ಪುಣೆ: ಹಿಂದುತ್ವಕ್ಕಾಗಿ ಕಾರ್ಯನಿರ್ವಹಿಸುವ ಸೇನಾನಿಗಳಿಗೆ ‘ಹಿಂದೂ ಶೌರ್ಯ’ ಪ್ರಶಸ್ತಿ ನೀಡಿ ಗೌರವ!

  • ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ಇತಿಹಾಸಜ್ಞ ಶ್ರೀ. ಪಾಂಡುರಂಗ ಬಲಕವಡೆ ಸೇರಿ ೫ ಜನರಿಗೆ ಪ್ರಶಸ್ತಿ.

  • ‘ಶ್ರೀ ರಾಮನವಮಿ ಉತ್ಸವ ಸಮಿತಿ’ಯ ವತಿಯಿಂದ ಮೆರವಣಿಗೆಯ ಆಯೋಜನೆ

ಶ್ರೀ ರಾಮ ಪಂಚಾಯತನ ರಥ

ಪುಣೆ, ಮಾರ್ಚ್ ೨೭ (ವಾರ್ತೆ) – ಇಲ್ಲಿನ ಧನಕವಡಿ ಭಾಗದಲ್ಲಿ ‘ಶ್ರೀ ರಾಮನವಮಿ ಉತ್ಸವ ಸಮಿತಿ, ಪುಣೆ’ಯ ವತಿಯಿಂದ ‘ರಾಮರಾಜ್ಯ ಶೋಭಾಯಾತ್ರೆ’ ಮತ್ತು ‘ಹಿಂದೂ ಶೌರ್ಯ ಪ್ರಶಸ್ತಿ’ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಮಹೋತ್ಸವಕ್ಕೆ ಇದು ೧೩ನೇ ವರ್ಷವಾಗಿದೆ. ರಾಜರ್ಷಿ ಶಾಹು ಬ್ಯಾಂಕ್ ಚೌಕ, ಗುಲಾಬ್‌ನಗರ್‌ನಿಂದ ಧನಕವಡಿ ಕೊನೆಯ ಬಸ್ ನಿಲ್ದಾಣದವರೆಗೆ ಶೋಭಾಯಾತ್ರೆ ನಡೆಸಲಾಯಿತು. ಇದರಲ್ಲಿ ಶ್ರೀ ರಾಮಪಂಚಾಯತನ ರಥ ಮತ್ತು ಶ್ರೀ ರಾಮನ ಪಲ್ಲಕ್ಕಿ ಪಾಲ್ಗೊಂಡಿದ್ದವು.

 

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರನ್ನು ಖಡಕವಾಸಲಾ ಕ್ಷೇತ್ರದ ಭಾಜಪ ಶಾಸಕ ಶ್ರೀ. ಭೀಮರಾವ್ ತಾಪಕೀರ್ ಅವರು ಸನ್ಮಾನಿಸಿದರು.

ಪ್ರಶಸ್ತಿ ಪ್ರದಾನ ಮಾಡುವಾಗ (ಎಡದಿಂದ ಎರಡನೆಯವರು) ಸರ್ವಶ್ರೀ. ಭೀಮರಾವ್ ತಾಪಕೀರ್, (ಮಧ್ಯದಲ್ಲಿ) ಪಾಂಡುರಂಗ ಬಲಕವಡೆ, ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ನಿತಿನ್ ಮಹಾಜನ್

ಮೆರವಣಿಗೆಯ ನಂತರ ವೇದಿಕೆಯ ಮೇಲೆ ‘ಹಿಂದೂ ಶೌರ್ಯ ಪ್ರಶಸ್ತಿ’ ವಿತರಣಾ ಸಮಾರಂಭ ಜರುಗಿತು. ಈ ವರ್ಷ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ಹಿರಿಯ ಇತಿಹಾಸ ಸಂಶೋಧಕ ಶ್ರೀ. ಪಾಂಡುರಂಗ ಬಲಕವಡೆ, ‘ಮಹಾರಾಷ್ಟ್ರ ಗೋಸೇವಾ ಆಯೋಗ’ದ ಸದಸ್ಯರು ಹಾಗೂ ‘ಅನ್ನಾಮೃತ ಫೌಂಡೇಶನ್ ಪುಣೆ’ಯ ನಿರ್ದೇಶಕ ಶ್ರೀ. ಸಂಜಯ ಭೋಸಲೆ, ‘ಶನಿಪಾರ್ ಮಿತ್ರಮಂಡಳಿ’ಯ ಅಧ್ಯಕ್ಷ ಶ್ರೀ. ಸಮೀರ್ ಗಾಯಕ್ವಾಡ್, ‘ಕೇಶವ ಶಂಖನಾದ ತಂಡ’ದ ಸಂಸ್ಥಾಪಕ ಅಧ್ಯಕ್ಷ ಶ್ರೀ. ನಿತಿನ್ ಮಹಾಜನ್ ಅವರನ್ನು ಸಹ ಸನ್ಮಾನಿಸಲಾಯಿತು. ಶಾಲು, ತೆಂಗಿನಕಾಯಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸರ್ವಶ್ರೀ. ಭೀಮರಾವ್ ತಾಪಕೀರ್, ಪ್ರಶಸ್ತಿ ಪುರಸ್ಕೃತ ಶ್ರೀ. ಸಂಜಯ ಭೋಸಲೆ, ಶ್ರೀ. ಪಾಂಡುರಂಗ ಬಲಕವಡೆ, ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ಶ್ರೀ. ನಿತಿನ ಮಹಾಜನ್ ಮತ್ತು ಶ್ರೀ. ಸಮೀರ್ ಗಾಯಕ್ವಾಡ್

ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಾವು ನಿರಪರಾಧಿ ಹಿಂದೂಗಳ ಪರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತೇವೆ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

ಮಾರ್ಗದರ್ಶನ ಮಾಡುತ್ತಿರುವ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜಿಕರ್

ಕಳೆದ ೧೨ ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿರುವ ಈ ಮಂಡಳಿಯನ್ನು ನಾನು ಅಭಿನಂದಿಸುತ್ತೇನೆ. ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಾವು ನಿರಪರಾಧಿ ಹಿಂದೂಗಳ ಪರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ಅವರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ, ಹಾಗೆಯೇ ಆಜಾದ್ ಮೈದಾನದಲ್ಲಿ ಮಹಿಳಾ ಪೊಲೀಸರ ಮೇಲಾದ ದಾಳಿಯ ಗಾಯಗಳನ್ನು ನಾವು ಇನ್ನೂ ಮರೆತಿಲ್ಲ. ಅವರಿಗೂ ನ್ಯಾಯ ಸಿಗಬೇಕು. ಪೊಲೀಸ್ ಆಡಳಿತವು ಇದಕ್ಕಾಗಿ ಪ್ರಯತ್ನಿಸಬೇಕು ಎಂದು ನನಗೆ ಪ್ರಾಮಾಣಿಕವಾಗಿ ಅನಿಸುತ್ತದೆ.

ಪ್ರಶಸ್ತಿ ಪುರಸ್ಕೃತರು!

ಈ ಸಂದರ್ಭದಲ್ಲಿ ಶ್ರೀ. ಪಾಂಡುರಂಗ ಬಲಕವಡೆ ಅವರಿಗೆ ಹಿಂದವೀ ಸ್ವರಾಜ್ಯದ ಇತಿಹಾಸದಲ್ಲಿ ಅವರ ಕೊಡುಗೆ ಮತ್ತು ಸಮಾಜಕಾರ್ಯವನ್ನು ಗೌರವಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ‘ಇಸ್ಕಾನ್’ನ ಉಪಾಧ್ಯಕ್ಷ ಮತ್ತು ‘ಅನ್ನಾಮೃತ ಫೌಂಡೇಶನ್’ನ ನಿರ್ದೇಶಕ ಶ್ರೀ. ಸಂಜಯ ಭೋಸಲೆ ಅವರು ವಿವಿಧ ಮಾಧ್ಯಮಗಳ ಮೂಲಕ ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಅವರಿಗೂ ‘ಹಿಂದೂ ಶೌರ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಯಾತ್ರೆಯ ಪ್ರಮುಖ ಆಕರ್ಷಣೆ!

ಢೋಲ್-ತಾಶಾ ತಂಡ

ಶೋಭಾಯಾತ್ರೆಯಲ್ಲಿ ಶ್ರೀ ರಾಮರಥ, ‘ರುದ್ರ ಗರ್ಜನಾ ಢೋಲ್-ತಾಶಾ ತಂಡ’, ‘ಅಮರ್ ಬ್ರ್ಯಾಂಡ್’ ತಂಡ ಮತ್ತು ‘ಕೇಶವ ಶಂಖನಾದ’ ತಂಡಗಳು ಭಾಗವಹಿಸಿದ್ದವು. ಇದರೊಂದಿಗೆ ೧೦೦ ಢೋಲ್-ತಾಶಾಗಳ ಒಟ್ಟುಗೂಡಿದ ವಾದನ, ರಂಗೋಲಿಯ ರತ್ನಗಂಬಳಿ, ಆಕರ್ಷಕ ವಿದ್ಯುತ್ ದೀಪಾಲಂಕಾರ, ಪಟಾಕಿ ಸಿಡಿತ ಮತ್ತು ‘ಕೋಲ್ಡ್ ಫೈರ್ ಶೋ’ ಈ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು. ಈ ಮಂಗಳಕರ ಸಂದರ್ಭದಲ್ಲಿ ಎಲ್ಲಾ ರಾಮಭಕ್ತರು ಮತ್ತು ಹಿಂದುತ್ವವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಆರತಿ ಬೆಳಗುತ್ತಿರುವ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

ನ್ಯಾಯವಾದಿ (ವಕೀಲ) ವೀರೇಂದ್ರ ಇಚಲಕರಂಜೀಕರ್ ಅವರಿಗೆ

ನೀಡಲಾದ ಸನ್ಮಾನ ಫಲಕದ ಮೇಲಿನ ಬರಹ ಈ ಕೆಳಗಿನಂತಿದೆ

ನಮಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ !

ಈ ಆಧುನಿಕ ಯುಗದಲ್ಲಿ ಅನೇಕ ‘ಸಮಾಜರತ್ನ’ರು ಸಮಾಜಕ್ಕಾಗಿ ಹಲವು ರೀತಿಯ ಕೊಡುಗೆಗಳನ್ನು ನೀಡುವ ಮೂಲಕ ಅಥವಾ ಯಾವುದಾದರೂ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಹಿಂದವೀ ಸ್ವರಾಜ್ಯಕ್ಕಾಗಿ ಅಡಿಪಾಯ ಹಾಕುತ್ತಿರುತ್ತಾರೆ. ಶ್ರೀಮಂತ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಪರಿಕಲ್ಪನೆಯನ್ನು ಪ್ರತ್ಯಕ್ಷವಾಗಿ ಸಾಕಾರಗೊಳಿಸಿದ್ದು ರಾಮರಾಜ್ಯದ ಆದರ್ಶದಿಂದಲೇ! ಶಿವರಾಯರ ಸ್ವರಾಜ್ಯದ ಕನಸನ್ನು ಸುರಾಜ್ಯವನ್ನಾಗಿ ಪರಿವರ್ತಿಸಲು, ಲಕ್ಷಾಂತರ ವರ್ಷಗಳ ನಂತರವೂ ಶಾಂತ, ಸಂಯಮಿ, ಪರಾಕ್ರಮಿ ಹಾಗೂ ಆದರ್ಶ ರಾಜ್ಯಕರ್ತರಾದ ಶ್ರೀ ಪ್ರಭು ರಾಮಚಂದ್ರರು ಮನುಷ್ಯರನ್ನು ಸೆಳೆಯುತ್ತಾರೆ (ಆಕರ್ಷಿಸುತ್ತಾರೆ). ಶ್ರೀರಾಮನವಮಿಯ ಪಾವನ ಮುಹೂರ್ತದಲ್ಲಿ ನೀವು ಈ ಹಿಂದವೀ ಸ್ವರಾಜ್ಯಕ್ಕಾಗಿ ನೀಡುತ್ತಿರುವ ಕೊಡುಗೆಗಳಿಗಾಗಿ ತಮಗೆ ‘ಹಿಂದೂ ಶೌರ್ಯ’ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ನಮಗೆ ನಿಮ್ಮ ಬಗ್ಗೆ ಸಾರ್ಥಕ ಹೆಮ್ಮೆಯಿದೆ, ಎಂಬ ಮಾತುಗಳಲ್ಲಿ ‘ಶ್ರೀರಾಮನವಮಿ ಉತ್ಸವ ಸಮಿತಿ’ಯು ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಅವರನ್ನು ಗೌರವಿಸಿದೆ.

ಉಪಸ್ಥಿತಿ

ವೈಶಿಷ್ಟ್ಯಪೂರ್ಣ

ಸಂಪೂರ್ಣ ಮೆರವಣಿಗೆ ಮತ್ತು ಕಾರ್ಯಕ್ರಮದಲ್ಲಿ ಭಜನೆಗಳು ಹಾಗೂ ಭಾವಪೂರ್ಣ ವಾತಾವರಣವಿತ್ತು. ‘ಶಂಖನಾದ ತಂಡ’ ಮತ್ತು ಢೋಲ್-ತಾಶಾ ತಂಡಗಳು ಸಾಂಪ್ರದಾಯಿಕ ಶೈಲಿಯಲ್ಲಿ ವಾದನ ಮಾಡುತ್ತಾ ಪ್ರಭು ರಾಮಚಂದ್ರನಿಗೆ ವಂದನೆ ಸಲ್ಲಿಸಿದವು. ಭಕ್ತರು ಪ್ರಭು ರಾಮಚಂದ್ರನ ಪಲ್ಲಕ್ಕಿಯನ್ನು ಹೊತ್ತು ಬರಿಗಾಲಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಡೀ ಪರಿಸರ ಕೇಸರಿಮಯವಾಗಿತ್ತು. ಪ್ರಭು ರಾಮಚಂದ್ರ ಮತ್ತು ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಎಂಬ ಘೋಷಣೆಗಳಿಂದ ಪರಿಸರ ಮೊಳಗಿತು. ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು ಪ್ರಭು ಶ್ರೀ ರಾಮನ ಮಹಾಆರತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.