ನನ್ನ ಮೇಲಿನ ಟೀಕೆ ಹಿಂದೂ ವಿರೋಧಿ ಸಂಚಿನ ಭಾಗ! – ಮಂಗಳ ಪ್ರಭಾತ್ ಲೋಧಾ, ಕೌಶಲ್ಯ ಅಭಿವೃದ್ಧಿ ಸಚಿವ

ಮುಂಬಯಿ – ಹಿಂದೂ ಹಬ್ಬಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಷಪೂರಿತ ಟೀಕೆ ಮಾಡುವುದು ಸದ್ಯದ ‘ಫ್ಯಾಷನ್’ ಆಗಿದೆ. ನನ್ನ ಮೇಲೆ ನಡೆದಿರುವ ಟೀಕೆ ಕೂಡ ಇದೇ ಹಿಂದೂ ವಿರೋಧಿ ನ್ಯಾರೆಟಿವ್ (ಸುಳ್ಳು ಹೇಳಿಕೆಯ) ನ ಒಂದು ಭಾಗವಾಗಿದೆ; ಆದರೆ ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಮತದಾರರ ಬಗೆಗಿನ ನನ್ನ ಬದ್ಧತೆ ಮತ್ತು ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯನ್ನು ನಾನು ಮುಂದುವರಿಸುತ್ತೇನೆ ಎಂದು ಕೌಶಲ್ಯ ಅಭಿವೃದ್ಧಿ ಸಚಿವ ಮಂಗಳ ಪ್ರಭಾತ್ ಲೋಧಾ ಹೇಳಿದ್ದಾರೆ.
‘ಪ್ರತಿ ಜೈನ ಮಂದಿರಕ್ಕೆ 5 ಸಿಲಿಂಡರ್‌ಗಳನ್ನು ನೀಡಬೇಕು’ ಎಂದು ಮಂಗಳ ಪ್ರಭಾತ್ ಲೋಧಾ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಬೇಡಿಕೆ ಸಲ್ಲಿಸಿದ್ದರು. ಈ ವಿಚಾರವಾಗಿ ವ್ಯಕ್ತವಾಗುತ್ತಿರುವ ರಾಜಕೀಯ ಟೀಕೆಗಳಿಗೆ ಅವರು ಪ್ರತ್ಯುತ್ತರ ನೀಡಿದ್ದಾರೆ.

ಮಂಗಳ ಪ್ರಭಾತ್ ಲೋಧಾ ಅವರು ಮುಂದೆ ಮಾತನಾಡಿ, “ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮನವಮಿ, ಸಾಯಿ ಭಂಡಾರ ಅಥವಾ ಜೈನ ಧರ್ಮೀಯರ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂತಹ ದೊಡ್ಡ ಕಾರ್ಯಕ್ರಮಗಳಿಗೆ ಗ್ಯಾಸ್‌ನ ಹೆಚ್ಚುವರಿ ದಾಸ್ತಾನು ಅಗತ್ಯವಿರುತ್ತದೆ. ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಈ ಕಾರ್ಯಕ್ರಮಗಳ ಆಯೋಜಕರು ನನ್ನ ಬಳಿ ಸಹಾಯಕ್ಕಾಗಿ ಬಂದಾಗ, ಅವರ ಸಹಾಯಕ್ಕಾಗಿ ಪ್ರಯತ್ನಿಸುವುದು ನನ್ನ ಕರ್ತವ್ಯವಾಗಿದೆ. ಏಪ್ರಿಲ್ 2 ರಂದು ಹನುಮಾನ್ ಜಯಂತಿ ಮತ್ತು ಏಪ್ರಿಲ್ 14 ರಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಇದೆ. ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ವಿಧಾನಸಭಾ ಸದಸ್ಯನಾಗಿ ಇದು ನನ್ನ ಜವಾಬ್ದಾರಿಯಾಗಿದೆ,” ಎಂದು ಲೋಧಾ ಅವರು ಹೇಳಿದರು.

“ರಾಜ್ಯದಲ್ಲಿ ಅಥವಾ ದೇಶದಲ್ಲಿ ಗ್ಯಾಸ್ ಕೊರತೆಯಿಲ್ಲ. ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರ ಹಾಗೂ ಆಹಾರ ಸರಬರಾಜು ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಕೇವಲ ವಿಶೇಷ ಸಂದರ್ಭಗಳಲ್ಲಿ ಅಗತ್ಯವಿರುವ ಹೆಚ್ಚುವರಿ ಪೂರೈಕೆಗಾಗಿ ಜನಪ್ರತಿನಿಧಿಗಳು ಮುಂದಾಳತ್ವ ವಹಿಸುವುದು ಅಗತ್ಯವಾಗಿರುತ್ತದೆ. ಆದ್ದರಿಂದ ಇಂತಹ ವಿಷಯಗಳ ಮೂಲಕ ಅನಗತ್ಯವಾಗಿ ಸಾಮಾಜಿಕ ಸಂಘರ್ಷ ಅಥವಾ ವಿವಾದ ಸೃಷ್ಟಿಸುವ ಪ್ರಯತ್ನಗಳನ್ನು ನಿಲ್ಲಿಸಬೇಕು,” ಎಂದು ಲೋಧಾ ಅವರು ಕರೆ ನೀಡಿದರು.