Balendra Shah : ಭಾರತ ವಿರೋಧಿ ಹೇಳಿಕೆ ನೀಡುವ ಬಾಲೇಂದ್ರ ಶಾ ನೇಪಾಳದ ಪ್ರಧಾನಿಯಾಗುವ ಹೊಸ್ತಿಲಲ್ಲಿ!

ಸಾರ್ವತ್ರಿಕ ಚುನಾವಣೆಯಲ್ಲಿ ಶಾ ಅವರ ಪಕ್ಷ ಬಹುಮತದತ್ತ!

ಕಾಠ್ಮಂಡು (ನೇಪಾಳ) – ನೇಪಾಳದಲ್ಲಿ ನಡೆದ ಪ್ರತಿಭಟನೆಗಳ ಕಾಲದಲ್ಲಿ ನಾಯಕನಾಗಿ ಹೊರಹೊಮ್ಮಿದ ರಾಪರ್ (ಸಂಗೀತಗಾರ) ಮತ್ತು ರಾಜಕಾರಣಿ ಬಾಲೇಂದ್ರ ಶಾ ಇತಿಹಾಸ ನಿರ್ಮಿಸುವ ಹಾದಿಯಲ್ಲಿದ್ದಾರೆ. ದೇಶದ ರಾಷ್ಟ್ರೀಯ ಚುನಾವಣೆಯಲ್ಲಿ ಬಾಲೇಂದ್ರ ಶಾ ಅವರ ‘ರಾಷ್ಟ್ರೀಯ ಸ್ವತಂತ್ರ ಪಕ್ಷ’ದ ಅಲೆ ಎದ್ದಿದೆ. ಮಾರ್ಚ್ ೬ ರಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಧ್ಯಾಹ್ನದ ವೇಳೆಗೆ ಈ ಪಕ್ಷವು ೧೦೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಎರಡನೇ ಸ್ಥಾನದಲ್ಲಿರುವ ನೇಪಾಳಿ ಕಾಂಗ್ರೆಸ್ ಕೇವಲ ೧೨ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕೆ.ಪಿ. ಓಲಿ ಅವರ ಪಕ್ಷವು ಕೇವಲ ೯ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ‘೩೫ ವರ್ಷದ ಬಾಲೇಂದ್ರ ಶಾ ನೇಪಾಳದ ಅತ್ಯಂತ ಕಿರಿಯ ಪ್ರಧಾನಿಯಾಗಲಿದ್ದಾರೆ’ ಎಂಬ ಚರ್ಚೆ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲೇಂದ್ರ ಶಾ ಪ್ರಧಾನಿಯಾದರೆ ‘ಭಾರತದೊಂದಿಗಿನ ಸಂಬಂಧದ ಮೇಲೆ ಯಾವ ಪರಿಣಾಮ ಬೀರಬಹುದು?’ ಎಂಬ ಪ್ರಶ್ನೆ ಉದ್ಭವಿಸಿದೆ.

ಬಾಲೇಂದ್ರ ಶಾ ಯಾರು ?

ಬಾಲೇಂದ್ರ ಶಾ ಅವರು ಕಾಠ್ಮಂಡುವಿನ ಸರ್ಕಾರಿ ಆಯುರ್ವೇದ ವೈದ್ಯರ ಕುಟುಂಬದಲ್ಲಿ ಜನಿಸಿದರು. ಅವರ ಇಂಜಿನಿಯರಿಂಗ್ ಶಿಕ್ಷಣವು ಕಾಠ್ಮಂಡುವಿನಲ್ಲಿಯೇ ಪೂರ್ಣಗೊಂಡಿತು. ಮುಂದೆ ಅವರು ಭಾರತದ ಕರ್ನಾಟಕ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (VTU) ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇಂಜಿನಿಯರಿಂಗ್ ಮುಗಿಸಿದ ನಂತರ ಅವರು ಸಂಗೀತ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ನಿರ್ಧರಿಸಿ ‘ರಾಪರ್’ ಆಗಿ ಪ್ರಸಿದ್ಧಿ ಪಡೆದರು. ತಮ್ಮ ಹಾಡುಗಳ ಮೂಲಕ ಅವರು ನೇಪಾಳದ ರಾಜಕೀಯ ವ್ಯವಸ್ಥೆಯನ್ನು ಟೀಕಿಸುತ್ತಿದ್ದರು. ೨೦೨೨ ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಇವರು, ಪಕ್ಷೇತರ ಅಭ್ಯರ್ಥಿಯಾಗಿ ೬೧,೭೬೭ ಮತಗಳಿಂದ ಕಾಠ್ಮಂಡು ಮೇಯರ್ ಚುನಾವಣೆಯಲ್ಲಿ ಜಯಗಳಿಸಿದರು. ಕಳೆದ ವರ್ಷ ನಡೆದ ಪ್ರತಿಭಟನೆಗಳ ನಂತರ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ರಾಜೀನಾಮೆ ನೀಡಿದ ಮೇಲೆ ಬಾಲೇಂದ್ರ ಶಾ ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯರಾದರು.

ಭಾರತ ವಿರೋಧಿ ಹೇಳಿಕೆಗಳ ಇತಿಹಾಸ

ಬಾಲೇಂದ್ರ ಶಾ ಅವರು ಈ ಹಿಂದೆ ಹಲವು ಬಾರಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನೇಪಾಳ ಸರ್ಕಾರವನ್ನು ‘ಭಾರತದ ಗುಲಾಮ’ ಎಂದು ಕರೆದಿದ್ದರು. ಮೇಯರ್ ಆಗಿದ್ದಾಗ ಭಾರತೀಯ ಚಲನಚಿತ್ರ ‘ಆದಿಪುರುಷ್’ ಪ್ರದರ್ಶನವನ್ನು ಕಾಠ್ಮಂಡುವಿನಲ್ಲಿ ನಿಷೇಧಿಸಿದ್ದರು. ಚಿತ್ರದಲ್ಲಿ ಸೀತಾ ಮಾತೆಯನ್ನು ಭಾರತದ ಮಗಳೆಂದು ಕರೆದಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದರು (ನೇಪಾಳದ ನಂಬಿಕೆಯಂತೆ ಸೀತೆ ನೇಪಾಳದ ಮಗಳು). ೨೦೨೫ ರಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾರತ, ಅಮೆರಿಕ ಮತ್ತು ಚೀನಾ ದೇಶಗಳ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದರು. ನಂತರ ಆ ಸಂದೇಶವನ್ನು ತೆಗೆದುಹಾಕಲಾಯಿತಾದರೂ, ಅದರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.

ಭಾರತದೊಂದಿಗೆ ಬಾಲೇಂದ್ರ ಶಾ ಸಂಬಂಧ ಹೇಗೆ ಇಟ್ಟುಕೊಳ್ಳಬಹುದು ?

ಬಾಲೇಂದ್ರ ಶಾ ಅವರ ವಿದೇಶಾಂಗ ನೀತಿಯ ಬಗ್ಗೆ ರಾಷ್ಟ್ರೀಯ ಸ್ವತಂತ್ರ ಪಕ್ಷದ ವಕ್ತಾರ ಮನೀಶ್ ಝಾ ಅವರು ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ನೇಪಾಳವು ಕಠಿಣ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ. ನಮ್ಮ ಪಕ್ಷವು ತಟಸ್ಥ ಮತ್ತು ಸಮತೋಲಿತ ವಿದೇಶಾಂಗ ನೀತಿಯನ್ನು ಅನುಸರಿಸಲಿದೆ. ನಾವು ಯಾವುದೇ ಒಂದು ದೇಶದ ಪರವಾಗಿ ವಾಲುವುದಿಲ್ಲ. ಸುಶಾಸನವೇ ನಮ್ಮ ಗುರಿ. ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಆಡಳಿತದ ಮೇಲೆ ನಾವು ಗಮನ ಹರಿಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.