಆಯುಕ್ತರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.

ಪೊಲೀಸ್ ಜಂಟಿ ಆಯುಕ್ತರ (ಅಪರಾಧ) ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾಧ), ವಿಶೇಷ ಶಾಖೆಯ ಹೆಚ್ಚುವರಿ ಪೊಲೀಸ್ ಆಯುಕ್ತರು, ಅಪರಾಧ ತನಿಖಾ ವಿಭಾಗದ ಪೊಲೀಸ್ ಉಪ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ಇದರಲ್ಲಿ ಸದಸ್ಯರಾಗಿದ್ದಾರೆ.

1. ಕಳೆದ ಕೆಲವು ವರ್ಷಗಳಲ್ಲಿ ಆಧಾರ್ ಕಾರ್ಡ್‌ಗಳ ಆಧಾರದ ಮೇಲೆ ಜನನ ಪ್ರಮಾಣಪತ್ರಗಳನ್ನು ನೀಡಲಾಗಿರುವುದು ಗೃಹ ಇಲಾಖೆಯ ಗಮನಕ್ಕೆ ಬಂದಿದೆ. ಮುಂಬಯಿನಲ್ಲಿ ಬಂಧಿತರಾದ ಬಾಂಗ್ಲಾದೇಶಿ ನುಸುಳುಕೋರರ ಬಳಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಆಧಾರ್ ಕಾರ್ಡ್‌ಗಳನ್ನು ಬಂಗಾಳದಲ್ಲಿ ನಕಲಿ ದಾಖಲೆಗಳ ಮೂಲಕ ತಯಾರಿಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ.

2. ಇದರ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ಆಧಾರ್ ಕಾರ್ಡ್‌ಗಳನ್ನು ಪಡೆದುಕೊಳ್ಳಲಾಗಿತ್ತು. ಆ ಮೂಲಕ ನುಸುಳುಕೋರರು ಜನನ ಪ್ರಮಾಣಪತ್ರಗಳನ್ನು ಗಿಟ್ಟಿಸಿಕೊಂಡಿದ್ದರು. ಆದ್ದರಿಂದ, ವರ್ಷವಿಡೀ ಯಾರಿಗೆಲ್ಲಾ ಜನನ ಪ್ರಮಾಣಪತ್ರ ನೀಡಲಾಗಿದೆಯೋ ಅವರನ್ನು ಪತ್ತೆಹಚ್ಚಲು ಮತ್ತು ಆಧಾರ್ ಕಾರ್ಡ್ ಆಧಾರದ ಮೇಲೆ ನೀಡಲಾದ ಜನನ ಪ್ರಮಾಣಪತ್ರಗಳನ್ನು ಮರುಪಡೆಯಲು ಸರಕಾರ ಆದೇಶಿಸಿತ್ತು; ಆದರೆ ರಾಜ್ಯದಲ್ಲಿ ಈ ಬಗ್ಗೆ ಗಂಭೀರ ಕ್ರಮ ಕೈಗೊಂಡಿರಲಿಲ್ಲ. ಆದ್ದರಿಂದ ಮುಂಬಯಿನಲ್ಲಿ ಈ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲಾಗಿದೆ.

ಮುಂಬಯಿ ಪರಿಸರದಲ್ಲೇ ಅತಿ ಹೆಚ್ಚು ನುಸುಳುಕೋರರು!

ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳವು (ATS) ಇತ್ತೀಚೆಗೆ ರಾಜ್ಯದ 7,500 ಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರ ಹೆಸರಿನ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಇದಕ್ಕೂ ಮೊದಲು ಎಟಿಎಸ್ 1,237 ನುಸುಳುಕೋರರ ಪಟ್ಟಿಯನ್ನು ನೀಡಿತ್ತು. ಇದರಲ್ಲಿ ಶೇ. 75 ಕ್ಕಿಂತ ಹೆಚ್ಚು ನುಸುಳುಕೋರರು ಮುಂಬಯಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದಾರೆ ಎಂದು ಕಂಡುಬಂದಿದೆ. ಇನ್ನು ಪತ್ತೆಯಾಗದ ನುಸುಳುಕೋರರನ್ನು ಹುಡುಕಲು ಈ ತಂಡವನ್ನು ರಚಿಸಲಾಗಿದೆ.