ಕೆನಡಾದಲ್ಲಿನ ವಿದೇಶಿ ಹಸ್ತಕ್ಷೇಪದ ಪ್ರಕರಣಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಗೆ ಪುರಾವೆಗಳಿಲ್ಲ! Canada Police Chief Clarification

ಕೆನಡಾದ ರಾಷ್ಟ್ರೀಯ ಪೊಲೀಸ್ ಪಡೆಯ ಮುಖ್ಯಸ್ಥರಿಂದ ಸ್ಪಷ್ಟನೆ

ಒಟಾವಾ (ಕೆನಡಾ) – ‘ಕೆನಡಾದಲ್ಲಿ ನಡೆದಿದೆ ಎನ್ನಲಾದ ವಿದೇಶಿ ಹಸ್ತಕ್ಷೇಪದ ಪ್ರಕರಣಗಳಲ್ಲಿ ಭಾರತ ಸರಕಾರದ ನೇರ ಸಂಬಂಧವಿದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಬಲವಾದ ಪುರಾವೆಗಳು ಲಭ್ಯವಿಲ್ಲ’, ಎಂದು ಕೆನಡಾದ ರಾಷ್ಟ್ರೀಯ ಪೊಲೀಸ್ ಪಡೆ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯಿಂದಾಗಿ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ತನಿಖೆ ಪೂರ್ಣಗೊಳ್ಳುವವರೆಗೆ ಪರಿಸ್ಥಿತಿ ಸಂಪೂರ್ಣವಾಗಿ ಸ್ಪಷ್ಟವಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ತನಿಖೆ ಮುಂದುವರಿದಿದೆ!

ವಿವಿಧ ವಿದೇಶಿ ಹಸ್ತಕ್ಷೇಪದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ; ಆದರೆ ತನಿಖೆಯ ಅವಧಿಯಲ್ಲಿ ಭಾರತ ಸರಕಾರ ಅಥವಾ ಭಾರತೀಯ ಅಧಿಕಾರಿಗಳ ನೇರ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ಇದುವರೆಗೆ ಕಂಡುಬಂದಿಲ್ಲ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ತನಿಖಾ ಪ್ರಕ್ರಿಯೆಯಲ್ಲಿ ಗುಪ್ತಚರ ಮಾಹಿತಿ, ಆರ್ಥಿಕ ವ್ಯವಹಾರ, ಸಂಘಟನೆಗಳ ನಡುವಿನ ಸಂಬಂಧ ಮತ್ತು ವೈಯಕ್ತಿಕ ಸಂಪರ್ಕಗಳನ್ನು ಅಧ್ಯಯನ ಮಾಡಲಾಗುತ್ತಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಹೊಸ ಪುರಾವೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದೇ ವಿದೇಶಿ ಹಸ್ತಕ್ಷೇಪದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ-ಕೆನಡಾ ಉದ್ವಿಗ್ನತೆಯ ಹಿನ್ನೆಲೆ

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತದ ಮೇಲೆ ಸಂಶಯ ವ್ಯಕ್ತಪಡಿಸಲಾಗಿತ್ತು. ಈ ಪ್ರಕರಣದಿಂದಾಗಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಭಾರೀ ಉದ್ವಿಗ್ನತೆ ಉಂಟಾಯಿತು. ಪರಸ್ಪರ ಆರೋಪ-ಪ್ರತ್ಯಾರೋಪಗಳು, ರಾಜತಾಂತ್ರಿಕ ಅಧಿಕಾರಿಗಳ ಉಚ್ಚಾಟನೆ ಮತ್ತು ವ್ಯಾಪಾರ _ ಭದ್ರತಾ ಸಹಕಾರದ ಮೇಲೆ ಇದರ ಪರಿಣಾಮ ಬೀರಿತು.

ಭಾರತವು ಈ ಹಿಂದೆಯೇ ಇಂತಹ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಇವು ರಾಜಕೀಯ ಪ್ರೇರಿತ ಎಂದು ಹೇಳಿದೆ.  ಭಾರತವು ಕೆನಡಾದಲ್ಲಿರುವ ಭಾರತ ವಿರೋಧಿ ಮತ್ತು ಭಯೋತ್ಪಾದಕ ಪ್ರವೃತ್ತಿಯ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ  ಕೆನಡಾವನ್ನು ಒತ್ತಾಯಿಸಿದೆ.