ಭೋಪಾಲ್‌: ಹಿಂದೂ ಹೊಸ ವರ್ಷದ ಅಂಗವಾಗಿ ಮಾರ್ಚ್ 22 ರಂದು ‘ಭಗವಾ ಶೌರ್ಯ ಪಾದಯಾತ್ರೆ’

ಭೋಪಾಲ್ (ಮಧ್ಯಪ್ರದೇಶ) – ಹಿಂದೂ ಹೊಸ ವರ್ಷದ ಪ್ರಯುಕ್ತ ‘ಧರ್ಮರಕ್ಷಕ’ ಸಂಘಟನೆಯ ವತಿಯಿಂದ ಭೋಪಾಲ್‌ನಲ್ಲಿ ಮಾರ್ಚ್ 22, ಭಾನುವಾರದಂದು ಮಧ್ಯಾಹ್ನ 12 ಗಂಟೆಗೆ *‘ಭಗವಾ ಶೌರ್ಯ ಪಾದಯಾತ್ರೆ’*ಯನ್ನು ಆಯೋಜಿಸಲಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಪಾದಯಾತ್ರೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಧರ್ಮರಕ್ಷಕರು ಭಾಗವಹಿಸಲಿದ್ದಾರೆ ಎಂದು ಧರ್ಮರಕ್ಷಕ ಸಂಘಟನೆಯ ಸಂಸ್ಥಾಪಕ ವಿನೋದ್ ಯಾದವ್ ತಿಳಿಸಿದ್ದಾರೆ. ಈ ಪಾದಯಾತ್ರೆ ಚೋಲಾದ ಸುಪ್ರಸಿದ್ಧ ಖೇರಾಪತಿ ಹನುಮಾನ್ ಮಂದಿರದಿಂದ ಆರಂಭವಾಗಲಿದೆ ಮತ್ತು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗುತ್ತಾ ಲಾಲ್ ಘಾಟಿಯ ಪ್ರಾಚೀನ ಗುಹಾ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.

ಪಾದಯಾತ್ರೆಗೂ ಮುನ್ನ ಚೋಲಾ ದಸರಾ ಮೈದಾನದಲ್ಲಿ ಭವ್ಯ ‘ಧರ್ಮಸಭೆ’ಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಾಧ್ವಿ ಸರಸ್ವತಿದೇವಿ ಅವರು ಮುಖ್ಯ ವಕ್ತಾರರಾಗಿ ಉಪಸ್ಥಿತರಿರಲಿದ್ದಾರೆ. ಇದಲ್ಲದೆ ಅನೇಕ ಸಂತರು ಮತ್ತು ಆಧ್ಯಾತ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಉಪಮುಖ್ಯಮಂತ್ರಿ ಜಗದೀಶ್ ದೇವಡಾ ಮತ್ತು ಇತರ ಜನಪ್ರತಿನಿಧಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ‘ಧರ್ಮರಕ್ಷಕ’ ಸಂಘಟನೆಯು ಈ ಹಿಂದೆ 2016 ರಲ್ಲಿ ಸಿಂಹಸ್ಥ ಕುಂಭಮೇಳದ ಅಂಗವಾಗಿ ಭೋಪಾಲ್‌ನಿಂದ ಉಜ್ಜಯಿನಿಯವರೆಗೆ 5 ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಇದಲ್ಲದೆ, ಭೋಪಾಲ್‌ನಿಂದ ಛಿಂದ್ ಧಾಮ್ (ಬರೇಲಿ) ವರೆಗೂ ಈ ಸಂಘಟನೆಯು ಪಾದಯಾತ್ರೆಯನ್ನು ಆಯೋಜಿಸಿದೆ.