ಅಟ್ಟುಕಲ್ ಪೊಂಗಲ ಹಬ್ಬದ ಪ್ರಯುಕ್ತ ಹಿಂದೂ ಭಕ್ತರಿಗಾಗಿ ಮಸೀದಿ ಮತ್ತು ಮನೆಗಳನ್ನು ಮುಕ್ತವಾಗಿಡಿ! – Attukal Pongala Festival

ಕೇರಳದ ಇಮಾಮ್‌ರಿಂದ ಮುಸ್ಲಿಮರಿಗೆ ಕರೆ

(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು)

ತಿರುವನಂತಪುರಂ (ಕೇರಳಂ) – ಕೇರಳದ ಪಾಲಯಂನ ಇಮಾಮ್ ವಿ.ಪಿ. ಸುಹೈಬ್ ಮೌಲ್ವಿ ಅವರು, “ಮುಂಬರುವ ಅಟ್ಟುಕಲ್ ಪೊಂಗಲ ಹಬ್ಬದ ನಿಮಿತ್ತ ಹಿಂದೂ ಭಕ್ತರಿಗಾಗಿ ಮಸೀದಿ ಮತ್ತು ಮುಸ್ಲಿಮರ ಮನೆಗಳನ್ನು ಮುಕ್ತವಾಗಿಡಬೇಕು. ಅವರಿಗಾಗಿ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು,” ಎಂದು ಕರೆ ನೀಡಿದ್ದಾರೆ. ಇವರ ಈ ಉಪಕ್ರಮವನ್ನು ಅನೇಕರು ಶ್ಲಾಘಿಸಿದ್ದಾರೆ.

ತಿರುವನಂತಪುರಂನಲ್ಲಿರುವ ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಆಚರಿಸಲಾಗುವ ‘ಅಟ್ಟುಕಲ್ ಪೊಂಗಲ’ 10 ದಿನಗಳ ಪ್ರಸಿದ್ಧ ಉತ್ಸವವಾಗಿದೆ. ಈ ವರ್ಷ ಈ ಉತ್ಸವವು ಮಾರ್ಚ್ 3 ರಿಂದ ಪ್ರಾರಂಭವಾಗುತ್ತಿದೆ. ಇದು ವಿಶ್ವದ ಮಹಿಳೆಯರ ಅತಿದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ವಿವಿಧ ವಯೋಮಾನದ ಲಕ್ಷಾಂತರ ಮಹಿಳೆಯರು ರಾಜಧಾನಿ ನಗರದಲ್ಲಿ ಒಟ್ಟುಗೂಡಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಾರೆ.

ಇಸ್ಲಾಂ ವಿರೋಧಿ ಭಾವನೆ ಮತ್ತು ದ್ವೇಷಕ್ಕೆ ಪ್ರೀತಿ ಹಾಗೂ ಭ್ರಾತೃತ್ವದಿಂದಲೇ ಉತ್ತರಿಸಬಹುದು!

ಡಾ. ಸುಹೈಬ್ ಮೌಲ್ವಿ ಅವರು ತಮ್ಮ ಸಂದೇಶದಲ್ಲಿ, “ಕಳೆದ ವರ್ಷದಂತೆ ಈ ಬಾರಿಯೂ ಪೊಂಗಲ ಹಬ್ಬವು ರಂಜಾನ್ ಅವಧಿಯಲ್ಲೇ ಬರುತ್ತಿದೆ. ಪೊಂಗಲಕ್ಕೆ ಬರುವ ಸಹೋದರಿಯರು ಮತ್ತು ಅವರ ಮಕ್ಕಳೊಂದಿಗೆ ರಂಜಾನ್‌ನ ಸಂತೋಷ, ಭ್ರಾತೃತ್ವ ಮತ್ತು ಪ್ರೀತಿಯನ್ನು ಹಂಚಿಕೊಳ್ಳುವ ಅವಕಾಶ ನಮಗೆ ಸಿಗಲಿ. ಅವರಿಗೆ ಕುಡಿಯುವ ನೀರು ಮತ್ತು ರಂಜಾನ್ ಖಾದ್ಯಗಳನ್ನು ಒದಗಿಸಬೇಕು. ಅವರು ವಿಶ್ರಮಿಸಲು ವ್ಯವಸ್ಥೆ ಮಾಡಬೇಕು. ನಮ್ಮ ಮಸೀದಿ ಮತ್ತು ಮನೆಗಳು ಅವರಿಗಾಗಿ ಸಂಪೂರ್ಣವಾಗಿ ಮುಕ್ತವಾಗಿರುವಂತಹ ವಾತಾವರಣ ನಿರ್ಮಿಸಬೇಕು. ಇದು ನಮಗೆ ಪ್ರೀತಿ ಮತ್ತು ಭ್ರಾತೃತ್ವವನ್ನು ಪ್ರದರ್ಶಿಸುವ ಅವಕಾಶವಾಗಿದೆ. ದೇಶ ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಇಸ್ಲಾಂ ವಿರೋಧಿ ಭಾವನೆ ಮತ್ತು ದ್ವೇಷಕ್ಕೆ ಕೇವಲ ಪ್ರೀತಿ ಮತ್ತು ಭ್ರಾತೃತ್ವದಿಂದ ಮಾತ್ರ ಪರಿಣಾಮಕಾರಿಯಾಗಿ ಉತ್ತರಿಸಲು ಸಾಧ್ಯ. ಈ ಉತ್ಸವವು ಪರಸ್ಪರ ಸಾಮರಸ್ಯದ ಸಂದೇಶವನ್ನು ಬಲಪಡಿಸುವ ಅವಕಾಶವಾಗಿದೆ,” ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಂದೆ ಇಫ್ತಾರ್ ಮತ್ತು ಈದ್ ಸಂದರ್ಭದಲ್ಲಿ ಹಿಂದೂಗಳು ತಮ್ಮ ದೇವಸ್ಥಾನಗಳು ಹಾಗೂ ಮನೆಗಳನ್ನು ಮುಕ್ತವಾಗಿಡಬೇಕು ಎಂದು ಮುಸ್ಲಿಮರು ಅಥವಾ ಪ್ರಗತಿಪರರೆಂದು ಕರೆಸಿಕೊಳ್ಳುವವರು ಬೇಡಿಕೆ ಇಟ್ಟರೆ ಆಶ್ಚರ್ಯಪಡಬೇಕಿಲ್ಲ!