ದೆಹಲಿ ವಿಧಾನಸಭೆಯ ಆವರಣಕ್ಕೆ ಕಾರು ನುಗ್ಗಿಸಿದ ಆರೋಪಿಯ ಬಂಧನ

ನಾಪತ್ತೆಯಾದ ಸೋದರಳಿಯನನ್ನು ಪೊಲೀಸರು ಹುಡುಕಿಕೊಡದ ಅಳಲನ್ನು ತೋಡಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ಆರೋಪಿಯ ದಾವೆ

ನವ ದೆಹಲಿ – ದೆಹಲಿ ವಿಧಾನಸಭೆಯ ಪ್ರವೇಶ ದ್ವಾರದ ಮುಂದಿನ ತಡೆಗೋಡೆಗಳನ್ನು ಮೀರಿ ಒಳನುಗ್ಗಿದ ಕಾರಿನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಅವನ ವಾಹನವನ್ನೂ ಜಪ್ತಿ ಮಾಡಲಾಗಿದೆ. ಸರಬಜೀತ್ ಎಂಬಾತನೇ ಬಂಧಿತ ಆರೋಪಿ ವಾಹನ ಚಾಲಕ. ಈ ಕೃತ್ಯದ ಹಿಂದಿನ ಕಾರಣವನ್ನು ತಿಳಿಸಿದ ಸರಬಜೀತ್, ತನ್ನ ಸೋದರಳಿಯ ಏಪ್ರಿಲ್ ೧ ರಿಂದ ನಾಪತ್ತೆಯಾಗಿದ್ದಾನೆ, ಈ ಬಗ್ಗೆ ಹರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಕಾರಣ ತಾನು ನಿರಾಶೆಗೊಂಡಿದ್ದೆ ಎಂದು ತಿಳಿಸಿದ್ದಾನೆ. ಇದೇ ಕಾರಣಕ್ಕಾಗಿ ನೇರವಾಗಿ ವಿಧಾನಸಭೆಗೆ ನುಗ್ಗಿ ಯಾರಾದರೂ ಹಿರಿಯ ಅಧಿಕಾರಿಗೆ ತನ್ನ ಅಳಲನ್ನು ತಲುಪಿಸುವ ಪ್ರಯತ್ನ ಮಾಡಿದ್ದಾಗಿ ಅವನು ಹೇಳಿದ್ದಾನೆ.

ಪೊಲೀಸರಿಗೆ ಸರಬಜೀತ್ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ; ಆದರೆ ವಾಹನವನ್ನು ನೇರವಾಗಿ ತಡೆಗೋಡೆಗಳನ್ನು ಮುರಿದು ಒಳಗೆ ನುಗ್ಗಿಸಿದ್ದಕ್ಕಾಗಿ ಅವನ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ಸರಬಜೀತ್ ಪತ್ನಿಯು ಅವನ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದು, ಅವನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿಸಿದ್ದಾಳೆ.

ಸಂಪಾದಕೀಯ ನಿಲುವು

  • ಪೊಲೀಸರು ದರ್ಪ ತೋರುತ್ತಾರೆ, ಉಡಾಫೆಯ ಉತ್ತರ ನೀಡುತ್ತಾರೆ ಮತ್ತು ನಿರ್ಲಕ್ಷಿಸುತ್ತಾರೆ ಎಂಬ ಅನುಭವಗಳು ದೇಶದ ಜನತೆಗೆ ಹೊಸದೇನಲ್ಲ; ಮತ್ತು ಪ್ರತಿದಿನವೂ ಅಂತಹ ಅನುಭವಗಳು ಜನರಿಗೆ ಆಗುತ್ತಲೇ ಇರುತ್ತವೆ. ಆದ್ದರಿಂದ, ಇಂತಹ ಪೊಲೀಸರಿಗೆ ಕಠಿಣ ಶಿಕ್ಷೆಯಾಗದಿದ್ದರೆ ಜನರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾದರೆ ಆಶ್ಚರ್ಯಪಡಬೇಕಿಲ್ಲ!
  • ಅಯೋಗ್ಯ ಮತ್ತು ತಪ್ಪು ಕಾರ್ಯಗಳು ನಡೆಯುತ್ತಿರುವುದರಿಂದಲೇ ಜನರಲ್ಲಿನ ಆಕ್ರೋಶವಾಗಿ ಸ್ಫೋಟಗೊಳ್ಳುತ್ತದೆ ಮತ್ತು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ; ಆದರೂ ಆಡಳಿತ ವ್ಯವಸ್ಥೆ, ಪೊಲೀಸರು ಮತ್ತು ಆಡಳಿತಗಾರರು ಸುಧಾರಿಸದಿದ್ದರೆ, ಜನತೆ ಅಂತಹವರನ್ನು ಅಧಿಕಾರದಿಂದ ಕೆಳಗಿಳಿಸದೆ ಬಿಡುವುದಿಲ್ಲ!