ಕೋಮಾದಲ್ಲಿರುವ ವ್ಯಕ್ತಿಗೆ ದಯಾಮರಣಕ್ಕೆ ಅನುಮತಿ ನೀಡಿದ ಸರ್ವೋಚ್ಚ ನ್ಯಾಯಾಲಯ

ದೇಶದಲ್ಲಿಯೇ ಈ ರೀತಿಯ ಮೊದಲ ಪ್ರಕರಣ

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಗಾಜಿಯಾಬಾದ್ ನಿವಾಸಿಯಾಗಿರುವ ೩೧ ವರ್ಷದ ಹರೀಶ ರಾಣಾ ಅವರಿಗೆ ದಯಾಮರಣಕ್ಕೆ ಅನುಮತಿ ನೀಡಿದೆ. ಅವರ ತಂದೆ-ತಾಯಿ ಇದಕ್ಕಾಗಿ ಅನುಮತಿ ಕೋರಿದ್ದರು. ಹರೀಶ ಕಳೆದ ೧೩ ವರ್ಷಗಳಿಂದ ಕೋಮಾದಲ್ಲಿದ್ದು, ವೆಂಟಿಲೇಟರ್‌ನಲ್ಲಿದ್ದಾರೆ. ದೇಶದಲ್ಲಿ ದಯಾಮರಣಕ್ಕೆ ಅನುಮತಿ ನೀಡಿರುವ ಇದೇ ಮೊದಲ ಘಟನೆಯಾಗಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರಡಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಹರೀಶ ರಾಣಾ ಅವರನ್ನು ಉಪಶಮನಕಾರಿ ಆರೈಕೆಗೆ (ಪ್ಯಾಲಿಯೇಟಿವ್ ಕೇರ್) ದಾಖಲಿಸುವಂತೆ ‘ಏಮ್ಸ್’ ಆಸ್ಪತ್ರೆಗೆ ನಿರ್ದೇಶನ ನೀಡಿದೆ. ಇದರಿಂದಾಗಿ ಜೀವರಕ್ಷಕ ಚಿಕಿತ್ಸೆಗಳನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಬಹುದು. “ಈ ಪ್ರಕ್ರಿಯೆಯು ರೋಗಿಯ ಘನತೆಯನ್ನು ಕಾಪಾಡುವ ರೀತಿಯಲ್ಲಿ ನಡೆಯಬೇಕು,” ಎಂದು ನ್ಯಾಯಾಲಯವು ತಿಳಿಸಿದೆ.

ಏನಿದು ಪ್ರಕರಣ ?

ದೆಹಲಿಯಲ್ಲಿ ಜನಿಸಿದ ಹರೀಶ ರಾಣಾ, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ‘ಬಿ.ಟೆಕ್’ ವ್ಯಾಸಂಗ ಮಾಡುತ್ತಿದ್ದರು. ೨೦೧೩ರಲ್ಲಿ ಅವರು ವಸತಿ ನಿಲಯದ (ಹಾಸ್ಟೆಲ್) ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದರು. ಇದರಿಂದಾಗಿ ಅವರ ಇಡೀ ದೇಹಕ್ಕೆ ಪಾರ್ಶ್ವವಾಯು ತಗುಲಿ ಅವರು ಕೋಮಾಗೆ ಜಾರಿದರು. ಅವರಿಗೆ ಮಾತನಾಡಲು ಅಥವಾ ಯಾವುದೇ ಸಂವೇದನೆಗಳನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಹರೀಶ ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿರುವುದರಿಂದ ಅವರ ತಂದೆ-ತಾಯಿ ದಯಾಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸ್ಥಿತಿಯು ಹರೀಶಗೆ ಅತ್ಯಂತ ನೋವಿನಿಂದ ಕೂಡಿದೆ. ಮಗನನ್ನು ಇಂತಹ ಸ್ಥಿತಿಯಲ್ಲಿ ನೋಡುವುದು ಕುಟುಂಬಕ್ಕೆ ಮಾನಸಿಕವಾಗಿ ಅತ್ಯಂತ ಕಷ್ಟಕರವಾಗಿದೆ. ಹಲವು ವರ್ಷಗಳಿಂದ ಚಿಕಿತ್ಸೆಗಾಗಿ ಮಾಡಿದ ಖರ್ಚಿನಿಂದಾಗಿ ಕುಟುಂಬವು ಆರ್ಥಿಕವಾಗಿ ಸಂಪೂರ್ಣವಾಗಿ ಕುಗ್ಗಿಹೋಗಿದೆ.