‘ಭೂಮಿ ಸುಪೋಷಣ ಅಭಿಯಾನ’ದಲ್ಲಿ ಸಮಾಜದ ಎಲ್ಲಾ ವರ್ಗದವರು ಪಾಲ್ಗೊಳ್ಳಬೇಕು! – ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ Bhumi Suposhan Samvardhana National Campaign

ಅಮಳನೇರ್‌ನ ಶ್ರೀ ಮಂಗಳಗ್ರಹ ದೇವಸ್ಥಾನದಿಂದ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ!

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಭಗವಾನ್ ಶ್ರೀಕೃಷ್ಣನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡುತ್ತಿರುವ ಶ್ರೀ. ಸುನಿಲ್ ಘನವಟ್.

ಅಮಳನೇರ್ – ಎಲ್ಲರಿಗೂ ಜೀವದಾಯಿನಿಯಾಗಿರುವ ಭೂಮಿ ತಾಯಿಯ ಜನ್ಮದಿನವು ಚೈತ್ರ ಶುದ್ಧ ಪ್ರತಿಪದ ಅಂದರೆ ಯುಗಾದಿಯಂದು ಬರುತ್ತದೆ. ಈ ಮಂಗಳಕರ ದಿನದಂದು ‘ಭೂಮಿ ಸುಪೋಷಣ ರಾಷ್ಟ್ರೀಯ ಅಭಿಯಾನ’ವು ಶ್ರೀ ಮಂಗಳಗ್ರಹ ದೇವಸ್ಥಾನದಿಂದ ಪ್ರಾರಂಭವಾಗುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಈ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಸಮಾಜದ ಎಲ್ಲಾ ವರ್ಗದವರು ಭಾಗವಹಿಸಬೇಕು. ಅನ್ನದಾತ ಭೂಮಿಯನ್ನು ತಾಯಿ ಎಂದು ಭಾವಿಸಿ ಸಾವಯವ ಕೃಷಿ ಮಾಡಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದರು. ಅಕ್ಷಯ ಕೃಷಿ ಪರಿವಾರ ಮತ್ತು ಮಂಗಳಗ್ರಹ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 19 ರಂದು ಶ್ರೀ ಮಂಗಳಗ್ರಹ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ‘ಭೂಮಿ ಸುಪೋಷಣ’ ರಾಷ್ಟ್ರೀಯ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಶಂಕರಾಚಾರ್ಯ ಸ್ವಾಮಿ ನೃಸಿಂಹ ವಿಜಯೇಂದ್ರ ಸರಸ್ವತಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಬಾಳಾಸಾಹೇಬ್ ಚೌಧರಿ, ಪದ್ಮಶ್ರೀ ಡಾ. ಸುಭಾಷ ಶರ್ಮಾ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ದೇವಸ್ಥಾನ ಮಹಾಸಂಘದ ಸಂಯೋಜಕ ಸುನಿಲ್ ಘನವಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯ ಭಾಗೈಯ್ಯಜೀ, ಅಕ್ಷಯ ಕೃಷಿ ಪರಿವಾರದ ಅಧ್ಯಕ್ಷ ಮನೋಜ್‌ಭಾಯಿ ಸೋಲಂಕಿ, ಉಪಾಧ್ಯಕ್ಷ ಡಾ. ಗಜಾನನ ಡಾಂಗೆ, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ಖಡ್ಸೆ, ಜಿಲ್ಲಾ ಉಸ್ತುವಾರಿ ಸಚಿವ ಗುಲಾಬ್ರಾವ್ ಪಾಟೀಲ್, ಜಲಸಂಪನ್ಮೂಲ ಹಾಗೂ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್, ಜಲಗಾಂವ್ ಸಂಸದೆ ಸ್ಮಿತಾತಾಯಿ ವಾಘ್, ಶಾಸಕ ಅನಿಲದಾದಾ ಪಾಟೀಲ್ ಮತ್ತು ಮಂಗಳಗ್ರಹ ಸೇವಾ ಸಂಸ್ಥೆಯ ಅಧ್ಯಕ್ಷ ಡಾ. ದಿಗಂಬರ್ ಮಹಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

೧೭ ಸಾವಿರ ದೇವಸ್ಥಾನಗಳು ಸಾಮಾಜಿಕ ಕಾರ್ಯಗಳಲ್ಲಿ ಕೊಡುಗೆ ನೀಡುತ್ತಿವೆ! – ಸುನಿಲ ಘನವಟ್

ಶ್ರೀ. ಸುನಿಲ ಘನವಟ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಶ್ರೀ ಮಂಗಳಗ್ರಹ ದೇವಸ್ಥಾನದಿಂದ ಭೂಮಿ ಸುಪೋಷಣ ಸಂವರ್ಧನಾ ರಾಷ್ಟ್ರೀಯ ಅಭಿಯಾನವು ಪ್ರಾರಂಭವಾಗುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಕೇವಲ ಜಲಗಾಂವ್, ಮಹಾರಾಷ್ಟ್ರ ಮಾತ್ರವಲ್ಲದೆ, ಇಡೀ ದೇಶಾದ್ಯಂತ ಇದು ಪ್ರಚಾರವಾಗಲಿದೆ. ವಸ್ತ್ರಸಂಹಿತೆ (ದೇವಸ್ಥಾನ ಪ್ರವೇಶಿಸುವಾಗ ಧರಿಸಬೇಕಾದ ಉಡುಪಿನ ನಿಯಮಾವಳಿ) ಜಾರಿಗೆ ತಂದ ಭಾರತದ ಮೊದಲ ದೇವಸ್ಥಾನ ಇದಾಗಿದೆ. 17 ಸಾವಿರ ದೇವಸ್ಥಾನಗಳು ಸಾಮಾಜಿಕ ಕಾರ್ಯಗಳಿಗಾಗಿ ಕೊಡುಗೆ ನೀಡುತ್ತಿವೆ. ಭೂಮಿಯ ಸುಪೋಷಣೆಯ ಬಗ್ಗೆ ನಮ್ಮಲ್ಲಿ ಕೃತಜ್ಞತಾ ಭಾವವಿರಬೇಕು. ಪ್ರಸ್ತುತ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಬಂಜರಾಗುತ್ತಿದೆ. ನಾವು ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲಿಸಬೇಕು. ಭೂಮಿ ಪೂಜೆ ಮಾಡುವ ಮೂಲಕ ಭೂಮಿ ಸುಪೋಷಣೆಯ ಸಂಕಲ್ಪ ಮಾಡಬೇಕು. ಇದಕ್ಕಾಗಿ ಎಲ್ಲರೂ ಸಹಭಾಗಿಗಳಾಗಬೇಕು. ಪ್ರತಿಯೊಬ್ಬರೂ ಇದರಲ್ಲಿ ಕೊಡುಗೆ ನೀಡಿದರೆ, ಎಲ್ಲರಿಗೂ ಇದರ ಲಾಭವಾಗುವುದು ಎಂದರು.

‘ಭೂಮಿ ಸುಪೋಷಣ ಅಭಿಯಾನ’ ಎಂದರೇನು?

ಸರಕಾರದ ‘ಭೂಮಿ ಸುಪೋಷಣ ಅಭಿಯಾನ’ದ ಅಡಿಯಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದು, ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ.

ಶ್ರೀ ಮಂಗಳಗ್ರಹ ದೇವಸ್ಥಾನವು ದೇಶದ ಮೊದಲ ‘AI’ ದೇವಸ್ಥಾನ!

ಅಮಳನೇರ್‌ನ ಮಂಗಳಗ್ರಹ ಸೇವಾ ಸಂಸ್ಥೆಯು ನಿರ್ವಹಿಸುವ ಶ್ರೀ ಮಂಗಳಗ್ರಹ ದೇವಸ್ಥಾನವು ಈಗ ದೇಶದ ಮೊದಲ ‘AI’ (ಕೃತಕ ಬುದ್ಧಿಮತ್ತೆ) ದೇವಸ್ಥಾನವಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಹಸ್ತದಿಂದ ಈ AI ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ತಜ್ಞರಾದ ತುಷಾರ್ ಭಾರಂಬೆ, ಡಾ. ಯುವರಾಜ್ ಪರದೇಶಿ, ಚೇತನ್ ಗಿರ್ನಾರ್ ಮತ್ತು ಮಂಗಳಗ್ರಹ ಸೇವಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.