ಬಂಗಾಲದಲ್ಲಿ ಅನೇಕ ಸ್ಥಳಗಳಲ್ಲಿ ಹಿಂಸಾಚಾರ !

  • ಭಾಜಪ ಕಾರ್ಯಕರ್ತರ ಹತ್ಯೆ

  • ತೃಣಮೂಲ ಕಾಂಗ್ರೆಸ್ ಕಚೇರಿಯ ಮೇಲೆ ಬುಲ್ಡೋಜರ್

  • ಸಂದೇಶಖಾಲಿಯಲ್ಲಿ ಕೇಂದ್ರೀಯ ಪಡೆಯ ಮೇಲೆ ಗುಂಡಿನ ದಾಳಿ

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಮತದಾನದ ಅವಧಿಯಲ್ಲಿ ಹಿಂಸಾಚಾರ ನಡೆಯಲಿಲ್ಲ; ಆದರೆ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ರಾಜ್ಯದ ಅನೇಕ ಕಡೆಗಳಲ್ಲಿ ಹಿಂಸಾಚಾರ ಆರಂಭವಾಗಿದೆ. ಕೋಲಕಾತಾದ ಪ್ರಸಿದ್ಧ ಹಾಗ್ ಮಾರುಕಟ್ಟೆ ಪ್ರದೇಶದಲ್ಲಿ ಮೇ ೫ ರ ರಾತ್ರಿ ಜನರ ಗುಂಪೊಂದು ಬುಲ್ಡೋಜರ್ ಬಳಸಿ ತೃಣಮೂಲ ಕಾಂಗ್ರೆಸ್ ಕಚೇರಿಯನ್ನು ನೆಲಸಮಗೊಳಿಸಿದೆ. ಈ ಕಚೇರಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಭೂಮಿಯಲ್ಲಿ ನಿರ್ಮಿಸಲಾಗಿತ್ತು ಎಂದು ಸ್ಥಳೀಯರು ದಾವೆ ಮಾಡಿದ್ದಾರೆ. ಎರಡನೇ ಘಟನೆಯಲ್ಲಿ, ನ್ಯೂ ಟೌನ್‌ ನಲ್ಲಿ ಭಾಜಪ ಕಾರ್ಯಕರ್ತ ಮಧು ಮಂಡಲ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಅವರು ಮೃತಪಟ್ಟರು. ಅನೇಕ ಕಡೆಗಳಲ್ಲಿ ಭಾಜಪ ಕಾರ್ಯಕರ್ತರ ಮನೆಗಳ ಮೇಲೂ ಆಕ್ರಮಣಗಳಾಗಿವೆ. ಹೌರಾದಲ್ಲಿಯೂ ಭಾಜಪದ ಒಬ್ಬ ಕಾರ್ಯಕರ್ತನ ಮೃತ್ಯುವಿನ ಸುದ್ದಿ ಇದೆ. ಆತನ ಪತ್ನಿಯು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಮೇಲೆ ಆರೋಪ ಮಾಡಿದ್ದಾರೆ. ಈ ಘಟನೆಯ ನಂತರ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸ್ಥಳೀಯ ನಿವಾಸಿಗಳ ಹೇಳಿಕೆಯಂತೆ, ಈ ಕಚೇರಿಯನ್ನು ಒಬ್ಬ ವ್ಯಾಪಾರಿಯಿಂದ ಬಲವಂತವಾಗಿ ಕಸಿದುಕೊಂಡ ಜಾಗದಲ್ಲಿ ಕಟ್ಟಲಾಗಿತ್ತು. ದೀರ್ಘಕಾಲದಿಂದ ಜನರು ಇದರಿಂದ ಆಕ್ರೋಶಗೊಂಡಿದ್ದರು. ಚುನಾವಣೆಯ ಫಲಿತಾಂಶದ ನಂತರ ಉತ್ಸಾಹದಲ್ಲಿದ್ದ ಜನಸಮೂಹವು ಬುಲ್ಡೋಜರ್ ಕರೆಸಿ ಈ ಕಟ್ಟಡವನ್ನು ತೆರವುಗೊಳಿಸಿದೆ. ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಜನರು ಇದನ್ನು ‘ಜನತೆಯ ನ್ಯಾಯ’ ಎಂದು ಕರೆಯುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕರು ಈ ಬುಲ್ಡೋಜರ್ ಕ್ರಮವನ್ನು ತಪ್ಪು ಎಂದು ಕರೆದಿದ್ದಾರೆ. ಅನಿರೀಕ್ಷಿತವಾಗಿ ನಡೆದ ಈ ಕ್ರಮದಿಂದ ಹಾಗ್ ಮಾರುಕಟ್ಟೆ ಪ್ರದೇಶದಲ್ಲಿ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿತ್ತು.

ಸಂದೇಶಖಾಲಿಯಲ್ಲಿ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿ !

ಉತ್ತರ २४ ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಮೇ ೫ ರ ತಡರಾತ್ರಿ ಬಾಮನ್ ಘೇರಿ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ಮತ್ತು ಕೇಂದ್ರೀಯ ಪಡೆಯ ತುಕಡಿಯ ಮೇಲೆ ಅಜ್ಞಾತರಿಂದ ಅಡ್ಡಾ ದಿಡ್ಡಿಯಾಗಿ ಗುಂಡಿನ ದಾಳಿ ನಡೆಸಲಾಗಿದೆ. ಇದರಲ್ಲಿ ನಜಾತ್ ಪೊಲೀಸ್ ಠಾಣೆಯ ಪ್ರಮುಖರಾದ ಭರತ್ ಪುರ್ಕೈತ್, ಒಬ್ಬ ಮಹಿಳಾ ಅಧಿಕಾರಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಸೈನಿಕರು ಸೇರಿದಂತೆ ಒಟ್ಟು ೫ ಜನರಿಗೆ ಗುಂಡು ತಗುಲಿದೆ. ಎಲ್ಲ ಗಾಯಾಳುಗಳನ್ನು ಕೋಲಕಾತಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾಜಪಕ್ಕೆ ಮತ ಹಾಕಿದ್ದಕ್ಕಾಗಿ ತೃಣಮೂಲ ಕಾರ್ಯಕರ್ತರಿಂದ ಒಂದು ಕುಟುಂಬದ ಮೇಲೆ ಹಲ್ಲೆ

ಉತ್ತರ २४ ಪರಗಣ ಜಿಲ್ಲೆಯ ಆಮಡಂಗಾ ವಿಧಾನಸಭಾ ಕ್ಷೇತ್ರದ ಬಾರಾಡಿಹ್ ಭಾಗದಲ್ಲಿ ಒಂದು ಕುಟುಂಬದ ಮೇಲೆ ಪ್ರಾಣಾಂತಿಕ ಹಲ್ಲೆ ನಡೆದಿದೆ. ಸಂತ್ರಸ್ತ ಮದನ ಮೊರೋಲ್ ಅವರು ಆರೋಪಿಸಿರುವಂತೆ, ಅವರು ಚುನಾವಣೆಯಲ್ಲಿ ಭಾಜಪಕ್ಕೆ ಮತ ಹಾಕಿದ್ದರು; ಇದೇ ಸಿಟ್ಟಿನಿಂದ ತೃಣಮೂಲ ಕಾಂಗ್ರೆಸ್‌ ನ ೪೦ ರಿಂದ ೫೦ ಗೂಂಡಾಗಳು ತಡರಾತ್ರಿ ಅವರ ಮನೆಯ ಮೇಲೆ ದಾಳಿ ಮಾಡಿದರು. ಮನೆಯನ್ನು ಧ್ವಂಸಗೊಳಿಸುವುದರ ಜೊತೆಗೆ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಕೇಂದ್ರೀಯ ಪಡೆಯ ಸೈನಿಕರು ಸ್ಥಳಕ್ಕೆ ತಲುಪಿದರು. ಈ ಘಟನೆಯಿಂದ ಸ್ಥಳೀಯ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಬಲಾತ್ಕಾರ ಮತ್ತು ಹತ್ಯೆಯ ಬೆದರಿಕೆ ಹಾಕಿದ್ದ ತೃಣಮೂಲ ನಾಯಕ ಜಹಾಂಗೀರ್ ಕಚೇರಿಯಲ್ಲಿ ಜನರ ಧ್ವಂಸ ಮತ್ತು ಬೆಂಕಿ ಹಚ್ಚುವಿಕೆ

ದಕ್ಷಿಣ २४ ಪರಗಣ ಜಿಲ್ಲೆಯ ಫಾಲ್ತಾದಲ್ಲಿ ಮೇ २೧ ರಂದು ಮತ್ತೆ ಮತದಾನ ನಡೆಯಲಿದೆ. ಅದಕ್ಕೂ ಮೊದಲೇ ಇಲ್ಲಿನ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್ ಅವರ ಕಚೇರಿಯ ಮೇಲೆ ಜನಸಮೂಹವು ಆಕ್ರಮಣ ಮಾಡಿ ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಅಲ್ಲದೇ ತೃಣಮೂಲದ ಧ್ವಜಗಳನ್ನು ಕಿತ್ತೆಸೆದು ಆ ಜಾಗದಲ್ಲಿ ಭಾಜಪದ ಧ್ವಜಗಳನ್ನು ಹಚ್ಚಿ ಜೋರಾಗಿ ಘೋಷಣೆಗಳನ್ನು ಕೂಗಿದರು. ಗ್ರಾಮಸ್ಥರು ಆರೋಪಿಸಿದಂತೆ, ಜಹಾಂಗೀರ್ ಖಾನ್ ನು ಹಳ್ಳಿಗೆ ಬಂದು ಜನರಿಗೆ ಕೊಲೆ ಮಾಡುವ ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ಮಾಡುವ ಬೆದರಿಕೆ ಹಾಕಿದ್ದನು. ಇದರಿಂದ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಸರಕಾರದಿಂದ ವರದಿ !

ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಧ್ವಂಸ ಮತ್ತು ಬೆಂಕಿ ಹಚ್ಚುವಿಕೆಯ ಘಟನೆಗಳನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಆಯೋಗವು ಪೊಲೀಸರಿಂದ ಸಂಪೂರ್ಣ ವರದಿಯನ್ನು ಕೇಳಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ವ್ಯಕ್ತಿಯನ್ನು ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ಸಲಾವುದ್ದೀನ್ ಸರ್ದಾರ್ ಅವರ ಕಚೇರಿಯಿಂದ ಹರಿತವಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ವಶ!

ವಶಪಡಿಸಿಕೊಳ್ಳಲಾದ ಹರಿತವಾದ ಆಯುಧಗಳು

ಕೋಲಕಾತಾ (ಬಂಗಾಳ) – ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ನಾರಾಯಣಪುರದ ಘುಟಿಯಾರಿ ಷರೀಫ್‌ನಲ್ಲಿರುವ ತೃಣಮೂಲ ಕಾಂಗ್ರೆಸ್ ನಾಯಕ ಸಲಾವುದ್ದೀನ್ ಸರ್ದಾರ್ ಅವರ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕಚೇರಿಯ ಆವರಣದಿಂದ ಭಾರಿ ಪ್ರಮಾಣದಲ್ಲಿ ಹರಿತವಾದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಚೇರಿಯಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಬಗ್ಗೆ ಗುಪ್ತಚರ ಮೂಲಗಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಪೊಲೀಸರು ಘಟನಾ ಸ್ಥಳದಿಂದ 18 ಹರಿತವಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ಏಕೆ ಸಂಗ್ರಹಿಸಿಡಲಾಗಿತ್ತು? ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂಸಾತ್ಮಕ ಪ್ರವೃತ್ತಿಯಿಂದ ಕೂಡಿದ ತೃಣಮೂಲ ಕಾಂಗ್ರೆಸ್ ಅನ್ನು ಜನರು ಈಗಾಗಲೇ ಮನೆಗೆ ಕಳುಹಿಸಿದ್ದಾರೆ. ಈಗ ಕೇಂದ್ರ ಸರಕಾರವು ಮುಂದೆ ಬಂದು ತೃಣಮೂಲ ಕಾಂಗ್ರೆಸ್ ಅನ್ನು ನಿಷೇಧಿಸುವ ನಿರೀಕ್ಷೆಯಿದೆ!