ನೇಪಾಳದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ನೇಪಾಳ ಏರ್‌ಲೈನ್ಸ್‌ನಿಂದ ಭಾರತ ವಿರೋಧಿ ನಕ್ಷೆ ಪ್ರಕಟ

  • ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ಭಾರತವನ್ನು ಕ್ರಮವಾಗಿ ಪಾಕಿಸ್ತಾನ ಹಾಗೂ ಚೀನಾದ ಭಾಗವೆಂದು ತೋರಿಸಲಾಗಿದೆ!

  • ದೇಶಪ್ರೇಮಿಗಳ ತೀವ್ರ ವಿರೋಧದ ನಂತರ ಕ್ಷಮೆಯಾಚನೆ

  • ಇಂತಹವರಿಗೆ ಸರಕಾರವು ತಕ್ಕ ಪಾಠ ಕಲಿಸಬೇಕು. ವಿದೇಶಾಂಗ ಸಚಿವಾಲಯವು ಈ ಘಟನೆಯ ಕುರಿತು ನೇಪಾಳ ಸರಕಾರವನ್ನು ಲಿಖಿತವಾಗಿ ಪ್ರಶ್ನಿಸಬೇಕು!

ಕಾಠ್ಮಂಡು (ನೇಪಾಳ) – ನೇಪಾಳದಲ್ಲಿ ಬಾಲೆನ್ ಶಾಹ ಅವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಾರತ ವಿರೋಧಿ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ನೇಪಾಳದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ನೇಪಾಳ ಏರ್‌ಲೈನ್ಸ್ ಇತ್ತೀಚೆಗೆ ಪ್ರಕಟಿಸಿದ ನಕ್ಷೆಯಲ್ಲಿ ಇಡೀ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದಲ್ಲಿ ಮತ್ತು ಇಡೀ ಈಶಾನ್ಯ ಭಾರತವನ್ನು ಚೀನಾದಲ್ಲಿ ತೋರಿಸಲಾಗಿದೆ. ಜಗತ್ತಿನಾದ್ಯಂತ ತನ್ನ ವಿಮಾನ ಸೇವೆಯ ಜಾಲ ಎಷ್ಟು ವಿಸ್ತಾರವಾಗಿದೆ ಎಂದು ತೋರಿಸುವ ಭರದಲ್ಲಿ ಈ ಭಾರತ ವಿರೋಧಿ ಕೃತ್ಯವನ್ನು ಎಸಗಲಾಗಿದೆ. ಇದಕ್ಕೆ ದೇಶಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ತೀವ್ರತೆಯನ್ನು ಕಂಡು ಕೊನೆಗೆ ನೇಪಾಳ ಏರ್‌ಲೈನ್ಸ್ ಸ್ಪಷ್ಟನೆ ನೀಡಿ, ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ.

ಏಪ್ರಿಲ್ 29 ರಂದು ನೇಪಾಳ ಏರ್‌ಲೈನ್ಸ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಗತ್ತಿನ ನಕ್ಷೆಯೊಂದನ್ನು ಪ್ರಸಾರ ಮಾಡಿತ್ತು. ಅದರಲ್ಲಿ ಭಾರತದ ಬಹುದೊಡ್ಡ ಭೂಭಾಗವನ್ನು ಚೀನಾ ಮತ್ತು ಪಾಕಿಸ್ತಾನದ ಭೂಭಾಗವೆಂದು ಚಿತ್ರಿಸಲಾಗಿತ್ತು. ಇದನ್ನು ಸಾವಿರಾರು ದೇಶಪ್ರೇಮಿಗಳು ನೇಪಾಳ ಏರ್‌ಲೈನ್ಸ್ ಮತ್ತು ಜಮ್ಮು ಕಾಶ್ಮೀರ ಹ್ಯಾಶ್‌ಟ್ಯಾಗ್ #NepalAirlines ಮತ್ತು #JammuKashmir ಬಳಸಿ ತೀವ್ರವಾಗಿ ಟೀಕಿಸಿದ್ದಾರೆ. ಅವರು ಈ ಘಟನೆಯನ್ನು ಭಾರತ ವಿರೋಧಿ, ಉದ್ದೇಶಪೂರ್ವಕ ದುರ್ನಡತೆ ಅಥವಾ ಭಾರತಕ್ಕೆ ನೀಡಿದ ಪ್ರಚೋದನೆ ಎಂದು ಕರೆದಿದ್ದಾರೆ.

‘ಇದು ನಮ್ಮ ಅಥವಾ ನೇಪಾಳ ಸರಕಾರದ ಅಧಿಕೃತ ನಿಲುವಲ್ಲವಂತೆ!’ – ನೇಪಾಳ ಏರ್‌ಲೈನ್ಸ್ ಸ್ಪಷ್ಟನೆ

ಹೆಚ್ಚುತ್ತಿರುವ ವಿರೋಧವನ್ನು ಕಂಡು ನೇಪಾಳ ಏರ್‌ಲೈನ್ಸ್ ಬಹಿರಂಗ ಕ್ಷಮೆಯಾಚಿಸಿದ್ದು, ನಮ್ಮ ಫ್ಲೈಟ್ ನೆಟ್‌ವರ್ಕ್ ನಕ್ಷೆಯಲ್ಲಿ ಕಂಡುಬಂದ ದೋಷದ ಬಗ್ಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಈ ನಕ್ಷೆಯಲ್ಲಿನ ಅಂತರರಾಷ್ಟ್ರೀಯ ಗಡಿಗಳ ದೋಷಗಳು ಯಾವುದೇ ರೀತಿಯಲ್ಲಿ ನೇಪಾಳ ಸರಕಾರ ಅಥವಾ ನೇಪಾಳ ಏರ್‌ಲೈನ್ಸ್‌ನ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ.

ಜಮ್ಮುವಿನ ಪ್ರಖರ ದೇಶಪ್ರೇಮಿ ದಿವ್ಯಾ ಗಂಡೋತ್ರಾ ಟಂಡನ್ ಅವರು, ಎಕ್ಸ ನಲ್ಲಿ ಪ್ರತಿಕ್ರಿಯೆ !

ಭಾರತವು ದಶಕಗಳಿಂದ ನೇಪಾಳದ ಆರ್ಥಿಕತೆಗೆ ಬಲ ನೀಡಿದೆ. ಮುಕ್ತ ಗಡಿಯನ್ನು ಕಾಯ್ದುಕೊಳ್ಳುವುದರಿಂದ ಹಿಡಿದು ಲಕ್ಷಾಂತರ ನೇಪಾಳಿ ನಾಗರಿಕರಿಗೆ ಉದ್ಯೋಗ ಒದಗಿಸುವುದು, ವ್ಯಾಪಾರಕ್ಕಾಗಿ ಭಾರತದ ಬಂದರುಗಳನ್ನು ಲಭ್ಯವಾಗಿಸುವುದರಿಂದ ಹಿಡಿದು ಇಂಧನ ಪೈಪ್‌ಲೈನ್‌ಗಳು, ವಿದ್ಯುತ್ ಯೋಜನೆಗಳು, ವಿಪತ್ತು ನಿರ್ವಹಣೆ ಸಹಾಯ, ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿವೇತನ ಮತ್ತು ಸೈನಿಕ ಸಹಕಾರ ನೀಡುವವರೆಗೆ ಭಾರತವು ಯಾವಾಗಲೂ ನೇಪಾಳಕ್ಕೆ ಬೆನ್ನೆಲುಬಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ನೇಪಾಳ ಏರ್‌ಲೈನ್ಸ್ ಪ್ರಕಟಿಸಿದ ವಿಮಾನ ಹಾರಾಟ ಮಾರ್ಗಗಳ ನಕ್ಷೆಯು ಆಘಾತಕಾರಿಯಾಗಿದೆ. ಇದು ಕೇವಲ ವಿನ್ಯಾಸದ ತಪ್ಪು ಎಂದು ನನಗನ್ನಿಸುವುದಿಲ್ಲ, ಇದೊಂದು ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿದೆ.

ಸಂಪಾದಕೀಯ ನಿಲುವು

ಭಾರತವು ನೇಪಾಳದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಪಾಲುದಾರನಾಗಿರುವಾಗ, ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಿಂದಾದ ಈ ನಿರ್ಲಕ್ಷ್ಯವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ಕೇವಲ ಒಂದು ನಕ್ಷೆ ಅಲ್ಲ, ಇದು ಒಂದು ಸಂದೇಶವಾಗಿದೆ, ಅದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.