ಮುಂಬಯಿ ಪ್ರೆಸ್ ಕ್ಲಬ್‌ನ ಮೂವರು ಪತ್ರಕರ್ತರ ಉಚ್ಚಾಟನೆ!

ಕೋರೆಗಾಂವ್-ಭೀಮಾ ದಂಗೆ ಪ್ರಕರಣದ ಆರೋಪಿಗಳಿಗೆ ಔತಣಕೂಟ ಆಯೋಜನೆ ಪ್ರಕರಣ

ಮುಂಬಯಿ – ಕೋರೆಗಾಂವ್-ಭೀಮಾ ದಂಗೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಗಳಿಗೆ ಔತಣಕೂಟ ಆಯೋಜಿಸಿದ ಹಿನ್ನೆಲೆಯಲ್ಲಿ ಗುರಬೀರ್ ಸಿಂಗ್, ಬರ್ನಾರ್ಡ್ ಡಿಮೆಲ್ಲೋ ಮತ್ತು ಶ್ರೀಕಾಂತ್ ಮೊಡಕ್ ಎಂಬ ಮೂವರು ಪತ್ರಕರ್ತರನ್ನು ಮುಂಬಯಿ ಪ್ರೆಸ್ ಕ್ಲಬ್ ಈ ಪ್ರತಿಷ್ಠಿತ ಪತ್ರಕರ್ತರ ಸಂಘಟನೆಯ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಕೋರೆಗಾಂವ್-ಭೀಮಾ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ‘ಸಹ-ಆರೋಪಿಗಳನ್ನು ಭೇಟಿಯಾಗಬಾರದು’ ಎಂಬ ಶರತ್ತು ವಿಧಿಸಿತ್ತು. ಈ ಶರತ್ತನ್ನು ಉಲ್ಲಂಘಿಸಿ ಆರೋಪಿಗಳನ್ನು ಮುಂಬಯಿ ಪ್ರೆಸ್ ಕ್ಲಬ್‌ನಲ್ಲಿ ಒಟ್ಟುಗೂಡಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಶರತ್ತನ್ನು ಉಲ್ಲಂಘಿಸಿರುವುದರಿಂದ ಆರೋಪಿಗಳ ಜಾಮೀನು ಕೂಡ ರದ್ದಾಗುವ ಸಾಧ್ಯತೆಯಿದೆ.

ಮುಂಬಯಿ ಪ್ರೆಸ್ ಕ್ಲಬ್ ಕಟ್ಟಡದ ಮೇಲ್ಛಾವಣಿಯ ಮೇಲೆ 19 ಜನವರಿ 2026 ರಂದು ಸಂಜೆ 7 ರಿಂದ ರಾತ್ರಿ 11 ರವರೆಗೆ ಈ ಔತಣಕೂಟ ನಡೆದಿತ್ತು. ಇದರಲ್ಲಿ ವರವರಾ ರಾವ್, ವರ್ನನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ, ಗೌತಮ್ ನವಲಾಖಾ, ಆನಂದ್ ತೇಲ್ತುಂಬ್ಡೆ, ಹ್ಯಾನಿ ಬಾಬು, ರೋನಾ ವಿಲ್ಸನ್ ಮತ್ತು ಸುಧೀರ್ ಧವಳೆ ಎಂಬ ಕೋರೆಗಾಂವ್-ಭೀಮಾ ದಂಗೆಯ ಆರೋಪಿಗಳು ಉಪಸ್ಥಿತರಿದ್ದರು. ಈ ವಿಷಯ ಗಮನಕ್ಕೆ ಬಂದ ನಂತರ ಮುಂಬಯಿ ಪ್ರೆಸ್ ಕ್ಲಬ್‌ನ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ರಾಜೇಶ್ ಮಸ್ಕರೇನ್ಹಾಸ್, ಕಾರ್ಯದರ್ಶಿ ಮಯೂರೇಶ್ ಗಣಪತ್ಯೆ ಮತ್ತು ಖಜಾಂಚಿ ಸೌರಭ್ ಶರ್ಮಾ ಅವರ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಗುರಬೀರ್ ಸಿಂಗ್ ಅವರು ವೇಟರ್‌ಗಳ ಮೂಲಕ ಮೇಲ್ಛಾವಣಿಯ ಮೇಲೆ ಔತಣಕೂಟಕ್ಕೆ ಮೇಜುಗಳನ್ನು ಸಿದ್ಧಪಡಿಸುತ್ತಿರುವುದು ಮತ್ತು 12,500 ರೂಪಾಯಿಗಳ ಬಿಲ್ ಪಾವತಿಸುತ್ತಿರುವುದು ಕಂಡುಬಂದಿದೆ. ನೋಂದಣಿ ಪುಸ್ತಕದಲ್ಲಿ ಹ್ಯಾನಿ ಬಾಬು, ರೋನಾ ವಿಲ್ಸನ್ ಮತ್ತು ಅರುಣ್ ಫೆರೇರಾ ಅವರನ್ನು ಗುರಬೀರ್ ಸಿಂಗ್ ಅವರ ಅತಿಥಿಗಳೆಂದು ದಾಖಲಿಸಲಾಗಿದೆ. ಒಟ್ಟಾರೆಯಾಗಿ ಔತಣಕೂಟ ಆಯೋಜಿಸುವುದು, ಆಹ್ವಾನ ನೀಡುವುದು ಮತ್ತು ಬಿಲ್ ಪಾವತಿಸುವುದರಲ್ಲಿ ಗುರಬೀರ್ ಸಿಂಗ್ ಅವರ ಮುಂದಾಳತ್ವ ಇರುವುದು ವ್ಯವಸ್ಥಾಪಕ ಸಮಿತಿಗೆ ಕಂಡುಬಂದಿದೆ. ಈ ಘಟನೆಯ ನಂತರ ಮುಂಬಯಿ ಪ್ರೆಸ್ ಕ್ಲಬ್‌ನಿಂದ ಉಚ್ಚಾಟಿಸಲ್ಪಟ್ಟ ಮೂವರು ಸದಸ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಕ್ಲಬ್‌ನ ವ್ಯವಸ್ಥಾಪಕ ಸಮಿತಿಯ ಸಭೆಯಲ್ಲಿ ಎರಡು ತೃತೀಯಾಂಶ ಬಹುಮತದೊಂದಿಗೆ ಈ ಸದಸ್ಯರನ್ನು ಉಚ್ಚಾಟಿಸಲಾಯಿತು.

ಗಂಭೀರ ಸ್ವರೂಪದ ಪ್ರಕರಣ!

31 ಡಿಸೆಂಬರ್ 2017 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ನಂತರ ಕೋರೆಗಾಂವ್-ಭೀಮಾದಲ್ಲಿ ದಂಗೆ ಸಂಭವಿಸಿತ್ತು. ಈ ಪ್ರಕರಣದ ಆರೋಪಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಸಂಚು ಮತ್ತು ನಕ್ಸಲೀಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಆರೋಪಗಳಿವೆ. ಪ್ರಧಾನಿಯವರ ಹತ್ಯೆಯ ಸಂಚಿನ ಗಂಭೀರ ಆರೋಪವಿರುವುದರಿಂದ ಜಾಮೀನಿನ ಮೇಲೆ ಇರುವ ಆರೋಪಿಗಳು ಒಂದೆಡೆ ಸೇರಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಶರತ್ತು ವಿಧಿಸಿತ್ತು. ಹೀಗಿದ್ದರೂ ಈ ಎಲ್ಲಾ ಆರೋಪಿಗಳನ್ನು ಒಟ್ಟುಗೂಡಿಸಿ ಅವರೊಂದಿಗೆ 4 ಗಂಟೆಗಳ ಕಾಲ ಔತಣಕೂಟ ನಡೆಸಿರುವುದು ಗಂಭೀರ ವಿಷಯವೆಂದು ಪರಿಗಣಿಸಲಾಗಿದೆ.

ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದೇ?

ಮುಂಬಯಿ ಪ್ರೆಸ್ ಕ್ಲಬ್ ಈ ಗಂಭೀರ ಅಪರಾಧದ ಆರೋಪಿಗಳಿಗೆ ಔತಣಕೂಟ ಆಯೋಜಿಸಿದ ಪತ್ರಕರ್ತರ ಸದಸ್ಯತ್ವವನ್ನು ರದ್ದುಗೊಳಿಸಿದೆ; ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಅಪರಾಧ ತನಿಖಾ ಇಲಾಖೆಯೂ ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ. ನಗರ ನಕ್ಸಲಿಸಂ ಮಟ್ಟಹಾಕಲು ಮಹಾರಾಷ್ಟ್ರ ಸರಕಾರವು ‘ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಸುರಕ್ಷತಾ ಕಾಯಿದೆ’ಯನ್ನು ರೂಪಿಸಿದೆ. ಈ ಕಾಯಿದೆಯಡಿ ನಕ್ಸಲೀಯರಿಗೆ ಗುಪ್ತವಾಗಿ ಸಹಾಯ ಮಾಡುವ ನಗರ ನಕ್ಸಲೀಯರ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶವಿದೆ. ಕ್ಲಬ್‌ನಲ್ಲಿ ನಡೆದ ಔತಣಕೂಟದಲ್ಲಿ ಯಾವ ವಿಷಯದ ಬಗ್ಗೆ ಚರ್ಚೆಯಾಗಿದೆ? ಅಲ್ಲಿ ಯಾವುದಾದರೂ ಹೊಸ ಸಂಚು ರೂಪಿಸಲಾಗಿದೆಯೇ? ಎಂಬ ಬಗ್ಗೆ ಗೃಹ ಇಲಾಖೆಯಿಂದ ಆಳವಾದ ತನಿಖೆ ನಿರೀಕ್ಷಿಸಲಾಗಿದೆ. ಮಾವೋವಾದಿ ಚಳವಳಿಗೆ ಬೆಂಬಲ ನೀಡುವ ವಿಷಯಗಳು ಚರ್ಚೆಯಾಗಿದ್ದರೆ, ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಕ್ರಮ ಜರುಗಬಹುದು.