‘ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದು ಸಂವಿಧಾನ ವಿರೋಧಿ!’(ಅಂತೆ)

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ವಿರುದ್ಧ ದೂರು ದಾಖಲು !

ನಾಗಪುರ – ‘ನಮ್ಮನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹೇಳುತ್ತಾರೆ; ಆದರೆ ನಾವು ಹೇಳುವುದೇನೆಂದರೆ, ಭಾರತವು ಈಗಾಗಲೇ ಹಿಂದೂ ರಾಷ್ಟ್ರವೇ ಆಗಿದೆ, ಅದನ್ನು ಘೋಷಿಸುವ ಅಗತ್ಯವೇ ಇಲ್ಲ’, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕರಾದ ಡಾ. ಮೋಹನ್ ಜಿ ಭಾಗವತ್ ಅವರು ಕೆಲವು ದಿನಗಳ ಹಿಂದೆ ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾರ್ಗದರ್ಶನ ನೀಡಿದ್ದರು. ಈ ಪ್ರಕರಣದಲ್ಲಿ ಅವರ ವಿರುದ್ಧ ನಾಗಪುರದ ಸಾಮಾಜಿಕ ಕಾರ್ಯಕರ್ತ ಜನಾರ್ದನ್ ಮೂನ್ ಅವರು ಪೊಲೀಸರಿಗೆ ಲಿಖಿತ ದೂರನ್ನು ನೀಡಿದ್ದಾರೆ. ‘ಸರಸಂಘಚಾಲಕರ ಹೇಳಿಕೆಯು ಸಂವಿಧಾನದ ಜಾತ್ಯತೀತತೆ, ಸಮಾನತೆ, ಸರ್ವಧರ್ಮ ಸಮಭಾವ ಮತ್ತು ರಾಷ್ಟ್ರೀಯ ಏಕತೆಯ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ. ಇದರಿಂದ ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ಮತ್ತು ದ್ವೇಷ ನಿರ್ಮಾಣವಾಗುವ ಸಾಧ್ಯತೆಯಿದೆ’, ಎಂದು ದೂರುದಾರರು ಹೇಳಿದ್ದಾರೆ.

ದೂರಿನಲ್ಲಿ ಮುಂದೆ ಹೀಗೆ ಹೇಳಲಾಗಿದೆ,

೧. ಭಾರತವನ್ನು ಒಂದು ನಿರ್ದಿಷ್ಟ ಧರ್ಮದೊಂದಿಗೆ ಜೋಡಿಸುವ ಪ್ರಯತ್ನವು ಸಂವಿಧಾನದ ಜಾತ್ಯತೀತ ತತ್ವಗಳಿಗೆ ಅಸಂಗತವಾಗಿದ್ದು, ಇದು ಸ್ವಾತಂತ್ರ್ಯ ಹೋರಾಟದ ಬಲಿದಾನ, ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲ ಆತ್ಮಕ್ಕೆ ಧಕ್ಕೆ ತರುವಂತದ್ದಾಗಿದೆ.

೨. ಭಾರತವು ವಿವಿಧ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ದೇಶವಾಗಿದ್ದು, ಸಂವಿಧಾನವು ನೀಡಿದ ‘ಜಾತ್ಯತೀತ ರಾಷ್ಟ್ರ’ ಎಂಬ ಪರಿಕಲ್ಪನೆಯು ದೇಶದ ಐಕ್ಯತೆಯ ಮೂಲಾಧಾರವಾಗಿದೆ.

ಸಂಪಾದಕೀಯ ನಿಲುವು

  • ದೂರುದಾರನ ಆರೋಪವು ಒಂದು ವಿತಂಡವಾದವೇ ಸರಿ!
  • ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಮೂಲ ಸಂವಿಧಾನಕ್ಕೆ ಕಾಂಗ್ರೆಸ್ ತಿದ್ದುಪಡಿ ತಂದು ‘ಜಾತ್ಯತೀತತೆ’ ಮತ್ತು ‘ಸಮಾಜವಾದ’ ಎಂಬ ಪದಗಳನ್ನು ತುರುಕಿದೆ. ದೂರುದಾರನಿಗೆ ಕಾಂಗ್ರೆಸ್‌ನ ಈ ಕೃತ್ಯ ಸಂವಿಧಾನ ವಿರೋಧಿ ಎಂದು ಅನಿಸುವುದಿಲ್ಲವೇ?
  • ‘ಹಿಂದೂ ರಾಷ್ಟ್ರ’ ಎಂದರೆ ಏನು ಎಂಬುದೇ ತಿಳಿಯದವರು ಈ ಬಗ್ಗೆ ಮಾತನಾಡುವುದು ಎಂದರೆ ಅದು ಅವರ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದಂತೆ!