ಫುಜಿಸಾವಾ (ಜಪಾನ್): ಮೊದಲ ಮಸೀದಿ ನಿರ್ಮಾಣಕ್ಕೆ ಸ್ಥಳೀಯರ ತೀವ್ರ ವಿರೋಧ

ಮಸೀದಿಯಿಂದಾಗಿ ಧ್ವನಿ ಮಾಲಿನ್ಯ, ಸಂಚಾರ ದಟ್ಟಣೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ

ಫುಜಿಸಾವಾ (ಜಪಾನ್) – ಜಪಾನ್‌ನ ಫುಜಿಸಾವಾ ನಗರದಲ್ಲಿ ಪ್ರಸ್ತಾವಿತ ಮೊದಲ ಮಸೀದಿಯ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಜನರು ಸಹಿ ಸಂಗ್ರಹ ಅಭಿಯಾನ ಮತ್ತು ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ. ಮಸೀದಿಯ ಕಟ್ಟಡವು ಹತ್ತಿರದ ‘ಶಿಂಟೋ’ ಧಾರ್ಮಿಕ ಸ್ಥಳಕ್ಕಿಂತ ದೊಡ್ಡದಾಗಿರುವುದರಿಂದ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ಈ ದೊಡ್ಡ ಕಟ್ಟಡ ನಿರ್ಮಾಣ ಪ್ರಚೋದನಾಕಾರಿ ಕೃತ್ಯವಾಗಿದ್ದು, ಜಪಾನ್ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಸರ್ಕಾರಕ್ಕೆ ಬರೆದ ಪತ್ರದಲ್ಲಿ,

1. ಮಸೀದಿಯಲ್ಲಿ ದಿನಕ್ಕೆ 5 ಬಾರಿ ಧ್ವನಿವರ್ಧಕಗಳ ಮೂಲಕ ‘ಅಜಾನ್’ (ನಮಾಜಿಗೆ ಕರೆಯುವುದು) ನೀಡಲಾಗುತ್ತದೆ, ಇದರಿಂದ ಈ ಪ್ರದೇಶದ ಶಾಂತಿ ಭಂಗವಾಗುತ್ತದೆ.

2. ಜಪಾನ್‌ನ ನಗರಗಳು ಅತ್ಯಂತ ಶಿಸ್ತುಬದ್ಧವಾಗಿವೆ ಮತ್ತು ಸ್ಥಳಾವಕಾಶದ ಮಿತಿ ಇದೆ. ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಮತ್ತು ವಾಹನ ನಿಲುಗಡೆಯ ಸಮಸ್ಯೆ ಗಂಭೀರವಾಗುತ್ತದೆ.

3. ಇಂತಹ ನಿರ್ಮಾಣದಿಂದ ಪ್ರದೇಶದ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾಗರಿಕರು ತಿಳಿಸಿದ್ದಾರೆ .

4. ಜಪಾನಿನ ಜೀವನಶೈಲಿ ಮತ್ತು ಇಸ್ಲಾಮಿಕ್ ಸಂಪ್ರದಾಯಗಳ ನಡುವಿನ ವ್ಯತ್ಯಾಸದಿಂದಾಗಿ ಭವಿಷ್ಯದಲ್ಲಿ ಸಾಮಾಜಿಕ ಉದ್ವಿಗ್ನತೆ ಉಂಟಾಗಬಹುದು ಎಂದು ಅನೇಕ ಹಿರಿಯ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ಪರ ವಾದ:

ಮಸೀದಿ ಟ್ರಸ್ಟ್ ಸ್ಥಳೀಯರ ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸಿದೆ. ನೆರೆಹೊರೆಯವರಿಗೆ ತೊಂದರೆಯಾಗದಂತೆ ಅಜಾನ್ ಅನ್ನು ದೊಡ್ಡ ಧ್ವನಿಯಲ್ಲಿ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂಚಾರ ನಿರ್ವಹಣೆಗಾಗಿ ಸ್ವಯಂಸೇವಕರನ್ನು ನೇಮಿಸಲಾಗುವುದು ಮತ್ತು ಮಸೀದಿಯು ಕೇವಲ ಪ್ರಾರ್ಥನಾ ಮಂದಿರವಾಗಿರದೆ, ಜಪಾನಿನ ನಾಗರಿಕರನ್ನೂ ಸ್ವಾಗತಿಸುವ ‘ಕಮ್ಯುನಿಟಿ ಸೆಂಟರ್’ (ಸಮುದಾಯ ಕೇಂದ್ರ) ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಆಡಳಿತಾತ್ಮಕ ಸಂಕಷ್ಟ:

ಜಪಾನ್ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಆದ್ದರಿಂದ ಕಾನೂನುಬದ್ಧವಾಗಿ ಮಸೀದಿ ನಿರ್ಮಾಣವನ್ನು ಸಂಪೂರ್ಣವಾಗಿ ನಿಷೇಧಿಸುವುದು ಆಡಳಿತಕ್ಕೆ ಕಷ್ಟಕರವಾಗಿದೆ; ಆದರೆ ಪ್ರಜಾಪ್ರಭುತ್ವದಲ್ಲಿ ಸ್ಥಳೀಯ ನಾಗರಿಕರ ಭಾವನೆಗಳನ್ನು ನಿರ್ಲಕ್ಷಿಸುವುದು ಕೂಡ ಕಷ್ಟವಾಗುತ್ತಿದೆ. ಪ್ರಸ್ತುತ ಈ ಯೋಜನೆಯ ಕೆಲಸವು ಮಂದಗತಿಯಲ್ಲಿ ಸಾಗುತ್ತಿದ್ದು, ಎರಡೂ ಕಡೆಗಳ ನಡುವೆ ಮಾತುಕತೆಗಳು ನಡೆಯುತ್ತಿವೆ. ಈ ಹಿಂದೆ ಶಿಜುಓಕಾ ಮತ್ತು ಓಯಿಟಾ ಪ್ರಾಂತ್ಯಗಳಲ್ಲೂ ಸ್ಮಶಾನ ಹಾಗೂ ಮಸೀದಿಗಳ ವಿಷಯವಾಗಿ ಇಂತಹದೇ ವಿವಾದಗಳು ನಡೆದಿದ್ದವು. ಫುಜಿಸಾವಾ ವಿವಾದ ಜಪಾನಿನ ‘ಸಾಂಪ್ರದಾಯಿಕ ಮೌಲ್ಯದ ವಿರುದ್ಧ ಜಾಗತೀಕರಣ ‘ಈ ಸಂಘರ್ಷದ ಪ್ರತ್ಯೇಕ ಭಾಗವೆಂದು ತಿಳಿಯಲಾಗಿದೆ.

ಕೇವಲ 14 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆ ಮೂರು ಪಟ್ಟು ಹೆಚ್ಚಳ!

ವಾಸೆಡಾ ವಿಶ್ವವಿದ್ಯಾಲಯದ ಪ್ರೊ. ಎಮೆರಿಟಸ್ ಹಿರೋಫುಮಿ ತನಾಡಾ ಅವರ ಪ್ರಕಾರ, 2024 ರ ಅಂತ್ಯದ ವೇಳೆಗೆ ಜಪಾನ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಸುಮಾರು 4 ಲಕ್ಷದ 20 ಸಾವಿರಕ್ಕೆ ತಲುಪಿದೆ. 2010 ರಲ್ಲಿ ಈ ಸಂಖ್ಯೆ 1 ಲಕ್ಷದ 10 ಸಾವಿರ ಇತ್ತು. ಜಪಾನ್‌ನಲ್ಲಿರುವ ಮುಸ್ಲಿಮರಲ್ಲಿ ಶೇಕಡಾ 90% ರಷ್ಟು ಜನರು ವಿದೇಶದಿಂದ ಬಂದು ನೆಲೆಸಿದವರಾಗಿದ್ದಾರೆ. ಉಳಿದ ಶೇಕಡಾ 10% ರಷ್ಟು ಜನರು ಮತಾಂತರಗೊಂಡವರಾಗಿದ್ದಾರೆ.

ಮಸೀದಿಗಳ ಸಂಖ್ಯೆಯಲ್ಲೂ ಮೂರು ಪಟ್ಟು ಹೆಚ್ಚಳ!

ಜಪಾನ್‌ನಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದ್ದು, ಕಾರ್ಮಿಕರ ಕೊರತೆಯಿದೆ. ವಿದೇಶಿ ಕಾರ್ಮಿಕರನ್ನು ಆಕರ್ಷಿಸಲು ಜಪಾನ್ ಸರಕಾರವು ತನ್ನ ಬಾಗಿಲುಗಳನ್ನು ತೆರೆದಿದೆ. ಮುಸ್ಲಿಂ ಬಹುಸಂಖ್ಯಾತ ಇಂಡೋನೇಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಜನರು ಉದ್ಯೋಗಕ್ಕಾಗಿ ಜಪಾನ್‌ಗೆ ವಲಸೆ ಬರುತ್ತಿದ್ದಾರೆ. 2008 ರಲ್ಲಿ ಜಪಾನ್‌ನಲ್ಲಿ 50 ಮಸೀದಿಗಳಿದ್ದವು, ಆದರೆ 2025 ರ ಹೊತ್ತಿಗೆ ಕನಿಷ್ಠ 164 ಮಸೀದಿಗಳು ದಾಖಲಾಗಿವೆ.

ಸ್ಮಶಾನಗಳ ವಿಷಯದಲ್ಲೂ ಉದ್ವಿಗ್ನತೆ:

ಜಪಾನಿನ ಸಂಸ್ಕೃತಿಯ ಪ್ರಕಾರ ಮೃತರ ಅಂತ್ಯಕ್ರಿಯೆಯನ್ನು ದಹನದ ಮೂಲಕ ಮಾಡಲಾಗುತ್ತದೆ. ಆದರೆ ಇಸ್ಲಾಮಿಕ್ ಸಂಪ್ರದಾಯದಲ್ಲಿ ಹೂಳುವ (ದಫನ್) ಪದ್ಧತಿಯಿದೆ. ಈ ಪದ್ಧತಿಗೆ ಜಪಾನ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ದಫನ್ ಮಾಡುವುದು ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭೂಗತ ನೀರು ಕಲುಷಿತಗೊಳ್ಳುತ್ತದೆ’ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಜಪಾನ್‌ನಲ್ಲಿ ಸ್ಮಶಾನಗಳ ಸಂಖ್ಯೆ ಕಡಿಮೆ ಇದೆ, ಹಾಗಾಗಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದೆ. ಜಪಾನಿನಲ್ಲಿ ಮುಸ್ಲಿಮರಿಗಾಗಿ ಕೇವಲ 10 ಸ್ಮಶಾನಗಳಿವೆ. ಹೊಸ ಸ್ಮಶಾನಗಳ ಪ್ರಸ್ತಾವನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಲ್ಲದೆ ಸ್ಥಳೀಯ ನಾಗರೀಕರು ಸ್ಮಶಾನಕ್ಕೂ ವಿರೋಧಿಸುತ್ತಿದ್ದಾರೆ. ಇದರ ಜೊತೆಗೆ ಜಪಾನಿನಲ್ಲಿ ಸ್ಥಳೀಯ ನಾಗರೀಕರು ಅಜಾನಗೂ ವಿರೋಧ ವ್ಯಕ್ತಪಡಿಸಿದ್ದಾರೆ. ಧ್ವನಿಯ ತೊಂದರೆಯಿಂದ ಜನರು ಅಜಾನ್ ಗೆ ವಿರೋಧಿಸುತ್ತಿದ್ದಾರೆ. ಹಾಗೂ ಈದ್-ಅಲ್-ಫಿತರ್ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಸೇರುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ.

ಸಂಪಾದಕೀಯ ನಿಲುವು

ಒಂದು ಮಸೀದಿ ನಿರ್ಮಾಣವಾದರೆ ಎಷ್ಟು ತೊಂದರೆಯಾಗುತ್ತದೆ ಎಂಬುದು ಭಾರತದ ಹಿಂದೂಗಳಿಗೆ ತಿಳಿದಿದೆ. ಈಗ ಜಪಾನ್ ಜನರಿಗೂ ಇದು ಅರ್ಥವಾಗತೊಡಗಿದೆ ಎಂದೇ ಹೇಳಬೇಕಾಗುತ್ತದೆ!