ಭಾರತದ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ ಸುಧಾರಣೆ: 85ರಿಂದ 75ಕ್ಕೆ ಏರಿಕೆ!

ಭಾರತೀಯರು 56 ದೇಶಗಳಿಗೆ ವೀಸಾ ಮುಕ್ತ ಪ್ರಯಾಣ ಮಾಡಬಹುದು!

ಲಂಡನ್ (ಬ್ರಿಟನ್) – 2026ರ ಇತ್ತೀಚಿನ ‘ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್’ ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ, ಭಾರತವು ಈ ವರ್ಷ ಮಹತ್ವದ ಸುಧಾರಣೆ ಕಂಡರೆ, ಪಾಕಿಸ್ತಾನದ ಶ್ರೇಯಾಂಕದಲ್ಲಿ ಅಲ್ಪ ಸುಧಾರಣೆಯಾಗಿದೆ. ಭಾರತವು ಈ ಪಟ್ಟಿಯಲ್ಲಿ 75ನೇ ಸ್ಥಾನಕ್ಕೆ ಏರಿದೆ, ಆದರೆ ಪಾಕಿಸ್ತಾನವು 98ನೇ ಸ್ಥಾನದಲ್ಲಿದೆ.

ಕಳೆದ ವರ್ಷ ಭಾರತ 85ನೇ ಸ್ಥಾನದಲ್ಲಿತ್ತು ಮತ್ತು ಪಾಕಿಸ್ತಾನ 103ನೇ ಸ್ಥಾನದಲ್ಲಿತ್ತು. ಭಾರತೀಯ ಪ್ರಜೆಗಳು ಈಗ 56 ದೇಶಗಳಿಗೆ ವೀಸಾ ಮುಕ್ತವಾಗಿ (ಒಂದು ದೇಶವನ್ನು ಪ್ರವೇಶಿಸಲು ಅಥವಾ ಅಲ್ಲಿಂದ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಇಲ್ಲದೆ) ಪ್ರಯಾಣಿಸಬಹುದು. ಇನ್ನು, ಪಾಕಿಸ್ತಾನದ ಜನರು ಕೇವಲ 31 ದೇಶಗಳಿಗೆ ವೀಸಾ ಮುಕ್ತವಾಗಿ ಹೋಗಲು ಅವಕಾಶವಿದೆ.

ಜಾಗತಿಕ ಮಟ್ಟದಲ್ಲಿ (ಗ್ಲೋಬಲ್ ಸ್ಟೇಟಸ್) ಭಾರತವನ್ನು ಮಧ್ಯಮ ಶ್ರೇಣಿಯಲ್ಲಿ ಇರಿಸಲಾಗಿದ್ದರೆ, ಪಾಕಿಸ್ತಾನವನ್ನು ಯೆಮನ್, ಇರಾಕ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳೊಂದಿಗೆ ಕೆಳ ಹಂತದ ಶ್ರೇಣಿಯಲ್ಲಿ ಇರಿಸಲಾಗಿದೆ. ಭಾರತದ ಶ್ರೇಯಾಂಕ ಸುಧಾರಿಸಲು ವಿವಿಧ ದೇಶಗಳೊಂದಿಗೆ ಮಾಡಿಕೊಂಡ ಹೊಸ ದ್ವಿಪಕ್ಷೀಯ ಒಪ್ಪಂದಗಳೇ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಶ್ರೀಮಂತ ದೇಶಗಳ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ ಕುಸಿತ!

ಒಂದು ಕಾಲದಲ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಅಮೆರಿಕ, 2026ರಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಅಮೆರಿಕದ ಕಠಿಣ ವೀಸಾ ನೀತಿಗಳು ಮತ್ತು ಇತರ ದೇಶಗಳೊಂದಿಗಿನ ಆಮದು ಸುಂಕದ ಒಪ್ಪಂದಗಳ ಕೊರತೆಯಿಂದಾಗಿ ಈ ಕುಸಿತ ಉಂಟಾಗಿದೆ ಎಂದು ನಂಬಲಾಗಿದೆ.
ಅದೇ ರೀತಿ ಬ್ರಿಟನ್ ಕೂಡ 3ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿದೆ. ಹಿಂದೆ ಮೊದಲ 5 ಸ್ಥಾನಗಳಲ್ಲಿದ್ದ ಕೆನಡಾ ಮತ್ತು ಆಸ್ಟ್ರೇಲಿಯಾ ಈಗ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿವೆ. ಭದ್ರತಾ ಕಾರಣಗಳು ಮತ್ತು ವಲಸೆಯನ್ನು ನಿಯಂತ್ರಿಸಲು ಅನೇಕ ಶ್ರೀಮಂತ ರಾಷ್ಟ್ರಗಳು ತಮ್ಮ ವೀಸಾ ನೀತಿಗಳನ್ನು ಕಠಿಣಗೊಳಿಸಿವೆ, ಇದು ನೇರವಾಗಿ ಅವರ ಪಾಸ್‌ಪೋರ್ಟ್ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದೆ.