ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಮುಕೇಶ್ ಮಲ್ಹೋತ್ರಾ ಅವರ ಶಾಸಕ ಸ್ಥಾನ ರದ್ದು!

  • ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಟ್ಟ ನಾಯಕ

  • ಎರಡನೇ ಸ್ಥಾನದಲ್ಲಿದ್ದ ಭಾಜಪ ಅಭ್ಯರ್ಥಿ ರಾಮನಿವಾಸ್ ರಾವತ್ ಅವರನ್ನು ಶಾಸಕರೆಂದು ಘೋಷಿಸಲು ಆದೇಶ

ಭೋಪಾಲ್ (ಮಧ್ಯಪ್ರದೇಶ) – ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಟ್ಟ ಹಿನ್ನೆಲೆಯಲ್ಲಿ, ವಿಜಯಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುಕೇಶ್ ಮಲ್ಹೋತ್ರಾ ಅವರ ಶಾಸಕ ಸ್ಥಾನವನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಪೀಠವು ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ, ಉಪಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದ (ಮಲ್ಹೋತ್ರಾ ಅವರಿಗಿಂತ ಕಡಿಮೆ ಮತ ಪಡೆದಿದ್ದ) ಭಾಜಪ ಅಭ್ಯರ್ಥಿ ರಾಮನಿವಾಸ್ ರಾವತ್ ಅವರನ್ನು ವಿಜಯಪುರದ ಹೊಸ ಶಾಸಕರೆಂದು ಘೋಷಿಸಲು ನ್ಯಾಯಾಲಯ ಆದೇಶಿಸಿದೆ.

೨೦೨೪ ರಲ್ಲಿ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಶಾಸಕ ಮಲ್ಹೋತ್ರಾ ಅವರು ನಾಮಪತ್ರ ಮತ್ತು ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ನೀಡಿರಲಿಲ್ಲ. ಈ ಕುರಿತು ರಾವತ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮಲ್ಹೋತ್ರಾ ಅವರ ವಿರುದ್ಧ ಒಟ್ಟು ೬ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಅವರು ತಮ್ಮ ಅಫಿಡವಿಟ್‌ನಲ್ಲಿ ಕೇವಲ ೪ ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿ ೨ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ರಾವತ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅವರ ಪೀಠವು, “ಚುನಾವಣಾ ಅಫಿಡವಿಟ್‌ನಲ್ಲಿ ಸತ್ಯವನ್ನು ಮುಚ್ಚಿಡುವುದು ಚುನಾವಣಾ ಕಾನೂನಿನ ಉಲ್ಲಂಘನೆಯಾಗಿದೆ” ಎಂದು ಹೇಳಿ ಮಲ್ಹೋತ್ರಾ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಿತು.

ರಾವತ್ ಅವರು ೨೦೨೩ ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದರು. ಆದರೆ ೨೦೨೪ ರ ಲೋಕಸಭಾ ಚುನಾವಣೆಗೂ ಮುನ್ನ ಅವರು ಭಾಜಪಗೆ ಸೇರ್ಪಡೆಗೊಂಡರು ಮತ್ತು ಅವರನ್ನು ಭಾಜಪ ಮುಖ್ಯಮಂತ್ರಿ ಮೋಹನ್ ಯಾದವ್ ಸರಕಾರದಲ್ಲಿ ನೇರವಾಗಿ ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಯಿತು. ತದನಂತರ ವಿಜಯಪುರ ಕ್ಷೇತ್ರದಲ್ಲಿ ಈ ಉಪಚುನಾವಣೆ ನಡೆದಿತ್ತು.

ಉಚ್ಚ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು

ಉಚ್ಚ ನ್ಯಾಯಾಲಯದ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮಲ್ಹೋತ್ರಾ ಅವರ ಪರ ವಕೀಲ ಪ್ರತೀಪ್ ಬಿಸೋರಿಯಾ ಮಾಹಿತಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಸಂವಿಧಾನ ಅಪಾಯದಲ್ಲಿದೆ ಎಂದು ಯಾವಾಗಲೂ ಕೂಗಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ತಮ್ಮ ಪಕ್ಷದ ಅಭ್ಯರ್ಥಿಯ ಈ ಸಂವಿಧಾನ ವಿರೋಧಿ ಕೃತ್ಯದ ಬಗ್ಗೆ ಏಕೆ ಮೌನವಾಗಿದ್ದಾರೆ?