ನ್ಯಾಯ ಸಿಗುವವರೆಗೆ ನಮ್ಮನ್ನು ಭೇಟಿ ಮಾಡಲು ಬರಬೇಡಿ, ಪ್ರದರ್ಶನದ ಭೇಟಿಗಳನ್ನು ತಪ್ಪಿಸಿ!

  • ನಸರಾಪುರ (ಮಹಾರಾಷ್ಟ್ರ): ಮೃತ ಬಾಲಕಿಯ ತಂದೆಯಿಂದ ರಾಜಕಾರಣಿಗಳಿಗೆ ಕರೆ

  • ಕಾಮುಕನಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹ!

ಪುಣೆ – ಭೋರ್ ತಾಲೂಕಿನ ನಸರಾಪುರ (ಮಹಾರಾಷ್ಟ್ರ)ದಲ್ಲಿ ೪ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯ ನಂತರ ಹಲವು ರಾಜಕೀಯ ನಾಯಕರು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಆದರೆ ಈಗ ಸಂತ್ರಸ್ತ ಬಾಲಕಿಯ ತಂದೆ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ. “ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ಯಾವುದೇ ರಾಜಕೀಯ ವ್ಯಕ್ತಿಗಳು ನಮ್ಮ ಪರಿವಾರದವರನ್ನು ಭೇಟಿಯಾಗಲು ಬರಬಾರದು,” ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಆರೋಪಿ ಭೀಮರಾವ್ ಕಾಂಬ್ಳೆಯನ್ನು ಮೇ ೭ ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ರಾಜಕೀಯ ನಾಯಕರು ಭೇಟಿ ನೀಡುತ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ತೋರಿಕೆಯ ಭೇಟಿಗಳನ್ನು ತಪ್ಪಿಸಬೇಕೆಂದು ಬಾಲಕಿಯ ತಂದೆ ನೋವು ವ್ಯಕ್ತಪಡಿಸಿದ್ದಾರೆ.

ಬಾಲಕಿಯ ತಂದೆ, “ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ನಾನು ಯಾವುದೇ ನಾಯಕರನ್ನು ಭೇಟಿ ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಂಭೀರವಾಗಿ ಪರಿಗಣಿಸಿದ್ದು, ಉಪಮುಖ್ಯಮಂತ್ರಿ ಶಿಂದೆ ಅವರು ತಕ್ಷಣವೇ ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸಂದೀಪ್ ಗಿಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ನಸರಾಪುರ (ಮಹಾರಾಷ್ಟ್ರ) ಘಟನೆಯ ತನಿಖೆಗೆ ಎಸ್‌ಐಟಿ (SIT) ರಚನೆ!

ಮುಖ್ಯಮಂತ್ರಿಯವರು ವಿಶೇಷ ತನಿಖಾ ತಂಡವನ್ನು (SIT) ರಚಿಸುವುದಾಗಿ ಘೋಷಿಸಿದ್ದು, ಈ ತಂಡದಲ್ಲಿ ೬ ಸದಸ್ಯರಿದ್ದಾರೆ. ಈ ೬ ಸದಸ್ಯರಲ್ಲಿ ಇಬ್ಬರು ಮಹಿಳಾ ಪೊಲೀಸರು ಇರಲಿದ್ದಾರೆ.

ಅಪರಾಧ ಒಪ್ಪಿಕೊಂಡ ಆರೋಪಿ!

“ದನದ ಕೊಟ್ಟಿಗೆಯಲ್ಲಿರುವ ಹಸುವಿನ ಕರುವನ್ನು ತೋರಿಸುತ್ತೇನೆ” ಎಂದು ಹೇಳಿ ಬಾಲಕಿಯನ್ನು ಕೊಟ್ಟಿಗೆಗೆ ಕರೆದೊಯ್ದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕೊಟ್ಟಿಗೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಪುರಾವೆಗಳನ್ನು ನಾಶಪಡಿಸಲು ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಭೀಮರಾವ್ ಕಾಂಬ್ಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಯಾವಾಗಲೂ ಚಿಕ್ಕ ಹೆಣ್ಣುಮಕ್ಕಳ ಮೇಲೆ ಕೆಟ್ಟ ದೃಷ್ಟಿ ಹೊಂದಿದ್ದ ಎಂಬ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ.

ಸಂಪಾದಕೀಯ ನಿಲುವು

ರಾಜಕಾರಣಿಗಳ ಮೇಲಿನ ಜನರ ವಿಶ್ವಾಸ ಕುಸಿದಿದೆ! ಅಂದರೆ 'ರಾಜಕೀಯ ಮುಖಂಡರು ಸಾಂತ್ವನ ಹೇಳಲು ಬರುತ್ತಿಲ್ಲ, ಬದಲಾಗಿ ಪ್ರಚಾರಕ್ಕಾಗಿ ಬರುತ್ತಿದ್ದಾರೆ' ಎಂಬ ಆಲೋಚನೆ ಜನರ ಮನಸ್ಸಿನಲ್ಲಿ ಮನೆಮಾಡಿದೆ ಎಂಬುದನ್ನು ಗಮನಿಸಬೇಕು! ಪ್ರಜಾಪ್ರಭುತ್ವದ ರಕ್ಷಕರಿಂದಲೇ ಪ್ರಜಾಪ್ರಭುತ್ವಕ್ಕೆ ಕಳಂಕ ತಗುಲುತ್ತಿದ್ದರೆ, ಇದಕ್ಕಿಂತ ನಾಚಿಕೆಗೇಡಿನ ವಿಷಯ ಇನ್ನೊಂದಿಲ್ಲ!