ಶಕ್ತಿ ಕಾಯ್ದೆಯ ನಿಬಂಧನೆಗಳನ್ನು ಒಳಗೊಂಡ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ !

ಮುಂಬಯಿ, ಮಾರ್ಚ್ ೨೫ (ಸುದ್ದಿ) – ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ, ಮಾನಹಾನಿ ಮುಂತಾದವುಗಳ ವಿರುದ್ಧ ಮಹಾರಾಷ್ಟ್ರ ವಿಧಾನಮಂಡಲದಲ್ಲಿ ಅಂಗೀಕರಿಸಲ್ಪಟ್ಟ ಮತ್ತು ಕೇಂದ್ರ ಸರಕಾರದ ಅನುಮೋದನೆಗೆ ಕಳುಹಿಸಲಾದ ‘ಶಕ್ತಿ’ ಕಾಯ್ದೆಯ ನಿಬಂಧನೆಗಳನ್ನು ಒಳಗೊಂಡಿರುವ ‘ಭಾರತೀಯ ನ್ಯಾಯ ಸಂಹಿತೆ (ಮಹಾರಾಷ್ಟ್ರ ತಿದ್ದುಪಡಿ), ೨೦೨೬’ ಅನ್ನು ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕರಿಸಲಾಯಿತು. ಮಾರ್ಚ್ ೨೫ ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದು

೧. ೨೦೨೦ ರಲ್ಲಿ ಮಹಾರಾಷ್ಟ್ರ ಸರಕಾರವು ಶಕ್ತಿ ಕಾಯ್ದೆಯ ವಿಧೇಯಕವನ್ನು ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು; ಆದರೆ ಶಕ್ತಿ ಕಾಯ್ದೆಯ ನಿಬಂಧನೆಗಳನ್ನು ಒಳಗೊಂಡ ಹೊಸ ಕಾಯ್ದೆಯನ್ನು ಜಾರಿಗೆ ಬರುವುದರಿಂದ ಕೇಂದ್ರ ಸರಕಾರವು ಶಕ್ತಿ ಕಾಯ್ದೆಗೆ ಮಾನ್ಯತೆ ನೀಡಿರಲಿಲ್ಲ.

೨. ಶಕ್ತಿ ಕಾಯ್ದೆಯ ಆಧಾರದಡಿ ಕೇಂದ್ರ ಸರಕಾರವು ‘ಭಾರತೀಯ ನ್ಯಾಯ ಸಂಹಿತೆ ೨೦೨೩’ ಎಂಬ ಕಾಯ್ದೆಯನ್ನು ಅಂಗೀಕರಿಸಿದೆ. ಮಹಾರಾಷ್ಟ್ರ ಸರಕಾರವು ಕಳುಹಿಸಿದ್ದ ಶಕ್ತಿ ಕಾಯ್ದೆಯ ೯ ಸೆಕ್ಷನ್‌ಗಳನ್ನು ಕೇಂದ್ರ ಸರಕಾರದ ಈ ಕಾಯ್ದೆಯಲ್ಲಿ ಸೇರಿಸಲಾಗಿದೆ.

೩. ಕೇಂದ್ರ ಸರಕಾರದ ಕಾಯ್ದೆಯಲ್ಲಿ ಸೇರ್ಪಡೆಯಾಗದ ಉಳಿದ ೨ ಸೆಕ್ಷನ್‌ಗಳನ್ನು ಮಹಾರಾಷ್ಟ್ರ ಸರಕಾರವು ‘ಭಾರತೀಯ ನ್ಯಾಯ ಸಂಹಿತೆ (ಮಹಾರಾಷ್ಟ್ರ ತಿದ್ದುಪಡಿ), ೨೦೨೬’ ವಿಧೇಯಕದಲ್ಲಿ ಸೇರಿಸಿದೆ.

ಇತರ ರಾಜ್ಯಗಳೂ ಈ ತಿದ್ದುಪಡಿಗಳನ್ನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತೇವೆ! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ

ಈ ವಿಧೇಯಕವನ್ನು ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಮತ್ತು ಅವರ ಅನುಮೋದನೆಯ ನಂತರ ಈ ಕಾಯ್ದೆಯು ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಕುರಿತು ಮಾತನಾಡಿದ ದೇವೇಂದ್ರ ಫಡ್ನವಿಸ್ ಅವರು, ಮಹಾರಾಷ್ಟ್ರ ಸರಕಾರವು ಸೇರಿಸಿರುವ ೨ ನಿಬಂಧನೆಗಳನ್ನು ಇತರ ರಾಜ್ಯಗಳಿಗೂ ಅನ್ವಯಿಸುವಂತೆ ನಾವು ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಭಾಸ್ಕರ ಜಾಧವ್ ಅವರು ಮಾತನಾಡಿ, ‘ಕಾಯ್ದೆಯು ದುರುಪಯೋಗವಾಗಬಾರದು ಮತ್ತು ಪುರುಷರ ವಿರುದ್ಧ ಈ ಕಾಯ್ದೆಯನ್ನು ಬಳಸಬಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ದೇವೇಂದ್ರ ಫಡ್ನವಿಸ್, ‘ಕಾಯ್ದೆಯನ್ನು ಅಸ್ತ್ರವಾಗಿ ಬಳಸುವುದು ಅಪೇಕ್ಷಿತವಲ್ಲ. ಯಾವುದೇ ಕಾಯ್ದೆಯ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಸರಕಾರದ ನಿಲುವು. ಆ ದೃಷ್ಟಿಯಿಂದ ಅಧ್ಯಯನ ನಡೆಸಲಾಗುವುದು’ ಎಂದು ತಿಳಿಸಿದರು.

ಇನ್ನು ಮುಂದೆ ಈ ಕೃತ್ಯಗಳನ್ನು ಕೂಡ ಅಪರಾಧವೆಂದು ಪರಿಗಣಿಸಲಾಗುವುದು!

೧. ಯಾರಾದರೂ ಆಸಿಡ್ ಮೂಲಕ ಸ್ವಯಂಪ್ರೇರಿತವಾಗಿ ಗಾಯ ಮಾಡಿಕೊಂಡಿದ್ದರೆ, ಅಂತಹ ಸಂತ್ರಸ್ತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸುವುದು.

೨. ಇ-ಮೇಲ್, ಸಾಮಾಜಿಕ ಮಾಧ್ಯಮಗಳು ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮಾಧ್ಯಮದ ಮೂಲಕ ಪ್ರಚೋದನಕಾರಿ ಸಂದೇಶಗಳು, ಛಾಯಾಚಿತ್ರಗಳು, ಧ್ವನಿಮುದ್ರಣ (ಆಡಿಯೋ) ಅಥವಾ ವಿಡಿಯೋಗಳನ್ನು ಅಪ್‌ ಲೋಡ್ ಮಾಡುವ ಅಥವಾ ಪ್ರಸಾರ ಮಾಡುವ ಬೆದರಿಕೆ ಹಾಕಿ ಲೈಂಗಿಕ ಕಿರುಕುಳ ನೀಡುವುದು.

೩. ಮಹಿಳೆಯ ಒಪ್ಪಿಗೆಯೊಂದಿಗೆ ಅಥವಾ ಒಪ್ಪಿಗೆಯಿಲ್ಲದೆ ಯಾವುದೇ ಲೈಂಗಿಕ ಕೃತ್ಯದಲ್ಲಿ ಮಹಿಳೆಯ ಭಾಗವಹಿಸುವಿಕೆ ಅಥವಾ ಆ ಮಹಿಳೆಯ ದೇಹದ ಯಾವುದೇ ಭಾಗದ ಛಾಯಾಚಿತ್ರಗಳು, ಆಡಿಯೋ ಅಥವಾ ವಿಡಿಯೋಗಳನ್ನು ಎಲೆಕ್ಟ್ರಾನಿಕ್ ಅಥವಾ ಇತರ ಯಾವುದೇ ಮಾಧ್ಯಮದ ಮೂಲಕ ನೇರವಾಗಿ ಅಥವಾ ನಕಲಿ ರೀತಿಯಲ್ಲಿ ತಯಾರಿಸಿ ಪ್ರಸಾರ ಮಾಡುವುದು ಅಥವಾ ಪ್ರಸಾರ ಮಾಡುವ ಬೆದರಿಕೆ ಹಾಕುವುದು.

೪. ಎಲೆಕ್ಟ್ರಾನಿಕ್ ಅಥವಾ ಇತರ ಯಾವುದೇ ಮಾಧ್ಯಮದ ಮೂಲಕ ಮಹಿಳೆಯ ಮಾನಹಾನಿ ಮಾಡುವುದು.

೫. ಮಹಿಳೆಯರ ನೇರ ಅಥವಾ ಪರೋಕ್ಷ ವಿನಯಭಂಗವಾಗುವಂತೆ ಅಥವಾ ಆಕೆಯ ಖಾಸಗಿತನದ ಉಲ್ಲಂಘನೆಯಾಗುವಂತೆ ಆಕೆಯ ಹೆಸರು, ವಿವರಗಳು, ಛಾಯಾಚಿತ್ರಗಳು ಅಥವಾ ಇತರ ಯಾವುದೇ ಗುರುತಿನ ಸಾಧನಗಳನ್ನು ಪ್ರಸಾರ ಮಾಡುವುದು ಅಪರಾಧವೆಂದು ಪರಿಗಣಿಸಲಾಗುವುದು.