ಮಾದಕ ವಸ್ತುವಿನ ಅಮಲಿನಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯಿಂದ ಕ್ಷಮೆಯಾಚನೆ! -Security Guard Assaulted Trimbakeshwar Temple

ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿನ ಘಟನೆ


ನಾಶಿಕ್ – ಜಿಲ್ಲೆಯ ಪ್ರಸಿದ್ಧ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಜಗಳ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಯಿತು. ಈ ಪ್ರಕರಣದ ಕುರಿತು ದೇವಸ್ಥಾನದ ಕಾರ್ಯದರ್ಶೀಗಳು, ‘ಭಕ್ತನು ಮಾದಕ ವಸ್ತುವಿನ ಅಮಲಿನಲ್ಲಿದ್ದನು ಮತ್ತು ಆತನೇ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದನು’, ಎಂದು ತಿಳಿಸಿದರು. ವಿಚಾರಣೆಯ ನಂತರ ಭಕ್ತನು ಮಾದಕ ವಸ್ತುಗಳನ್ನು ಸೇವಿಸಿರುವುದು ದೃಢಪಟ್ಟಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ, ಸಂಬಂಧಪಟ್ಟ ವ್ಯಕ್ತಿಯು ಸುಶಿಕ್ಷಿತ ಕುಟುಂಬಕ್ಕೆ ಸೇರಿದವನಾಗಿದ್ದು ಅಮಲಿನಲ್ಲಿ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಆ ವ್ಯಕ್ತಿಯು ಲಿಖಿತವಾಗಿ ಕ್ಷಮೆಯಾಚಿಸಿದ ನಂತರ ಈ ಪ್ರಕರಣವನ್ನು ಅಂತ್ಯಗೊಳಿಸಲಾಯಿತು.

ದೇವಸ್ಥಾನ ಟ್ರಸ್ಟನ ವಿಶ್ವಸ್ತರಾದ ಕೈಲಾಸ ಘುಲೆ ಅವರು ಮಾತನಾಡಿ, ಸಂಬಂಧಪಟ್ಟ ವ್ಯಕ್ತಿಯು ದರ್ಶನದ ಸಾಲಿನಲ್ಲಿ ಮುಂಜಾನೆ ೫.೪೫ ಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಧ್ಯಾನಸ್ಥನಾಗಿ ಕುಳಿತಿದ್ದರಿಂದ ಇತರ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ತೊಂದರೆಯಾಗುತ್ತಿತ್ತು. ಭದ್ರತಾ ಸಿಬ್ಬಂದಿಯೊಬ್ಬರು ಆ ವ್ಯಕ್ತಿಯನ್ನು ತಡೆದಾಗ, ಆತನು ಮಡಿ ವಸ್ತ್ರವನ್ನು ಧರಿಸದೇ ಗರ್ಭಗುಡಿಯೊಳಗೆ ನುಗ್ಗಲು ಪ್ರಯತ್ನಿಸಿದನು ಮತ್ತು ಭದ್ರತಾ ಸಿಬ್ಬಂದಿಯ ಕುತ್ತಿಗೆ ಪಟ್ಟಿ ಹಿಡಿದು ಗಾಯಗೊಳಿಸಿದನು. ಆಗ ಇತರ ರಕ್ಷಕರು ಆ ವ್ಯಕ್ತಿಯನ್ನು ಹೊರಗೆ ಕರೆತಂದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ದೇವಸ್ಥಾನಕ್ಕೆ ಹೋಗುವಾಗ ಮಾದಕ ವಸ್ತುಗಳನ್ನು ಸೇವಿಸದಿರುವುದು ಹಿಂದೂಗಳ ಕರ್ತವ್ಯವಾಗಿದೆ. ಯಾರಿಗೆ ದೇವಸ್ಥಾನದ ಈ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲವೋ, ಅವರಿಗೆ ದೇವಸ್ಥಾನದ ಆವರಣದಲ್ಲಿ ಪ್ರವೇಶವನ್ನು ನಿರಾಕರಿಸುವುದೇ ಇದಕ್ಕೆ ಸರಿಯಾದ ಪರಿಹಾರವಾಗಿದೆ. ಯುವಕರು ವ್ಯಸನಗಳಿಂದ ದೂರವಿದ್ದು ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಪ್ರಯತ್ನಿಸಬೇಕು!
  • ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ‘ಆಡಳಿತಗಾರ’ರಾಗಿ ಕೆಲಸ ಮಾಡದೆ ‘ಧರ್ಮರಕ್ಷಕ’ರಾಗಿ ದೇವಸ್ಥಾನದ ಪಾವಿತ್ರ್ಯವನ್ನು ರಕ್ಷಿಸುವುದು ಅಪೇಕ್ಷಿತವಾಗಿದೆ!